ತಮಿಳಿನಲ್ಲಿ ಮೋಹನ್ ಲಾಲ್ ಹಾಗೂ ವಿಜಯ್ ಅಭಿನಯಿಸಿದ್ದ ‘ಜಿಲ್ಲಾ’ ಚಿತ್ರವನ್ನು ತೆಲುಗಿಗೆ ರೀಮೆಕ್ ಮಾಡಲು ಸಿದ್ಧತೆ ನಡೆಯುತ್ತಿದೆ. ನಟರಾದ ದಗ್ಗುಬಾಟಿ ವೆಂಕಟೇಶ್ ಹಾಗೂ ರವಿತೇಜ ಅವರನ್ನು ಈ ಚಿತ್ರಕ್ಕೆ ಆರಿಸುವ ಸಾಧ್ಯತೆ ಇದೆಯಂತೆ.
ಈ ಚಿತ್ರವನ್ನು ರಿಮೇಕ್ ಮಾಡುವ ಕುರಿತು ಈ ಹಿಂದೆ ತೆಲುಗಿನ ಖ್ಯಾತ ನಟರೊಬ್ಬರ ಜತೆ ಮಾತುಕತೆ ನಡೆಸಲಾಗಿದ್ದು, ಅವರಿಗೆ ಈ ಚಿತ್ರದ ಕತೆ ಇಷ್ಟವಾಗಲಿಲ್ಲವಂತೆ. ಇದರಿಂದಾಗಿ ಚಿತ್ರದ ರಿಮೇಕ್ ಆಲೋಚನೆಯನ್ನು ಮುಂದಕ್ಕೆ ಹಾಕಲಾಯಿತು. ಮತ್ತೆ ಈಗ ಇದೇ ಚಿತ್ರಕತೆಗೆ ನಟರಾದ ವೆಂಕಟೇಶ್ ಹಾಗೂ ರವಿತೇಜ ಅವರೊಂದಿಗೆ ಮಾತಕತೆ ನಡೆಸಿದ್ದು, ಅವರು ಈ ಚಿತ್ರದಲ್ಲಿ ಅಭಿನಯಿಸಲು ಆಸಕ್ತಿ ತೋರಿದ್ದಾರೆ ಎಂದು ಮೂಲಗಳು ಐಎಎನ್ಎಸ್ ಸುದ್ದಿಸಂಸ್ಥೆಗೆ ತಿಳಿಸಿವೆ.
ಈ ಚಿತ್ರದ ರಿಮೇಕ್ ಹಕ್ಕನ್ನು ನಟ ಪವನ್ ಕಲ್ಯಾಣ್ ಅವರ ಆಪ್ತ ಸ್ನೇಹಿತ ಶರತ್ ಮಾರರ್ ಅವರು ಪಡೆದುಕೊಂಡಿದ್ದಾರೆ. ಹಿಂದಿ ಭಾಷೆಯ ‘ಓ ಮೈ ಗಾಡ್’ ಚಿತ್ರದ ರಿಮೇಕ್ ಹಕ್ಕನ್ನು ಪಡೆದು ಶರತ್ ತೆಲುಗಿನಲ್ಲಿ ‘ಗೋಪಾಲ ಗೋಪಾಲ’ ಚಿತ್ರವನ್ನು ನಿರ್ಮಿಸಿದ್ದರು. ಈ ಚಿತ್ರದಲ್ಲಿಯೂ ನಟ ವೆಂಕಟೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
‘ಗೋಪಾಲ ಗೋಪಾಲ’ ಚಿತ್ರದ ಬಿಡುಗಡೆಗೂ ಮುನ್ನ ‘ಜಿಲ್ಲಾ’ ಚಿತ್ರದ ರಿಮೇಕ್ ಬಗ್ಗೆ ವೆಂಕಟೇಶ್ ಅವರೊಂದಿಗೆ ಮಾತುಕತೆ ನಡೆಸಲಾಗಿದ್ದು, ಇದರಲ್ಲಿ ನಟಿಸಲು ವೆಂಕಟೇಶ್ ಆಗಲೇ ಆಸಕ್ತಿ ತೋರಿದ್ದರು. ಅಲ್ಲದೆ ನಟ ರವಿತೇಜ ಅವರೊಂದಿಗೆ ಅಭಿನಯಿಸಲು ಯಾವುದೇ ಅಭ್ಯಂತರ ಇಲ್ಲವೆಂದಿದ್ದಾರೆಂದು ತಿಳಿದು ಬಂದಿದೆ.
‘ಜಿಲ್ಲಾ’ ಚಿತ್ರದ ರಿಮೇಕ್ ಅನ್ನು ನಿರ್ದೇಶಕ ವೀರು ಪೊಟ್ಲಾ ನಿರ್ದೇಶಿಸಲಿದ್ದು, ಏಪ್ರಿಲ್ನಲ್ಲಿ ಚಿತ್ರ ಸೆಟ್ ಏರಲಿದೆ.
