ಮನೋರಂಜನೆ

ಚಿರಂಜೀವಿ ಸರ್ಜಾ ಮುಖ್ಯ ಭೂಮಿಕೆಯ ರುದ್ರ ತಾಂಡವನಿಗೆ ನಾಯಕರಿಬ್ಬರು

Pinterest LinkedIn Tumblr

chiru

ಚಿರಂಜೀವಿ ಸರ್ಜಾ ಮುಖ್ಯ ಭೂಮಿಕೆಯ ರುದ್ರ ತಾಂಡವ ಚಿತ್ರದಲ್ಲಿ ಮದರಂಗಿ ಖ್ಯಾತಿಯ ಕೃಷ್ಣ ಕೂಡ ನಟಿಸಿದ್ದಾರೆ. ನಾಯಕನಷ್ಟೇ ಪ್ರಮುಖ ಪಾತ್ರ ಮಾಡಿದ್ದರಿಂದ, ಕೃಷ್ಣ ಕೂಡ ಈ ಸಿನಿಮಾಗೆ ನಾಯಕ ಅಂತಿದ್ದಾರೆ ನಿರ್ದೇಶಕ ಗುರು ದೇಶಪಾಂಡೆ.

‘ಪುಟ್ಟದಾದರೂ ದೊಡ್ಡ ಶಕ್ತಿ ಇರುವಂಥ ಪಾತ್ರವದು. ಇಡೀ ಕತೆಗೆ ತಿರುವು ಕೊಡುವುದೇ ಈ ಪಾತ್ರದ ಮೂಲಕ. ನಾಯಕನ ಗೆಳೆಯನಾಗಿ ಕೃಷ್ಣ ಕಾಣಿಸಿಕೊಂಡರೂ, ಅವರಿಗೂ ಎರಡು ಸಾಹಸ ಸನ್ನಿವೇಶಗಳಿವೆ. ನಾಯಕಿ ಇದ್ದಾಳೆ. ಹಾಡೊಂದು ಇದೆ. ಈ ಹಾಡನ್ನು ಪುನೀತ್ ರಾಜ್‌ಕುಮಾರ್ ಹಾಡಿದ್ದಾರೆ. ಹೀಗಾಗಿ ಕೃಷ್ಣ ಕೂಡ ಕತೆಯ ಮತ್ತೊಬ್ಬ ಹೀರೋ’ ಅಂತಾರೆ ನಿರ್ದೇಶಕರು.

ನಾಯಕನಾಗುವುದಕ್ಕಿಂತ ಮೊದಲು ಕೃಷ್ಣ ಹಲವು ಸಿನಿಮಾಗಳಲ್ಲಿ ಪುಟ್ಟ ಪಾತ್ರ ಮಾಡಿದ್ದಿದೆ. ನಾಯಕನಾದ ನಂತರ ಇದೇ ಮೊದಲ ಬಾರಿಗೆ ಇಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂತ ಇವರ ಖಾಲಿಯಾಗಿ ಕೂತಿಲ್ಲ. ಹಲವು ಸಿನಿಮಾಗಳಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ತಮ್ಮದೇ ನಿರ್ಮಾಣದ ಮತ್ತೊಂದು ಚಿತ್ರಕ್ಕೂ ರೆಡಿ ಆಗುತ್ತಿದ್ದಾರೆ. ಸಹೋದರನ ಸಿನಿಮಾದ ಪ್ರಮೋಷನ್‌ನಲ್ಲಿ ಬಿಝಿ ಆಗಿದ್ದಾರೆ. ‘ರುದ್ರ ತಾಂಡವ ಸಿನಿಮಾದ ಮೂಲ ಚಿತ್ರವನ್ನು ನಾನು ನೋಡಿದ್ದೆ. ನಾಯಕನ ಗೆಳೆಯನ ಪಾತ್ರಕ್ಕೆ ಎಷ್ಟು ಮಹತ್ವ ಇದೆ ಎಂದು ತಿಳಿದುಕೊಂಡೆ. ನಿಜಕ್ಕೂ ಅದು ಅಪರೂಪದ ಪಾತ್ರ. ನನ್ನ ಮೇಲಿನ ನಂಬಿಕೆ ಇಟ್ಟು ನಿರ್ದೇಶಕರು ಈ ಪಾತ್ರ ಕೊಟ್ಟಿದ್ದರು. ಅವರ ನಂಬಿಕೆಯನ್ನು ಉಳಿಸಿಕೊಂಡಿದ್ದೇನೆ ಎಂಬ ಭಾವನೆ ನನ್ನದು. ಅಪ್ಪ ಮತ್ತು ಮಗನ ಬಾಂಧವ್ಯಕ್ಕೆ ಹೇಳಿ ಮಾಡಿಸಿದ ಚಿತ್ರವದು. ಗೆಳೆಯನಾಗಿ ನಾನು ನನ್ನ ಕೆಲಸ ಮಾಡುತ್ತೇನೆ’ ಅಂತಾರೆ ಕೃಷ್ಣ.

ಅಂದ್ಹಾಗೆ ಈ ಚಿತ್ರಕ್ಕೆ ಚಿರಂಜೀವಿ ಸರ್ಜಾ ನಾಯಕನಾದರೆ, ರಾಧಿಕಾ ಕುಮಾರಸ್ವಾಮಿ ನಾಯಕಿ. ಗಿರೀಶ್ ಕಾರ್ನಾಡ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜಾ ಹುಲಿ ಯಶಸ್ಸಿನ ನಂತರ ನಿರ್ದೇಶಕ ಗುರು ದೇಶಪಾಂಡೆ ಕೈಗೆತ್ತಿಕೊಂಡ ಸಿನಿಮಾ ಇದು. ಈಗಾಗಲೇ ಸಿನಿಮಾದ ಹಾಡುಗಳು ಬಿಡುಗಡೆ ಆಗಿದ್ದು, ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ.

Write A Comment