
ಬಂಟ್ವಾಳ: ಜ.17: ಸಿದ್ಧಕಟ್ಟೆ-ಬಂಟ್ವಾಳ ತಾಲೂಕು ಜಯ ಸುವರ್ಣ ಅಭಿನಂದನಾ ಸಮಿತಿಯು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಭಾರತ್ ಬ್ಯಾಂಕ್ನ ಕಾರ್ಯಧ್ಯಕ್ಷ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಗೌರವಾಧ್ಯಕ್ಷ ಜಯ ಸಿ.ಸುವರ್ಣ ಅವರಿಗೆ ಸನ್ಮಾನಗೈದು ಅಭಿನಂದಿಸಿತು.
ಇಂದಿಲ್ಲಿ ಸೋಮವಾರ ಪೂರ್ವಾಹ್ನ ಸಿದ್ಧಕಟ್ಟೆ ಅಲ್ಲಿನ ಹರ್ಷಲಿ ಸಭಾಭವನದಲ್ಲಿ ಕರ್ನಾಟಕ ಸರಕಾರದ ಅರಣ್ಯ ಸಚಿವ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವರಿ ಮಂತ್ರಿ ಬಿ.ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ನೇರವೇರಿಸಲ್ಪಟ್ಟ ಸಮಾರಂಭದಲ್ಲಿ ನಗರಾಭಿವೃದ್ಧಿ ಸಚಿವ ವಿನಯ ಕುಮಾರ ಸೊರಕೆ, ಮೀನುಗಾರಿಕಾ ಮತ್ತು ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್, ಸಂಸದ ನಳಿನ್ಕುಮಾರ್ ಕಟೀಲು ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಜಯ ಸಿ.ಸುವರ್ಣ ಅವರನ್ನು ಅಭಿನಂದಿಸಿ ಗೌರವಿಸಿದರು. ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಮುಂಬಯಿಯ ಪ್ರಸಿದ್ಧ ಪುರೋಹಿತ ಕೆ.ಸದಾಶಿವ ಶಾಂತಿ, ಭಿವಂಡಿ ಕಾರ್ಪೊರೇಟರ್ ಸಂತೋಷ್ ಎಂ.ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಬಿಲ್ಲವರ ಮಹಾಮಂಡಲ ವಕ್ತಾರ ಹರಿಕೃಷ್ಣ ಬಂಟ್ವಾಳ, ದ.ಕ.ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರ ಮತ್ತು ವಿಶೇಷ ಆಹ್ವಾನಿತರಾಗಿ ಮೂಡಬಿದ್ರಿ ಪುರಸಭೆ ಸದಸ್ಯ ಸುರೇಶ್ ಕೋಟ್ಯಾನ್ ಮೂಡಬಿದ್ರೆ, ಶ್ರೀ ಗುರುನಾರಯಣ ಬ್ರಹ್ಮ ಶ್ರೀ ಸೇವಾ ಸಂಘ ಸಿದ್ಧಕಟ್ಟೆ ಅಧ್ಯಕ್ಷ ಗೋಪಾಲ ಬಂಗೇರ, ಬಂಟರ ಸಂಘ ಸಿದ್ಧಕಟ್ಟೆ ಅಧ್ಯಕ್ಷ ಗೋಪಿನಾಥ ರೈ, ಎಪಿಎಂಸಿ ಬೆಳ್ತಂಗಡಿ ಅಧ್ಯಕ್ಷ ಧರಣೇಂದ್ರ ಕುಮಾರ್, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಭಿವಂಡಿ ಸ್ಥಳೀಯ ಕಚೇರಿ ಕಾರ್ಯಾಧ್ಯಕ್ಷ ಜಯರಾಮ ಪೂಜಾರಿ, ನೋಟರಿ ಮತ್ತು ವಕೀಲ ಸುರೇಶ್ ಕೆ.ಪೂಜಾರಿ ಮೂಡಬಿದ್ರಿ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ ಮೂಡಬಿದ್ರಿ ಅಧ್ಯಕ್ಷ ಪೂವಪ್ಪ ಕುಂದರ್, ಬಿಲ್ಲವ ಸಮಾಜ ಸೇವಾ ಸಂಘ ರಾಯಿ-ಕೊಲ ಅಧ್ಯಕ್ಷ ಶೇಖರ್ ಪೂಜಾರಿ ಶಾಂತಿಪಲ್ಕೆ, ಬ್ರಹ್ಮಶ್ರೀ ನಾರಯಣ ಗುರು ಸ್ವಾಮಿ ಸೇವಾ ಸಂಘ ವೇಣೂರು ಅಧ್ಯಕ್ಷ ಲೋಕಯ್ಯ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘ ವಾಮದಪದವು ಅಧ್ಯಕ್ಷ ಕೆ.ಬೂಬ ಪೂಜಾರಿ, ಉದ್ಯಮಿ ಮಂಜಯ್ಯ ರೈ ಬೆಳ್ಳಾಪ್ಪಾಡಿಗುತ್ತು, ರತ್ನಾಕರ ಜೆ.ಪೂಜಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಜಯ ಸುವರ್ಣ ಅವರನ್ನು ಅಭಿನಂದಿಸಿ ಶುಭಾರೈಸಿದರು. ನಂತರ ನಾರಾಯಣಗಿರಿ ಸಿದ್ಧಕಟ್ಟೆಯ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದ ಪದಾಧಿಕಾರಿಗಳೂ ಜಯ ಸುವರ್ಣ ಅವರನ್ನು ಸನ್ಮಾನಿಸಿದರು. ಸಚಿವರು ಈ ಸನ್ಮಾನವನ್ನೂ ನೆರವೇರಿಸಿ ಶುಭಾರೈಸಿದರು.












ನನ್ನ ಪಾಲಿನ ರಾಜ್ಯೋತ್ಸವ ಪುರಸ್ಕಾರ ಸಮಾಜಕ್ಕೆ ಒದಗಿದ ಗೌರವ ಇದು ಸಮಾಜಕ್ಕೆ ಸಮಾನ ಎಂದು ಸನ್ಮಾನಕ್ಕೆ ಉತ್ತರಿಸಿ ಜಯ ಸುವರ್ಣರು ತಿಳಿಸಿದರು.
ಜಯ ಸುವರ್ಣರು ಸರ್ವಧರ್ಮ ಪ್ರತೀಕರಾಗಿದ್ದು, ಅವರೋರ್ವ ಸರ್ವ ಜಾತಿಗಳನ್ನು ಪ್ರೀತಿಸಿದವರಾಗಿದ್ದಾರೆ. ಬಂಟರು ಬಿಲ್ಲವರಲ್ಲಿ ಎಂದೂ ಜಗಳ ಮಾಡಲು ಅವಕಾಶ ಒದಗಿಸದ ಸಮಾನತೆಯ ಹರಿಕಾರರೂ ಹೌದು. ತುಳುನಾಡ ಆರ್ಥಿಕ ತಜ್ಞ ರಾಗಿ ಸಾವಿರಾರು ಬಡ ಜನತೆಯ ಆರ್ಥಿಕ ಕಣ್ಣೀರು ಒರೆಸಿದ ಇವರೂ ಬೆಳೆದು ಎಲ್ಲಾ ವರ್ಗದವರನ್ನು ಎತ್ತರಕ್ಕೇರಿಸಿದ ಸಜ್ಜನರಾಗಿದ್ದಾರೆ. ಸದ್ಗುಣ ಸಂಪನ್ನರುಳ್ಳವ ಜಯಣ್ಣರಿಗೆ ಪದ್ಮಭೂಷಣ ಪುರಸ್ಕಾರವೂ ಒಳಿಯಲಿ ಎಂದರು.
ಪರರ ಸಹಕಾರ, ಪಡೆದ ಅನುಭವಗಳನ್ನು ನೆನಪಿಸಿದವರೇ ಸಮಾಜವನ್ನು ಪ್ರೀತಿಸುತ್ತಾರೆ. ಹಳೆಯ ನೆನಪುಗಳನ್ನು ನೆನಪಿಸುವುದೇ ದೊಡ್ಡತನ. ಇತಿಹಾಸ ತಿಳಿದಾಗಲೇ ಮಾನವ ಮುನ್ನಡೆಯಲು ಸಾಧ್ಯ. ಬದುಕಿನೊಂದಿಗೆ ಸಮಾಜಸೇವೆಯನ್ನು ಆಧಾರವಾಗಿಸಿ ಮಾರ್ಗದರ್ಶಕರಾದ ಜಯ ಸುವರ್ಣರಿಗೆ ಪುರಸ್ಕಾರಕ್ಕಿಂತ ಅವರಲ್ಲಿನ ಆದರಣೀಯಭಾವವೇ ಶ್ರೇಷ್ಠವಾದದ್ದು. ಸದಾ ಜನರ ಮಧ್ಯೆಯಲ್ಲಿದ್ದು ಸೇವಾ ನಿರತ ಇವರ ಸಾಮಾಜಿಕ ಬದುಕೇ ಸಾರ್ವಜಕಿನ ಬದುಕೆಣಿಸಿದ್ದು ಇವರ ಸೇವೆಗೆ ಮತ್ತಷ್ಟು ಶಕ್ತಿ ದೊರೆಯಲಿ ಎಂದು ಸಚಿವ ರೈ ತಿಳಿಸಿದರು.

















ನ್ಯಾ ನವನೀತ್ ಡಿ.ಹಿಂಗಾಣಿ ಸ್ವಾಗತಿಸಿದರು. ಅಭಿನಂದನಾ ಸಮಿತಿಯ ಸಂಚಾಲಕ ಹರೀಶ್ ಡಿ.ಪೂಜಾರಿ ಪ್ರಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸತ್ಕರಿಸಿದರು. ಕು ಶ್ರೇಯಾ ಪೂಜಾರಿ ಮತ್ತು ಕು ಸನ್ನಿಧಿ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ನವೀನ್ ಬಂಗೇರಾ, ಜಯ ಪೂಜಾರಿ ಮೂಡಬಿದ್ರೆ, ಕೃಷ್ಣ ಡಿ.ಪೂಜಾರಿ, ಶ್ರೀಧರ್ ಪೂಜಾರಿ, ಹರೀಶ್ ಮಾದಾಯಿ, ಶಶಿಧರ್ ಶೆಟ್ಟಿ, ತಿಮ್ಮಪ್ಪ ಪೂಜಾರಿ ಮತ್ತಿತರರು ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ನಿಲೇಶ್ ಕುಮಾರ್ ಮಾರ್ನಾಡ್ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಡಿ.ಪೂಜಾರಿ ವಂದನಾರ್ಪಣೆಗೈದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕನ್ನಡಿಕಟ್ಟೆ ರವಿಚಂದ್ರ ಬಳಗವು ಜಿಲ್ಲೆಯ ಸುಪ್ರಸಿದ್ಧ ಕಲಾವಿದ ಕೂಡುವಿಕೆಯಲ್ಲಿ ಧುರ ವೀಳ್ಯಕರ್ಣ ಭೇದನ ಯಕ್ಷಗಾನ ತಾಳಮದ್ದಳೆ ಪ್ರಸ್ತುತ ಪಡಿಸಿದರು.
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)