ಕುಂದಾಪುರ : ಗಂಗೊಳ್ಳಿ ಬಂದರಿನಲ್ಲಿ ಫಿಶಿಂಗ್ ಬೋಟ್ ಮೀನುಗಾರರು ನಡೆಸುತ್ತಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದುಕೊಂಡಿದ್ದು, ಮಂಗಳವಾರ ಎಲ್ಲಾ ಬೋಟುಗಳು ಮೀನುಗಾರಿಕೆಗೆ ತೆರಳಿವೆ.
ಸೋಮವಾರ ಸಂಜೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸುದರ್ಶನ್ ಹಾಗೂ ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಬ್ಬಣ್ಣ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಫಿಶಿಂಗ್ ಬೋಟ್ ಮೀನುಗಾರರು ನಡೆಸುತ್ತಿದ್ದ ಮುಷ್ಕರ ಸೋಮವಾರ ಸಂಜೆ ವೇಳೆಗೆ ಅಂತ್ಯಗೊಂಡಿದೆ. ಫಿಶಿಂಗ್ ಬೋಟ್ ಮೀನುಗಾರರ ಬಹುತೇಕ ಬೇಡಿಕೆಗಳಿಗೆ ಆಳ ಸಮುದ್ರ (ಫೋರ್ನೈಟ್) ಮೀನುಗಾರಿಕೆಯ ಬೋಟ್ ಮಾಲೀಕರು ಒಪ್ಪಿಕೊಂಡಿರುವ ಹಿನ್ನಲೆಯಲ್ಲಿ ಪ್ರಕರಣ ಸುಖಾಂತ್ಯ ಕಂಡಿದೆ. ಸಭೆಯಲ್ಲಿ ಫಿಶಿಂಗ್ ಬೋಟ್ ಹಾಗೂ ಫೋರ್ನೈಟ್ ಬೋಟ್ನ ಮಾಲೀಕರು ಪಾಲ್ಗೊಂಡಿದ್ದರು.
