ಮನೋರಂಜನೆ

ನಟನ ಬದುಕಿನ ಸಿನಿಮೀಯ ತಿರುವುಗಳು: ಹರ್ಷ್ ಅರ್ಜುನ್ ಕಲಾಲ್

Pinterest LinkedIn Tumblr

harsha

ನಟನಾಗಬೇಕೆಂಬ ಹೆಬ್ಬಯಕೆಯಿದ್ದರೂ ಅಂಥ ಸುವರ್ಣಾವಕಾಶ ಕೂಡಿ ಬರಲು ಬರೋಬ್ಬರಿ ಹದಿನೈದು ವರ್ಷಗಳೇ ಕಾದ ತಾಳ್ಮೆ ನಟ ಹರ್ಷ್ ಅರ್ಜುನ್ ಕಲಾಲ್ ಅವರದು. ಪ್ರಾಥಮಿಕ ಶಾಲೆ ಹಂತದಲ್ಲೇ ನಟನೆಯತ್ತ ಒಲವು ಮೂಡಿಸಿಕೊಂಡಿದ್ದ ಹರ್ಷ್, ನಟನೆಯಲ್ಲಿ ತೊಡಗಿದ್ದು ಮಾತ್ರ ಇಪ್ಪತ್ತೈದನೇ ವಯಸ್ಸಿಗೆ. ಅದುವರೆಗೆ ಮನೆಯಲ್ಲಿರುವ ನಿಲುವುಗನ್ನಡಿಯೇ ಅವರ ನಟನೆಗೆ ಮೂಕ ಪ್ರೇಕ್ಷಕ.

ಬದುಕಿನ ಪಾತ್ರಧಾರಿಯಾಗಿ…
ಹರ್ಷ್ ಅವರ ಊರು ವಿಜಯಪುರ. ಓದಿದ್ದು ಬಿ.ಎ. ಅವರ ಹಿಂದೆ ದೊಡ್ಡ ಜೀವನಾನುಭವವೇ ಅಡಗಿದೆ. ಅದೇ ಕಾರಣಕ್ಕೆ ತಾನು ನಟನೆಯಲ್ಲಿ ತೊಡಗಿಸಿಕೊಳ್ಳಲು ತಡವಾಗಿದ್ದು ಎಂದು ಭಾವಿಸುತ್ತಾರೆ ಹರ್ಷ್. ಕುಟುಂಬದ ಆರ್ಥಿಕ ಕಾರಣಗಳಿಂದಾಗಿ ಎಕ್ಸ್‌ಟರ್ನಲ್ ಪಿಯುಸಿ ಓದುತ್ತ ಲಾಟರಿ ಟಿಕೆಟ್ ಮಾರುವವನಾಗಿ, ಜೊತೆ ಜೊತೆಯಲ್ಲೇ ಪರವಾನಗಿ ಇಲ್ಲದೆಯೇ ನಾಲ್ಕು ವರ್ಷ ಆಟೋ ರಿಕ್ಷಾ ಚಾಲಕನಾಗಿ, ಖಾಸಗಿ ಬಸ್ ಕಂಡಕ್ಟರ್‌ ಆಗಿ; ಹೀಗೆ ನಟನೆಗೆ ಶುರುವಿಡುವ ಮುನ್ನವೇ ಬದುಕಿನಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಮುಂದೆ ಪದವಿ ವಿದ್ಯಾರ್ಥಿಯಾಗಿ ಕಾಲೇಜಿಗೆ ಚಕ್ಕರ್ ಹೊಡೆದು, ಹೇಗೋ ಖಾಸಗಿ ವಾಹನ ಸಂಸ್ಥೆಯೊಂದರಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತ ಮನೆಗೆ ಉಪಕಾರಿಯಾದರು. ಈ ಅವಧಿಯಲ್ಲೇ ಅವರು ಡ್ರೆಸ್ಸಿಂಗ್ ಸೆನ್ಸ್, ಸಂವಹನ ಕಲೆ, ನಾಲ್ಕು ಜನರೊಂದಿಗೆ ಹೇಗೆ ಒಡನಾಡಬೇಕು ಎನ್ನುವುದನ್ನೆಲ್ಲ ಕಲಿತಿದ್ದು ಮತ್ತು ನಟನೆಯತ್ತ ಹೆಚ್ಚು ತುಡಿಯುತ್ತಿದ್ದುದು. ಆದರೆ ಒಂದೆರಡು ವರ್ಷಗಳಲ್ಲೇ ಆ ಸಂಸ್ಥೆ ಮುಚ್ಚಿಕೊಂಡಾಗ ದಿಕ್ಕು ತೋಚದಾದರು. ಆಗ, ತಾನು ನಟನೆಯನ್ನೇ ವೃತ್ತಿಯಾಗಿ ಸ್ವೀಕರಿಸಲು ಇದು ‘ರೈಟ್ ಟೈಮ್’ ಎಂದು ನಿರ್ಧರಿಸಿದ ಅವರು ಪ್ರಯಾಣ ಬೆಳೆಸಿದ್ದು ಸಾಣೇಹಳ್ಳಿಯತ್ತ. ಅದು ವರವೋ ಶಾಪವೋ ಎಂಬುದನ್ನು ಅವರಿನ್ನೂ ನಿರ್ಧರಿಸಿಲ್ಲ.

ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯಲ್ಲಿ ತಮ್ಮ ಇಪ್ಪತ್ತೈದನೇ ವಯಸ್ಸಿಗೆ, ಒಂದು ವರ್ಷದ ‘ಡಿಪ್ಲೊಮಾ ಇನ್ ಥಿಯೇಟರ್’ ಕೋರ್ಸ್ ಮುಗಿಸಿಕೊಂಡ ಹರ್ಷ್ ಕಲಿಕೆಯ ಸಂದರ್ಭದಲ್ಲಿ ಆರೆಂಟು ನಾಟಕಗಳಲ್ಲಿ ಅಭಿನಯಿಸಿದರು.

ಅದೃಷ್ಟ ತಂದ ‘ಅರಗಿಣಿ’
ಸಾಣೇಹಳ್ಳಿ ತೊರೆದು ಊರಲ್ಲಿ ಕಾಲ ನೂಕುತ್ತಿದ್ದಾಗ ಸುವರ್ಣ ವಾಹಿನಿಯ ‘ಅರಗಿಣಿ’ ಧಾರಾವಾಹಿ ತಂಡ ಹತ್ತು ದಿನಗಳ ಚಿತ್ರೀಕರಣಕ್ಕೆಂದು ವಿಜಯಪುರಕ್ಕೆ ಬಂದಾಗ ಹರ್ಷ್ ಆ ತಂಡದ ಸಂಪರ್ಕ ಸಾಧಿಸಿದ್ದರು. ಧಾರಾವಾಹಿಯ ಸಹ ನಿರ್ದೇಶಕರಾದ ಸೀತಾರಾಂ ಭಟ್ ಅವರು ಈ ಕಲಾಲ್‌ನಲ್ಲಿನ ಕಲೆ ಗುರ್ತಿಸಿ, ಮೂರು ನಿಮಿಷಗಳ ಅವಧಿಯ ಪಾತ್ರವೊಂದನ್ನು ನೀಡಿ ಮೊದಲ ಬಾರಿ ತೆರೆಯ ಮೇಲೆ ತಂದರು. ‘ಅರಗಿಣಿ’ ನಿರ್ದೇಶಕ ಶಶಿ ಅವರು ಮತ್ತೆ ‘ಅಮೃತವರ್ಷಿಣಿ’ ಧಾರಾವಾಹಿ ನಿರ್ಮಾಣದ ಸಂದರ್ಭದಲ್ಲಿ ಬೆಂಗಳೂರು ಬಸ್ ಹತ್ತುವಂತೆ ಹರ್ಷ್‌ಗೆ ಕರೆ ಕಳುಹಿಸಿದರು. ‘ಅಮೃತವರ್ಷಿಣಿ’ಯಲ್ಲಿ ಏಳು ಕಂತುಗಳಲ್ಲಿ ಖಳನ ಛಾಯೆಯಲ್ಲಿ ಕಾಣಸಿಕೊಂಡಿದ್ದು ಅವರ ಜೀವನದ ಮಹತ್ತರ ಘಟ್ಟ. ಈ ಮಧ್ಯೆ ಸುಮಾರು ಎಂಬತ್ತು ಆಡಿಷನ್‌ಗಳಿಗೆ ಅವರು ಹಾಜರಾಗಿದ್ದರು. ಅದರಲ್ಲಿ ಪೃಥ್ವಿರಾಜ್ ಕುಲಕರ್ಣಿ ಎಂಬ ನಿರ್ದೇಶಕರು ‘ಪರಿಣೀತಾ’ ಧಾರಾವಾಹಿಗಾಗಿ ನಡೆಸಿದ ಆಡಿಷನ್ ಹರ್ಷ್‌ಗೆ ಹರ್ಷವನ್ನು ಹೊತ್ತು ತಂದಿತ್ತು.

ಐವರು ಅಣ್ಣ–ತಮ್ಮಂದಿರಲ್ಲಿ ಹಿರಿಯನಾಗಿ, ನರಸಿಂಹ ಎಂಬ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಅವರದಾಗಿತ್ತು. ‘ನನ್ನಲ್ಲಿರುವ ಕಲಾವಿದನನ್ನು ಒರೆಗೆ ಹಚ್ಚುವ ಪಾತ್ರವಿದು’ ಎಂದು ಹೇಳಿಕೊಳ್ಳುತ್ತಾರೆ ಹರ್ಷ್. ಕಾರಣಾಂತರಗಳಿಂದ ಆ ಧಾರಾವಾಹಿ ಇತ್ತೀಚೆಗೆ ನಿಂತುಹೋಯಿತು. ಆದರೆ ಹರ್ಷ್ ಪಾಲಿಗೆ ಅವಕಾಶಗಳ ಬಾಗಿಲನ್ನು ತೆರೆಸಿತು. ಧಾರಾವಾಹಿ ಕಲಿಕೆಯ ಒಂದು ಮಜಲು ಎಂದುಕೊಂಡ ಹರ್ಷ್‌ಗೆ ಸಿನಿಮಾವೇ ಗುರಿ. ಧಾರಾವಾಹಿಯಲ್ಲಿ ಸಿಕ್ಕ ಜನಪ್ರಿಯತೆ ಚಿತ್ರರಂಗದಲ್ಲೂ ಸಹಾಯವಾಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ.

‘ಅಮೃತವರ್ಷಿಣಿ’ಯಿಂದ ‘ಮಹಾಕಾಳಿ’
‘ಅಮೃತವರ್ಷಿಣಿ’ ಅಭಿನಯವು ಹರ್ಷ್‌ಗೆ ಮಾಲಾಶ್ರೀ ಅಭಿನಯದ ‘ಮಹಾಕಾಳಿ’ ಚಿತ್ರದ ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ಸಹಕಾರಿಯಾಯಿತು. ‘ಮಹಾಕಾಳಿ’ಯಲ್ಲಿ ಚಿಕ್ಕದೊಂದು ಪಾತ್ರಕ್ಕೆ ಹರ್ಷ್ ಬಣ್ಣ ಹಚ್ಚಿದ್ದಾರೆ. ಸೀತಾರಾಂ ಭಟ್ ನಿರ್ದೇಶನದ ‘ಡೈನಮಿಕ್’ ಚಿತ್ರದಲ್ಲೂ ಖಳನ ಛಾಯೆಯಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ದೊಡ್ಡ ಅವಕಾಶ ‘ರುದ್ರತಾಂಡವ’. ಇಲ್ಲಿಯೂ ಅವರ ಪಾತ್ರದ್ದು ಖಳನ ಛಾಯೆ. ‘ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಮಾತುಗಳು ಕಡಿಮೆಯಿದ್ದರೂ ಚಿತ್ರದುದ್ದಕ್ಕೂ ಕಾಣಿಸಿಕೊಳ್ಳುತ್ತೇನೆ’ ಎಂದು ಖುಷಿ ವ್ಯಕ್ತಪಡಿಸುತ್ತಾರೆ.

ಕಟ್ಟುನಿಟ್ಟು ಡಯೆಟ್
ಚಿತ್ರರಂಗದಲ್ಲಿ ಫಿಟ್‌ನೆಸ್ ಮತ್ತು ಗ್ಲಾಮರ್‌ಗೆ ಇರುವ ಮಹತ್ವ ಗುರ್ತಿಸಿರುವ ಹರ್ಷ್ ದೇಹಾರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಾರೆ. ಸಾಧ್ಯವಾದಷ್ಟೂ ಮಟ್ಟಿಗೆ ಮನೆಯ ಅಡುಗೆ ಉಣ್ಣುತ್ತಾರೆ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮೂರು ಹೊತ್ತು ಬಿಸಿ ಬಿಸಿ ಚಪಾತಿ–ದಾಲ್ ತಿನ್ನುತ್ತಾರೆ. ಸೆಟ್‌ನಲ್ಲಿ ಕೂಡ ಚಪಾತಿಗೇ ಆದ್ಯತೆ. ಬೆಳಿಗ್ಗೆ 4–6 ಬೇಯಿಸಿದ ಮೊಟ್ಟೆ, ಸಂಜೆ ಹಸಿ ತರಕಾರಿ, ಹಣ್ಣುಗಳು.

ಸಂಜೆ ಒಂದು ತಾಸು ಕರಾಟೆ ಅಭ್ಯಾಸ ಮತ್ತು ಬೆಳಿಗ್ಗೆ ಅರ್ಧ ಗಂಟೆ ಜಿಮ್‌ನಲ್ಲಿ ಕಾಲ ಕಳೆವ ಹರ್ಷ್‌ಗೆ ಸಿಕ್ಸ್ ಪ್ಯಾಕ್ ವ್ಯಾಮೋಹ ಇಲ್ಲ. ಒಂದುವೇಳೆ ಪಾತ್ರಕ್ಕೆ ಅಗತ್ಯವಿದ್ದರೆ ದೇಹವನ್ನು ಹೇಗೆ ಬೇಕಾದರೂ ತಿದ್ದಲು ಅವರು ಸಿದ್ಧವಂತೆ. ಎರಡು ವರ್ಷ ಕರಾಟೆ, ಈಜು, ಕುದುರೆ ಸವಾರಿಯಂತಹ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

Write A Comment