ಬೆಂಗಳೂರು: ಮಹದೇವಪುರ ಸಮೀಪದ ಪೈ ಲೇಔಟ್‌ನಲ್ಲಿ ಸೋಮವಾರ ರಾತ್ರಿ ಫ್ಲ್ಯಾಟ್‌ಗೆ ನುಗ್ಗಿದ ನಾಲ್ವರು ದುಷ್ಕರ್ಮಿಗಳು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ನಿವೃತ್ತ ಅಧಿಕಾರಿ ರಾಜಪ್ಪ ಪಿಳ್ಳೈ (70) ಅವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ರಾಜಪ್ಪ ಅವರ ಪತ್ನಿ ಉಷಾ ಪಿಳ್ಳೈ ಅವರ ಮೇಲೂ ಹಲ್ಲೆ ನಡೆಸಿರುವ ದುಷ್ಕರ್ಮಿಗಳು, ನಂತರ 3 ಲಕ್ಷ ನಗದು ಹಾಗೂ 250 ಗ್ರಾಂ ಚಿನ್ನಾಭರಣ ದೋಚಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಕಾನ್‌ಸ್ಟೆಬಲ್ ಸಂಗಪ್ಪ ಮತ್ತು ಗೃಹ ರಕ್ಷಕ ಪ್ರಕಾಶ್ ಅವರು ಆರೋಪಿಗಳ ಪೈಕಿ ಸುರೇಂದ್ರ ಕಡಕ್(22) ಎಂಬಾತನನ್ನು ಬಂಧಿಸಿ ಹಣ–ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಕೇರಳ ಮೂಲದ ರಾಜಪ್ಪ, ಡಿಆರ್‌ಡಿಒ ಆಡಳಿತಾಧಿಕಾರಿಯಾಗಿ 2003ರಲ್ಲಿ ನಿವೃತ್ತಿ ಹೊಂದಿದ್ದರು. 30 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಅವರು, ಪೈ ಲೇಔಟ್‌ನಲ್ಲಿ ನಾಲ್ಕು ಅಂತಸ್ತಿನ ಅಪಾರ್ಟ್‌ಮೆಂಟ್ ನಿರ್ಮಿಸಿದ್ದಾರೆ. ಅದರಲ್ಲಿ ಒಟ್ಟು 14 ಫ್ಲ್ಯಾಟ್‌ಗಳಿದ್ದು, ದಂಪತಿ ಮೊದಲ ಮಹಡಿಯಲ್ಲಿ ನೆಲೆಸಿದ್ದರು.
ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಅವರ ಮಗಳು, ಎರಡು ವರ್ಷಗಳ ಹಿಂದೆ ಸರವಣ ಎಂಬುವರನ್ನು ವಿವಾಹವಾಗಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೆಲೆಸಿದ್ದಾರೆ. ಮಗ ರಾಬಿನ್, ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದಾರೆ. ರಾಜಪ್ಪ ಅವರು 20 ದಿನಗಳ ಹಿಂದಷ್ಟೇ ನೇಪಾಳ ಮೂಲದ ಅರುಣ್ ಎಂಬಾತನನ್ನು ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿಯನ್ನಾಗಿ ನೇಮಕ ಮಾಡಿಕೊಂಡಿದ್ದರು. ವೃದ್ಧ ದಂಪತಿ ಮಾತ್ರ ಮನೆಯಲ್ಲಿರುವ ಬಗ್ಗೆ ಅರಿತುಕೊಂಡ ಆತ, ಹಣ– ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದ. ಇದಕ್ಕಾಗಿಯೇ ನೇಪಾಳದಿಂದ ಮೂವರು ಸ್ನೇಹಿತರನ್ನು ನಗರಕ್ಕೆ ಕರೆಸಿಕೊಂಡಿದ್ದ.
ಮೂರು ದಿನಗಳ ಹಿಂದೆ ನಗರಕ್ಕೆ ಬಂದಿದ್ದ ಸುರೇಂದ್ರ ಹಾಗೂ ಇನ್ನಿಬ್ಬರು, ಅಂದರಹಳ್ಳಿಯ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಪೂರ್ವಯೋಜಿತ ಸಂಚಿನಂತೆ ಸೋಮವಾರ ರಾತ್ರಿ ಅವರು 12.45ಕ್ಕೆ ಅಪಾರ್ಟ್‌ಮೆಂಟ್ ಬಳಿ ತೆರಳಿದ್ದಾರೆ. ಆಗ ಅಲ್ಲಿ ಕಾವಲಿಗಿದ್ದ ಆರೋಪಿ ಅರುಣ್, ಆ ಮೂವರನ್ನೂ ಕಾಂಪೌಂಡ್‌ನ ಒಳಗೆ ಕರೆದುಕೊಂಡು ಗೇಟ್‌ಗೆ ಬೀಗ ಹಾಕಿದ್ದಾನೆ.
ನಂತರ ಅರುಣ್, ಆರೋಪಿಗಳನ್ನು ಮರೆಯಲ್ಲಿ ನಿಲ್ಲಿಸಿ ಬಾಗಿಲು ಬಡಿದಿದ್ದಾನೆ. ಗಾಜಿನ ಕಿಟಕಿ ಮೂಲಕ ಅರುಣ್‌ನನ್ನು ನೋಡಿದ ರಾಜಪ್ಪ, ತಮ್ಮ ಭದ್ರತಾ ಸಿಬ್ಬಂದಿ ಎಂಬ ಕಾರಣಕ್ಕೆ ಬಾಗಿಲು ತೆರೆದಿದ್ದಾರೆ. ಈ ಹಂತದಲ್ಲಿ ನಾಲ್ಕೂ ಮಂದಿ ಏಕಾಏಕಿ ಮನೆಗೆ ನುಗ್ಗಿ ಒಳಗಿನಿಂದ ಚಿಲಕ ಹಾಕಿಕೊಂಡಿದ್ದಾರೆ.
ರಾಜಪ್ಪ ಕೂಗಿಕೊಳ್ಳುತ್ತಿದ್ದಂತೆಯೇ ಅವರ ತಲೆ, ಕುತ್ತಿಗೆ ಹಾಗೂ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ನಾಲ್ಕು ಬಾರಿ ಇರಿದ ದುಷ್ಕರ್ಮಿಗಳು, ಕೋಣೆಯಿಂದ ಹೊರ ಬಂದ ಉಷಾ ಅವರಿಗೂ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಅವರ ತುಟಿ–ಮೂಗಿಗೆ ಪೆಟ್ಟಾಗಿದ್ದು, ನಿತ್ರಾಣರಾಗಿ ಕುಸಿದು ಬಿದ್ದಿದ್ದಾರೆ. ನಂತರ ದುಷ್ಕರ್ಮಿಗಳು, ಅಲ್ಮೆರಾದಲ್ಲಿದ್ದ ಆಭರಣ ಮತ್ತು ಹಣ ದೋಚಿ ಪರಾರಿಯಾಗಿದ್ದಾರೆ.
ಗೇಟ್ ತೆರೆದು ಓಡುತ್ತಿದ್ದ ದುಷ್ಕರ್ಮಿಗಳನ್ನು ಕಂಡು ಅನುಮಾನಗೊಂಡ ಗಸ್ತಿನಲ್ಲಿದ್ದ ಪೊಲೀಸರು, ಅವರನ್ನು ಬೆನ್ನಟ್ಟಿದ್ದಾರೆ. ಈ ಹಂತದಲ್ಲಿ ಸುರೇಂದ್ರ ಸಿಕ್ಕಿ ಬಿದ್ದಿದ್ದು, ಉಳಿದವರು ಪರಾರಿಯಾಗಿದ್ದಾರೆ. ಆತನನ್ನು ವಿಚಾರಿಸಿದಾಗ ಕೊಲೆ ಸಂಗತಿ ಬಾಯ್ಬಿಟ್ಟಿದ್ದಾನೆ. ನಂತರ ಪೊಲೀಸ್ ಸಿಬ್ಬಂದಿ, ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಕೊಕರ್ ಕೊಲೆ: ಇನ್ನೂ ಸುಳಿವಿಲ್ಲ
2014ರ ನ.23ರಂದು ಹುಸ್ಕೂರುಗೇಟ್‌ನ ಬಂಗಲೆಗೆ ನುಗ್ಗಿ ನಿವೃತ್ತ ಏರ್ ಕಮೋಡರ್ ಪರ್ವೇಜ್ ಕೊಕರ್ ಅವರನ್ನು ಕೊಲೆ ಮಾಡಿದ್ದ ದುಷ್ಕರ್ಮಿಗಳ ಬಗ್ಗೆ ಇನ್ನೂ ಸುಳಿವು ಲಭ್ಯವಾಗಿಲ್ಲ. ‘ಮೃತರ ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು, ಹಿಂದಿನ ಸಹೋದ್ಯೋಗಿಗಳು ಸೇರಿದಂತೆ 150ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಲಾಗಿದೆ.
ಅಲ್ಲದೆ, ಘಟನಾ ದಿನ ಅವರ ಮನೆಗೆ ಸಮೀಪದ ಟವರ್‌ಗಳಿಂದ ಸಂಪರ್ಕ ಪಡೆದಿದ್ದ ಸುಮಾರ 750 ಮೊಬೈಲ್ ಸಂಖ್ಯೆಗಳನ್ನೂ ಪರಿಶೀಲಿಸಲಾಗಿದೆ. ಆದರೆ, ಆರೋಪಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಕೇಂದ್ರ ವಲಯದ ಐಜಿಪಿ ಅರುಣ್ ಚಕ್ರವರ್ತಿ ಅವರು 15 ದಿನಗಳ ಹಿಂದೆ ಪುನಃ ಸ್ಥಳ ಪರಿಶೀಲನೆ ನಡೆಸಿ, ಮತ್ತೆ ವಿಶೇಷ ತಂಡಗಳನ್ನು ರಚಿಸಿದ್ದಾರೆ. ಶೋಧ ಕಾರ್ಯ ನಡೆಯುತ್ತಿದೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ
ಆರೋಪಿ ಬಿ.ಕಾಂ ಪದವೀಧರ
‘ವಶಕ್ಕೆ ಪಡೆದಿರುವ ಆರೋಪಿ ಸುರೇಂದ್ರನನ್ನು ವಿಚಾರಣೆ ನಡೆಸಿ ಮಾಹಿತಿ ಪಡೆಯಲಾಗುತ್ತಿದೆ. ಆತ ಕಠ್ಮಂಡುವಿನ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ಪದವೀಧರನಾಗಿದ್ದಾನೆ. ಅರುಣ್ ಜತೆಗಿದ್ದ ಮತ್ತಿಬ್ಬರ ಹೆಸರು–ವಿಳಾಸ ಗೊತ್ತಿಲ್ಲ ಎಂದು ಹೇಳುತ್ತಿದ್ದಾನೆ. ಆರೋಪಿಗಳ ಪತ್ತೆಗೆ ಹಲಸೂರು ಉಪವಿಭಾಗದ ಎಸಿಪಿ ಜಿ.ಬಿ.ಮಂಜುನಾಥ್ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.
