ಗಂಗೊಳ್ಳಿ : ಕಳೆದ 89 ವರ್ಷಗಳಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಗೊಂಡಿದ್ದ ಸಿಂಡಿಕೇಟ್ ಬ್ಯಾಂಕ್ ಇಂದು 4 ಲಕ್ಷದ 38 ಸಾವಿರ ಕೋಟಿ ವ್ಯವಹಾರ ನಡೆಸುತ್ತಿದೆ. ಬ್ಯಾಂಕು ದೇಶಾದ್ಯಂತ ಸುಮಾರು 3473 ಶಾಖೆಗಳನ್ನು ಹೊಂದಿದ್ದು, ವಾರ್ಷಿಕ 2 ಸಾವಿರ ಕೋಟಿ ಲಾಭ ಪಡೆದುಕೊಂಡಿದೆ. ರಿಸರ್ವ್ ಬ್ಯಾಂಕಿನ ನಿರ್ದೇಶನದಂತೆ ಎಲ್ಲಾ ಶಾಖೆಗಳಲ್ಲಿ ಎಟಿಎಂ ಕೇಂದ್ರ ತೆರೆಯಲಾಗುತ್ತಿದ್ದು, ಗ್ರಾಹಕರ ಸಹಕಾರದಿಂದ ದೇಶದೆಲ್ಲೆಡೆ ಪಸರಿಸಿ ಸದೃಢವಾಗಿ ಬೆಳೆದು ನಿಂತಿದೆ. ಉತ್ತಮ ನೀತಿ ನಡತೆ ಮೂಲಕ ಭದ್ರ ಬುನಾದಿಯೊಂದಿಗೆ ಸುದೃಢವಾಗಿ ಬೆಳೆದು ನಿಂತಿರುವ ಬ್ಯಾಂಕು ಇಂದು ದೇಶದಲ್ಲೇ ಎರಡನೇ ಉತ್ತಮ ಬ್ಯಾಂಕ್ ಎಂಬ ಪ್ರಶಸ್ತಿ ಭಾಜನವಾಗಿದೆ ಎಂದು ಬ್ಯಾಂಕಿನ ಫೀಲ್ಡ್ ಜನರಲ್ ಮ್ಯಾನೇಜರ್ ಕೆ.ಟಿ.ರೈ ಹೇಳಿದರು.
ಸೋಮವಾರ ಗಂಗೊಳ್ಳಿಯ ಮುಖ್ಯರಸ್ತೆಯ ರಥಬೀದಿ ಸಮೀಪದ ವೆಂಕಟೇಶ ಕೃಪಾ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವ ಸಿಂಡಿಕೇಟ್ ಬ್ಯಾಂಕಿನ ಗಂಗೊಳ್ಳಿ ಶಾಖೆಯ ಮತ್ತು ಬ್ಯಾಂಕಿನ ಎಟಿಎಂ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಊರು, ಕುಟುಂಬ, ಸಿಬ್ಬಂದಿಗಳನ್ನು ಕಟ್ಟಿ ಬೆಳೆಸಿದ ಸಿಂಡಿಕೇಟ್ ಬ್ಯಾಂಕ್ ಸುಮಾರು 72 ವರ್ಷಗಳ ಹಿಂದೆ ಗಂಗೊಳ್ಳಿಯಲ್ಲಿ ಶಾಖೆಯಲ್ಲಿ ಶಾಖೆಯನ್ನು ತೆರೆದು ಇಂದಿಗೂ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಗ್ರಾಹಕರಿಗೆ ಇನ್ನಷ್ಟು ಅನುಕೂಲತೆ ಕಲ್ಪಿಸಲು, ಉತ್ತಮ ಸೇವೆ ನೀಡುವ ಸಲುವಾಗಿ ಶಾಖೆಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಗ್ರಾಹಕರು ಹೆಚ್ಚಿನ ಸಹಕಾರ ನೀಡುವ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಬೇಕು. ಬ್ಯಾಂಕಿನ ಸಿಬ್ಬಂದಿಗಳು ಗ್ರಾಹಕರೊಂದಿಗೆ ಉತ್ತಮ ಸಂಬಂಧವನ್ನಿಟ್ಟುಕೊಂಡು ಗ್ರಾಹಕರಿಗೆ ಸ್ಪಂದಿಸಬೇಕು ಎಂದರು.
ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ ನೂತನ ಸ್ಥಳಾಂತರಿತ ಶಾಖೆಯನ್ನು ಉದ್ಘಾಟಿಸಿದರು. ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಬೈಲೂರು ಮಂಜುನಾಥ ಶೆಣೈ ಎಟಿಎಂ ಕೇಂದ್ರವನ್ನು ಉದ್ಘಾಟಿಸಿದರು. ಕಟ್ಟಡದ ಮಾಲೀಕ ಭಾಸ್ಕರ ವಿಠಲ ಶೆಣೈ ಬ್ಯಾಂಕಿನ ಭದ್ರತಾ ಕೋಶವನ್ನು ಉದ್ಘಾಟಿಸಿದರು. ಉದ್ಯಮಿಗಳಾದ ಎಂ.ಎಂ.ಸುವರ್ಣ, ಎಚ್.ಗಣೇಶ ಕಾಮತ್ ಹಾಗೂ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಶುಭ ಹಾರೈಸಿದರು. ಇದೇ ಸಂದರ್ಭ ಬೈಲೂರು ಮಂಜುನಾಥ ಶೆಣೈ, ರೇಷ್ಮಾ ಆರ್.ಖಾರ್ವಿ ಮತ್ತು ಜಿ.ಭಾಸ್ಕರ ವಿಠಲ ಶೆಣೈ ಅವರನ್ನು ಬ್ಯಾಂಕಿನ ಪರವಾಗಿ ಸನ್ಮಾನಿಸಲಾಯಿತು.
ಬ್ಯಾಂಕಿನ ಜನರಲ್ ಮ್ಯಾನೇಜರ್ ಆನಂದ ನಾಯಕ್ ಸ್ವಾಗತಿಸಿದರು. ಆಫೀಸರ್ ವೃಂದಾ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು. ಶಾಖಾ ಪ್ರಬಂಧಕ ಎನ್.ಕಣ್ಣನ್ ವಂದಿಸಿದರು.

ಸಿಂಡಿಕೇಟ್ ಬ್ಯಾಂಕ್ ಎಟಿಎಂ ಉದ್ಘಾಟನೆ
ಗಂಗೊಳ್ಳಿ : ಗಂಗೊಳ್ಳಿಯ ಮುಖ್ಯರಸ್ತೆಯ ರಥಬೀದಿ ಸಮೀಪದ ವೆಂಕಟೇಶ ಕೃಪಾ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವ ಸಿಂಡಿಕೇಟ್ ಬ್ಯಾಂಕಿನ ಗಂಗೊಳ್ಳಿ ಶಾಖೆಯ ವಠಾರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಿಂಡಿಕೇಟ್ ಬ್ಯಾಂಕಿನ ಎಟಿಎಂ ಕೇಂದ್ರವನ್ನು ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಬೈಲೂರು ಮಂಜುನಾಥ ಶೆಣೈ ಉದ್ಘಾಟಿಸಿದರು.
ಬ್ಯಾಂಕಿನ ಫೀಲ್ಡ್ ಜನರಲ್ ಮ್ಯಾನೇಜರ್ ಕೆ.ಟಿ.ರೈ, ಬ್ಯಾಂಕಿನ ಜನರಲ್ ಮ್ಯಾನೇಜರ್ ಆನಂದ ನಾಯಕ್, ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ, ಉದ್ಯಮಿಗಳಾದ ಎಂ.ಎಂ.ಸುವರ್ಣ, ಎಚ್.ಗಣೇಶ ಕಾಮತ್, ಭಟ್ಕಳ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಜೀದ್ ಚೌಗುಲೆ, ಶಾಖಾ ಪ್ರಬಂಧಕ ಎನ್.ಕಣ್ಣನ್ ಮೊದಲಾದವರು ಉಪಸ್ಥಿತರಿದ್ದರು.
