ಮಂಗಳೂರು: ವಿಶ್ವ ಹಿಂದೂ ಪರಿಷತ್‌ನ ಸುವರ್ಣ ಮಹೋತ್ಸವದ ಅಂಗವಾಗಿ ಮಾ. 1ರಂದು ಮಂಗಳೂರಿನಲ್ಲಿ ನಡೆಯುವ ಹಿಂದೂ ಸಮಾಜೋತ್ಸವಕ್ಕೆ ಸಿದ್ಧತೆಗಳು ಭರದಿಂದ ನಡೆದಿದ್ದು, 1 ಲಕ್ಷಕ್ಕಿಂತಲೂ ಅಧಿಕ ಜನರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ತಿಳಿಸಿದ್ದಾರೆ.
ಗುರುವಾರ ನಗರದ ಬಂಟ್ಸ್ ಹಾಸ್ಟೇಲ್ ಸಮೀಪವಿರುವ ಸಮಾಜೋತ್ಸವ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳು ಕೇಸರಿ ತೋರಣ ಮತ್ತು ಭಗವಾಧ್ವಜಗಳಿಂದ ಶೃಂಗಾರಗೊಂಡಿವೆ. ಈಗಾಗಲೇ ಬೂತ್, ಗ್ರಾಮ ಮತ್ತು ತಾಲೂಕು ಮಟ್ಟದಲ್ಲಿ, ಮನೆ ಮನೆ ಪ್ರಚಾರ, ಜನ ಸಂಪರ್ಕ ಸಭೆ, ದ್ವಿಚಕ್ರ ವಾಹನ ಜಾಥಾ ಮೂಲಕ ಪ್ರಚಾರ ಕಾರ್ಯ ನಡೆದಿದೆ. ಅನೇಕ ಹಿಂದೂ ಸಂಘಟನೆಗಳು, ಸಂಘ ಸಂಸ್ಥೆಗಳು ಬೆಂಬಲಿಸಿವೆ ಎಂದು ತಿಳಿಸಿದರು.
2 ಗಂಟೆಗೆ ಶೋಭಾ ಯಾತ್ರೆ :
ಸಮಾಜೋತ್ಸವವದ ಅಂಗವಾಗಿ ರವಿವಾರ ಅಪರಾಹ್ನ 2 ಗಂಟೆಗೆ ನಗರದ ಅಂಬೇಡ್ಕರ್ (ಜ್ಯೋತಿ) ವೃತ್ತದಿಂದ ಕೇಂದ್ರ ಮೈದಾನಕ್ಕೆ ಆಕರ್ಷಕ ಶೋಭಾ ಯಾತ್ರೆ ನಡೆಯಲಿದ್ದು, ಸ್ತಬ್ದ ಚಿತ್ರ ವಾಹನ, ಚೆಂಡೆ ವಾದನ, ಭಜನಾ ತಂಡ, ಸಾಂಸ್ಕೃತಿಕ ಮತ್ತು ರಾಷ್ಟ್ರ ಪ್ರೇಮ ಬಿಂಬಿಸುವ ವೇಷ ಭೂಷಣಗಳು ಭಾಗವಹಿಸಲಿವೆ. ವೇದಿಕೆಯಲ್ಲಿ ಅಪರಾಹ್ನ 3 ಗಂಟೆಗೆ ದೇಶ ಭಕ್ತಿ ಗೀತೆ ಹಾಗೂ 4 ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಗಲಿದೆ ಎಂದರು.
13 ಅಡಿ ಎತ್ತರದ, 52 ಅಡಿ ಅಗಲದ ಬೃಹತ್ ವೇದಿಕೆ :
ಕೇಂದ್ರ ಮೈದಾನದಲ್ಲಿ 13 ಅಡಿ ಎತ್ತರದ, 52 ಅಡಿ ಅಗಲದ ಬೃಹತ್ ವೇದಿಕೆ ಸಿದ್ಧಗೊಳ್ಳುತ್ತಿದ್ದು, ಈ ವೇದಿಕೆಗೆ ಕರ್ನಾಟಕದಲ್ಲಿ ವಿಶ್ವ ಹಿಂದೂ ಪರಿಷತ್ತನ್ನು ಬೆಳೆಸಿದ ದಿ| ಸದಾನಂದ ಕಾಕಡೆ ಅವರ ಹೆಸರನ್ನಿಡಲಾಗಿದೆ. ವೇದಿಕೆ ಹಿಂಬದಿ ಸು. 300 ಚದರಡಿಯ ಬೃಹತ್ ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗುವುದು ಎಂದು ಅವರು ವಿವರಿಸಿದರು.
ಸಾಧ್ವಿ ಬಾಲಿಕಾ ಸರಸ್ವತಿ ಅವರಿಂದ ದಿಕ್ಸೂಚಿ ಭಾಷಣ :
ವಿಶ್ವ ಹಿಂದೂ ಪರಿಷತ್‌ನ ಕೇಂದ್ರೀಯ ಮಾರ್ಗದರ್ಶಕ ಮಂಡಳಿ ಸದಸ್ಯೆ, ಮಧ್ಯ ಪ್ರದೇಶದ ಸಾಧ್ವಿ ಬಾಲಿಕಾ ಸರಸ್ವತಿ ದಿಕ್ಸೂಚಿ ಭಾಷಣ ಮಾಡುವರು. ಅಧ್ಯಕ್ಷತೆಯನ್ನು ವಿ.ಹಿಂ.ಪ. ರಾಷ್ಟ್ರೀಯ ಸ್ವರ್ಣ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ವಹಿಸಲಿದ್ದು, ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು. ಜಿಲ್ಲೆಯ ಅನೇಕ ಸಾಧು ಸಂತರು, ಮಠಾಧೀಶರು, ಗಣ್ಯರು ಭಾಗವಹಿಸಲಿದ್ದಾರೆ. ಗೋಮಾತೆಗೆ ಪೂಜೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ.
3,000ಕ್ಕೂ ಮಿಕ್ಕಿ ಸ್ವಯಂ ಸೇವಕರು : ಪಾನಕ, ನೀರು, ಬನ್ ವ್ಯವಸ್ಥೆ
ಸಮಾಜೋತ್ಸವದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಶೋಭಾ ಯಾತ್ರೆಯಲ್ಲಿ ಮತ್ತು ಕೇಂದ್ರ ಮೈದಾನದಲ್ಲಿ ನೀರು, ಪಾನಕ ಮತ್ತು ಬನ್ ವಿತರಿಸಲಾಗುವುದು. ಸಮಾಜೋತ್ಸವದ ಯಶಸ್ವಿಯಾಗಿ 3,000ಕ್ಕೂ ಮಿಕ್ಕಿ ಕಾರ್ಯಕರ್ತರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದ್ದೇಶ : ಹಿಂದೂಗಳಲ್ಲಿ ಧೈರ್ಯ ತುಂಬುವುದು
ಬಹು ಸಂಖ್ಯಾಕರಾದ ಹಿಂದೂಗಳನ್ನು ಎರಡನೇ ದರ್ಜೆ ಪ್ರಜೆಗಳಾಗಿ ಕಾಣಲಾಗುತ್ತಿದೆ ಎಂಬ ಭಾವನೆ ಕೆಲವು ಮಂದಿ ಯುವಜನರಲ್ಲಿದೆ. ವಿ.ಹಿಂ. ಪರಿಷತ್‌ನ 50 ವರ್ಷಗಳ ಸಾಧನೆಯ ಅವಲೋಕನ ಹಾಗೂ ಭವಿಷ್ಯದಲ್ಲಿ ಎದುರಾಗುವ ಸವಾಲು ಎದುರಿಸಲು ಸಿದ್ಧತೆ ನಡೆಸುವುದು ಮತ್ತು ಹಿಂದೂಗಳಲ್ಲಿ ಧೈರ್ಯ ತುಂಬುವುದು ಸಮಾಜೋತ್ಸವದ ಉದ್ದೇಶ. ಸಮಾಜೋತ್ಸವ ಶಕ್ತಿಯ ಪ್ರದರ್ಶನವಲ್ಲ, ದಬ್ಟಾಳಿಕೆ ಪ್ರಯತ್ನವಲ್ಲ. ಆಕ್ರಮಣ ಧೋರಣೆ ನಮಗಿಲ್ಲ. ಎಲ್ಲರೂ ಸಮಾನತೆಯಿಂದ, ಸಹಬಾಳ್ವೆಯಿಂದ, ಸ್ವಾಭಿಮಾನದಿಂದ ಬದುಕಬೇಕೆನ್ನುವುದು ನಮ್ಮ ಚಿಂತನೆ ಎಂದು ಎಂ.ಬಿ. ಪುರಾಣಿಕ್ ವಿವರಿಸಿದರು.
ಕಾರ್ಯಕ್ರಮವನ್ನು ಹಾಳುಗೆಡಹಲು ಪ್ರಯತ್ನ :
ಸಮಾಜೋತ್ಸವದ ಅಂಗವಾಗಿ ಎಲ್ಲೆಡೆ ದೀಪಾವಳಿ ಆಚರಣೆ ಮಾದರಿಯ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ ಎಂದು ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ವಿಜಯ ವಿಠಲನಾಥ ಶೆಟ್ಟಿ ತಿಳಿಸಿದರು.
ಕಾರ್ಯಕ್ರಮವನ್ನು ಹಾಳುಗೆಡಹಲು ಕೆಲವರಿಂದ ಪ್ರಯತ್ನ ನಡೆಯುತ್ತಿದ್ದು, ಅವರ ಯತ್ನ ಫಲಿಸಲಾರದು. ಪಾನೀರ್‌ನಲ್ಲಿ ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ಹಿಂದೂಗಳು ಯಾರೂ ಕಲ್ಲು ತೂರಿರಲಾರರು ಎಂದು ಅವರು ಹೇಳಿದರು.
ಗೊಂದಲಕ್ಕೆ ಕಾರಣವಾಗುವ ಫ್ಲೆಕ್ಸ್‌ಗಳನ್ನು ಎಲ್ಲಿಯೂ ಹಾಕಿಲ್ಲ, ಹಾಕುವುದೂ ಇಲ್ಲ. ನಮ್ಮನ್ನು ಉದ್ರೇಕಿಸುವ ಯತ್ನ ನಡೆಯುತ್ತಿದೆ. ನಮ್ಮ ಕಾರ್ಯಕರ್ತರ ತಾಳ್ಮೆ ಪರೀಕ್ಷಿಸಲಾಗುತ್ತಿದೆ. ಆದರೆ ನಾವು ತಾಳ್ಮೆಯಿಂದ ಸಹಿಸಿಕೊಂಡಿದ್ದೇವೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ತಿಳಿಸಿದರು. ಸಮಾಜೋತ್ಸವದಲ್ಲಿ ಭಾಗವಹಿಸುವ ಸಾರ್ವಜನಿಕರನ್ನು ಸಾಗಿಸಲು 500 ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ಸಮಾಜೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗದೀಪ್ ಡಿ. ಸುವರ್ಣ, ಪ್ರಧಾನ ಸಂಚಾಲಕ ಹಾಗೂ ಬಜರಂಗ ದಳದ ಪ್ರಾಂತ ಸಂಯೋಜಕ ಶರಣ್ ಪಂಪ್‌ವೆಲ್, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕೊಟ್ಟಾರಿ, ಕೋಶಾಧಿಕಾರಿ ಮನೋಹರ್ ಸುವರ್ಣ, ವಿ.ಹಿಂ.ಪ. ಕಾರ್ಯದರ್ಶಿ ಗೋಪಾಲ್ ಕುತ್ತಾರ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.




