ಮುಂಬಯಿ : ಮಹಾನಗರದ ಜನಪ್ರಿಯ ಪತ್ರಕರ್ತ, ಸಮಾಜ ಸೇವಕ ಹಾಗೂ ಸಂಘಟಕ, ಕುಲಾಲ ಪ್ರತಿಷ್ಟಾನ, ಮಂಗಳೂರು ಇದರ ಸ್ಥಾಪಕ ಬಿ. ದಿನೇಶ್ ಕುಲಾಲ್ ಅವರಿಗೆ ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿ ಸಂಸ್ಥೆ ನವಚಿಂತನ್ ಮತ್ತು ಸಾವಧಾನ್ ಇವರು ಜ. 30 ರಂದು ಕಾಂದಿವಲಿ (ಪ.) ಸಮಾಜ ಹಾಲ್ ನಲ್ಲಿ ಜರಗಿದ ಬಹುಬಾಷೀಯ ಕವಿ ಸಮ್ಮೇಳನದಲ್ಲಿ ’ಪತ್ರಕಾರ್ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.
ಕಳೆದ ಒಂದೂವರೆ ದಶಕಗಳಿಂದ ಕರ್ನಾಟಕ ಮಲ್ಲದ ವರದಿಗಾರರಾಗಿರುವ ಕುಲಾಲ್ ಅವರು ತೆಗೆದ ಛಾಯಾಚಿತ್ರಗಳು (ಫೋಟೊಗಳು) ಕಳೆದ ಕೆಲವು ವರ್ಷಗಳಿಂದ ಸುಮಾರು ಹತ್ತು ವೆಬ್ ಮಾಧ್ಯಮಗಳಲ್ಲದೆ, ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದು ಅದು ಈ ತನಕ ಒಂದೂವರೆ ಲಕ್ಷಕ್ಕೂ ಮೀರಿದ್ದು ಅವರು ಫೋಟೋ ಜರ್ನಲಿಸ್ಟ್ ಆಗಿ ಕೂಡಾ ಸಾಧನೆ ಮಾಡಿರುವರು. ಇದಕ್ಕೂ ಮೊದಲು ಯುವ ಪತ್ರಕರ್ತ ದಿನೇಶ್ ಕುಲಾಲ್ ರ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಯನ್ನು ಮೆಚ್ಚಿ ಕೆಲವು ತುಳು-ಕನ್ನಡ ಸಂಘಟನೆಗಳು ಸನ್ಮಾನಿಸಿದೆ. ರವೀಂದ್ರ ದುಭೆ, ಅಜಯ್ ಸಿಂಗ್ ಮತ್ತು ಆಶಿಶ್ ಶಿರ್ಕೆ ’ಪತ್ರಕಾರ್ ರತ್ನ’ ಪ್ರಶಸ್ತಿ ಪಡೆದ ಇತರ ಬಾಷೆಯ ಪತ್ರಕರ್ತರು.
ಕವಿ, ನಾಟಕಕಾರ ಸಾದಯ ಮತ್ತು ಕವಿ ಅರುಣ್ ರಾವ್ ಉಳ್ಳಾಲ್ ಅವರಿಗೆ ’ಕವಿ ರತ್ನ’ ಪುರಸ್ಕಾರ ವನ್ನು ನೀಡಿ ಗೌರವಿಸಲಾಯಿತು. ಸ್ಥಳೀಯ ಸಮಾಜ ಸೇವಕ, ಉದ್ಯಮಿ ನರಸಿಂಹ ಎಮ್. ಪೂಜಾರಿ ಯವರಿಗೆ ’ಸಮಾಜ ರತ್ನ’ ಪುರಸ್ಕಾರವನ್ನು ನೀಡಲಾಗಿದೆ.
ಸ್ಥಳೀಯ ರಾಜಕಾರಿಣಿಗಳು, ಸಮಾಜ ಸೇವಕರು ಹಾಗೂ ಪ್ರಸಿದ್ಧ ಕವಿಗಳ ಉಪಸ್ಥಿತಿಯಲ್ಲಿ ಈ ಎಲ್ಲಾ ಪಶಸ್ತಿ, ಪುರಸ್ಕಾರವನ್ನು ಪ್ರಧಾನಿಸಲಾಯಿತು. ಉಪಸ್ಥಿತರಿದ್ದ ದೇಶದ ವಿವಿಧ ಬಾಗಗಳಿಂದ ಆಗಮಿಸಿದ ಕವಿಗಳು ವಿವಿಧ ಬಾಷೆಯಲ್ಲಿ ತಮ್ಮ ಕವನಗಳನ್ನು ಮಂಡಿಸಿದರು.
ಮುಖ್ಯ ಅತಿಥಿಯಾಗಿ ಪ್ರಸಿದ್ಧ ಮರಾಠಿ ಕವಿ ಡಾ. ಶಾಂತಾರಾಮ್ ಕಾರಂಡೆ, ವಿಶೇಷ ಅತಿಥಿಗಳಾಗಿ ಪತ್ರಕರ್ತ, ಲೇಖಕ ಶ್ರೀನಿವಾಸ ಜೋಕಟ್ಟೆ, ಸಂತೋಷ್ ಝ್ಹಾ, ರತ್ನಾಕರ ಪೂಜಾರಿ, ಅಶ್ವಿನ್ ಕುಮಾರ್ ಮಿಶ್ರಾ, ಅನಿರುದ್ದ ಪಾಂಡೇಯ, ಸರಸ್ವತಿ ವಂದನಾ, ರಾದೇಶ್ಯಾಮ್ ದ್ವಿವೇದಿ, ಆಯೋಜಕರಾದ ಈಶ್ವರ ಹೈದರಾಬಾದಿ ಮೊದಲಾದವರು ಉಪಸ್ಥಿತರಿದ್ದರು.
ವರದಿ : ಈಶ್ವರ ಎಂ. ಐಲ್







