
ಮುಂಬೈ, ಜ.18: ದೇಶಾದ್ಯಂತ ಹಂದಿ ಜ್ವರ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿದ್ದು , ನೆರೆಯ ಆಂಧ್ರದಲ್ಲಿ 18 ಜನ, ರಾಜಧಾನಿ ದೆಹಲಿಯಲ್ಲಿ 4, ರಾಜಸ್ಥಾನದಲ್ಲಿ 9, ಹರ್ಯಾಣದಲ್ಲಿ 8 ಮಂದಿ ಬಲಿಯಾಗುವುದರೊಂದಿಗೆ ತೀವ್ರ ಆತಂಕ ಸೃಷ್ಟಿಸಿದೆ. ದೇಶದಲ್ಲಿ ಇದುವರೆಗೆ 250ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಅವಿಭಜಿತ ಆಂಧ್ರ ಹಾಗೂ ರಾಜಧಾನಿ ದೆಹಲಿಯಲ್ಲೇ ತಲಾ 100 ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ದೇಶದಲ್ಲಿ ಒಟ್ಟಾರೆ ಸುಮಾರು 40 ಜನ ಹಂದಿ ಜ್ವರಕ್ಕೆ ಬಲಿಯಾಗಿದ್ದಾರೆ ಎಂದು ತಿಳಿಸಿರುವ ಆರೋಗ್ಯ ಸಚಿವಾಲಯ, ದೇಶಾದ್ಯಂತ ಹಂದಿ ಜ್ವರದ ಪರಿಣಾಮಕಾರಿ ನಿಯಂತ್ರಣಕ್ಕೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದೆ.
ರೋಗಪತ್ತೆ ಪರೀಕ್ಷೆಗಾಗಿ ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ ನಾಲ್ಕು ಪ್ರಯೋಗ ಶಾಲೆಗಳನ್ನು (ಲ್ಯಾಬೊರೇಟರಿ) ತೆರೆದಿದೆ. ಪ್ರಕರಣಗಳು ದೇಶದ ವಿವಿಧೆಡೆ ಗಣನೀಯವಾಗಿ ಹೆಚ್ಚುತ್ತಿರುವುದು ಕಳವಳಕಾರಿ ವಿಷಯವಾಗಿದೆ ಎಂದೂ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ದೇಶದಲ್ಲಿ ಪ್ರಕೃತಿ ಏರುಪೇರಿನಿಂದಾಗಿ ಏಕಾಏಕಿ ಉಷ್ಣಾಂಶ ಕುಸಿತಗೊಂಡು ಚಳಿ ಹೆಚ್ಚಾಗಿರುವುದೇ ಹಂದಿ ಜ್ವರ ರೋಗ ಉಲ್ಬಣಿಸಲು ಕಾರಣವಾಗಿದೆ ಎಂದು ಮುಂಬೈಯ ಭಾಟಿಯಾ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಹೇಮಂತ್ಠಾಕ್ರೆ ತಿಳಿಸಿದ್ದಾರೆ. ಪ್ರತಿ ಚಳಿಗಾಲದಲ್ಲೂ ಸಾಮಾನ್ಯವಾಗಿ ಇನ್ಫ್ಲುಯೆಂಜಾ ರೋಗ ಹೆಚ್ಚಾಗುತ್ತದೆ.
ಸಾಧಾರಣವಾಗಿ ಫ್ಲ್ಯೂ ಜ್ವರದಂತೆಯೇ ಇದೂ ಕೂಡ ರೋಗ ಲಕ್ಷಣಗಳನ್ನು ಹೊಂದಿದ್ದರೂ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆ ಇರುವವರು ಹಾಗೂ ಗರ್ಭಿಣಿಯರಿಗೆ ತೊಂದರೆ ಹೆಚ್ಚು ಎಂದು ಡಾ.ಹೇಮಂತ್ ತಿಳಿಸಿದ್ದಾರೆ.