‘ಲವ್ ಇನ್ ಮಂಡ್ಯ’ ಸಿನಿಮಾವನ್ನು ಜನರು ಒಪ್ಪಿಕೊಂಡ ಖುಷಿಯಲ್ಲಿರುವ ನೀನಾಸಂ ಸತೀಶ್, ಈಗ ‘ರಾಕೆಟ್’ ಉಡಾಯಿಸುವ ಸಿದ್ಧತೆಯಲ್ಲಿದ್ದಾರೆ! ಅಂದುಕೊಂಡಂತೆ ಆದರೆ ಏಪ್ರಿಲ್ನಲ್ಲಿ ಅವರ ನಿರ್ಮಾಣದ ಮೊದಲ ಸಿನಿಮಾ ‘ರಾಕೆಟ್’ ತೆರೆಯಲ್ಲಿ ಹಾರಾಟ ನಡೆಸಲಿದೆ. ಅಲ್ಲದೆ 2016ರಲ್ಲಿ ರೈತ ಮಕ್ಕಳ ಕಥೆಯ ಸಿನಿಮಾ ನಿರ್ದೇಶಿಸುವ ಕನಸು ಅವರಿಗಿದೆ. ಪಾತ್ರಗಳಿಗೆ ಕಚಗುಳಿ ಇಟ್ಟು ನಟಿಸುವ ಸತೀಶ್ ಅವರ ಬದುಕಿನ ಕಚಗುಳಿ ಹೀಗಿದೆ ನೋಡಿ…
*‘ಕ್ವಾಟ್ಲೆ ಸತೀಸ’ ನನಗೆ ಶ್ಯಾನೇ ಕೀಟ್ಲೆ ಕೊಟ್ರು ಎಂದು ‘ಲವ್ ಇನ್ ಮಂಡ್ಯ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ನಟಿ ಸಿಂಧು ಲೋಕನಾಥ್ ಹೇಳಿದ್ರಪ್ಪ?
ಯಾವ ನಟಿಗೂ ಮಿಸ್ ಮಾಡದೆ ಕ್ವಾಟ್ಲೆ ಕೊಟ್ಟೇ ಕೊಡ್ತೀನಿ! ಅದು ಎಲ್ಲರಿಗೂ ಸಮಾನವಾಗಿ. ನನ್ನ ಜತೆಯಲ್ಲಿ ಇರುವವರು, ಅಕ್ಕಪಕ್ಕದಲ್ಲಿ ಇರುವವರಿಗೂ ಕ್ವಾಟ್ಲೆ ಕೊಡ್ತೀನಿ. ಕ್ವಾಟ್ಲೆ ಅಂದ್ರೆ ಸತೀಸ; ಸತೀಸ ಅಂದ್ರೆ ಕ್ವಾಟ್ಲೆ!
*ಸಿನಿಮಾ ಸಹವಾಸ ಮಾಡದಿದ್ದರೆ ಬೇರೇನು ಮಾಡುತ್ತಿದ್ದಿರಿ?
ದನ ಕಾಯ್ಕಂಡು, ಉಳುಮೆ ಮಾಡುತ್ತಿದ್ದೆ. ಚಿಕ್ಕಂದಿನಲ್ಲಿ ನಾನು ದನ, ಆಡು ಕಾಯಲು ಹೋಗುತ್ತಿದ್ದೆ. ಆಗ ನಮ್ಮ ಮನೆಯಲ್ಲಿ ಕಪ್ಪು ಮತ್ತು ಬಿಳಿಯ ಎರಡು ನಾಟಿ ಹಸುಗಳು ಇದ್ದವು. ಎರಡೂ ನನಗೆ ಮತ್ತು ನಮ್ಮ ಮನೆಯವರಿಗೆ ಪಂಚಪ್ರಾಣ. ಬಿಳಿ ಹಸು ಸತ್ತಾಗ ನಾವೇ ಮಣ್ಣು ಮಾಡಿದೆವು. ನಾನೂ ಸೇರಿದಂತೆ ಮನೆಯವರೆಲ್ಲರೂ ಕಣ್ಣೀರು ಹಾಕಿದ್ದೆವು. ಆಡುಗಳೆಂದರೂ ನನಗೆ ಪ್ರಾಣ. ಹೊರಗೆ ಹೊರಟರೆ ಬಂದು ಮೂಸುತ್ತಿದ್ದವು, ಕೂಗುತ್ತಿದ್ದವು.
*ಮಂಡ್ಯ ಹೈದನಿಗೆ ಲವ್ವು ಡವ್ವಿನಿಂದ ಮನಸ್ಸು ಉದ್ವಿಗ್ನಗೊಂಡಿದ್ದು ಇದೆಯೇ?
ಇಲ್ಲ ಸಾಮಿ… ಕಾಲೇಜು ದಿನಗಳಲ್ಲಿ ನಮ್ಮ ಮುಖ ಯಾರು ನೋಡುತ್ತಲೇ ಇರಲಿಲ್ಲ. ಅಂದಹಾಗೆ ನಾವು ಆ ಬಡ್ಡೆತವ್ವ ನೋಡಿದ್ರೆ ತಾನೇ. ಬೇಜಾನ್ ಸೈಲೆಂಟು ನಾನು. ನಟನಾದ ಮೇಲೆ ದೊಡ್ಡ ಮಟ್ಟದಲ್ಲಿ ಲವ್ ಪ್ರಪೋಸಲ್ಲುಗಳು ಬಂದಿವೆ. ‘ಅಯ್ಯೋ ನಾನು ಇನ್ನು ಬೆಳೆದೇ ಇಲ್ಲ. ನಾನಿನ್ನೂ ಮಗು. ಈ ಮಗೂಗೇ ಪ್ರಪೋಸಲ್ಲೇ’ ಎಂದು ಸುಮ್ಮನಾದೆ. ಈ ಅರ್ಜಿಗಳನ್ನೆಲ್ಲ ಮುಂದಿನ ಜನ್ಮದಲ್ಲಿ ವಿಲೇವಾರಿ ಮಾಡುವೆ. ಆದರೆ ನನಗೆ ಇಲ್ಲಿವರೆಗೂ ಪ್ರೀತಿ ಹುಟ್ಟಿದ್ದು ಒಬ್ಬಳೇ ಹೆಣ್ಣಿನ ಬಗ್ಗೆ, ಅದು ಕಾಜಲ್. ಅವಳನ್ನು ನಾನು ತುಂಬಾ ಪ್ರೀತಿ ಮಾಡಿದ್ದೀನಿ. ಕನಸಿನಲ್ಲಿ ಅವಳಿಗಾಗಿ ಶಾರುಖ್ ಖಾನ್ ಜತೆ ಜಗಳ ಆಡಿದ್ದೀನಿ, ಗುದ್ದಾಡಿದ್ದೀನಿ.
*‘ಲೂಸಿಯಾ’ದಲ್ಲಿ ಬ್ಯಾಟ್ರಿ ಬಿಟ್ಟಾಯ್ತು, ಮುಂದೆ ಇನ್ನೇನು ಬಿಡಬೇಕು?
‘ರಾಕೆಟ್’. ನಾನೇ ದುಡ್ಡು ಹಾಕಿ ರಾಕೆಟ್ ಸಿದ್ಧಮಾಡುತ್ತಿದ್ದೇನೆ. ಇದು ಕರ್ನಾಟಕದ ರಾಕೆಟ್. ಶೇ 70ರಷ್ಟು ಚಿತ್ರೀಕರಣ ಮುಗಿದಿದೆ. ಏಪ್ರಿಲ್ಗೆ ಜನರ ಮನಸ್ಸಿನ ಮೇಲೆ ಉಡಾಯಿಸುವೆ. ಯಾವ ರೀತಿ ನುಗ್ಗುತ್ತದೆ ನೋಡಿ. ಶರವೇಗದಲ್ಲಿ ಬರ್ತದೆ. ಇಷ್ಟೇ ಅಲ್ಲ ಬೇಕಾದಷ್ಟು ರಾಕೆಟ್ಗಳನ್ನೂ ನಾನು ಇಟ್ಟಿದ್ದೇನೆ. ಒಂದೊಂದಾಗಿ ಬಿಡುವೆ.
*‘ದ್ಯಾವ್ರೆ’ಚಿತ್ರದಲ್ಲಿ ಚಿಂಕ್ರನ ಪಾತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಂಡ್ರಿ… ಮುಂದೆ ಮಂಕ್ರ, ಗಿಂಕ್ರ, ಪಂಕ್ರ ಯಾವುದು?
ಇದ್ಯಾವುದೂ ಅಲ್ಲ. ವಿವಿಧ ವಿನೋದಾವಳಿ! ಅದು ‘ರಾಕೆಟ್’ ಮೂಲಕ. ಇಲ್ಲಿ 10 ಗೆಟಪ್ಪಿನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಬಬ್ರುವಾಹನ, ಮಯೂರ ಇತ್ಯಾದಿ ಇತ್ಯಾದಿ. ಎಂಜಿನಿಯರ್, ವಿಜ್ಞಾನಿಗಳು ಎಲ್ಲರೂ ರಾಕೆಟ್ ರೆಡಿ ಮಾಡುತ್ತಿದ್ದಾರೆ. ನಾನು ಪೈಲೆಟ್ ಆಗಿ ಟ್ರೈನಿಂಗ್ ತೆಗೆದುಕೊಳ್ತಾ ಇದ್ದೀನಿ.
*ಅರೆ! ಇವನು ಹೀರೊ ಆಗಿಬಿಟ್ಟ ಕಣಮ್ಮಿ ಎಂದು ಮಂಡ್ಯ ಹೆಣ್ಣು ಹೈಕ್ಳು ಸಕ್ಕರೆ ನಾಡಿನ ಹಾದಿ ಬೀದಿಯಲ್ಲಿ ಹೇಳ್ಕೊಂಡು ಬರುತ್ತಿದ್ದಾರಂತೆ?
ಹೂಂ… ನಾನು ಹೀರೊ ಆಗುವೆ ಎಂದಾಗ ಎಂಟನೇ ಅದ್ಭುತ ಸಿದ್ಧ ಎಂದರು. ಈಗಲೂ ಆ ಶಾಕ್ನಿಂದ ಕೆಲವರು ಹೊರಗೇ ಬಂದಿಲ್ಲ.
*ಸಿನಿಮಾ ನಿರ್ಮಾಣ ದೂರದ ಆಲೋಚನೆಯೋ ಇಲ್ಲ ದುರಾಲೋಚನೆಯೋ?
ದೂರಾಲೋಚನೆ. ಇದು ಒಂದು ಬುನಾದಿ ಅಷ್ಟೇ. ಈ ‘ರಾಕೆಟ್’ನಿಂದ ಮತ್ತಷ್ಟು ಸಿನಿಮಾಗಳು ಹೊರ ಬರುತ್ತವೆ. ಬೇರೆ ಭಾಷೆಯವರು 200 ಕೋಟಿ ಬಂಡವಾಳ ಸುರಿದೆ, ಅದು… ಇದು… ಬರೀ ದುಡ್ಡಲ್ಲೆ ದುನಿಯಾ ಕಟ್ಟುತ್ತಾರೆ. ಆದರೆ ನಾನು ಈ ನನ್ನ ನಿರ್ಮಾಣ ಸಂಸ್ಥೆ ಮೂಲಕ ದುಡ್ಡಿನಿಂದ ಸಿನಿಮಾವಲ್ಲ ಕಥೆಯಿಂದ ಸಿನಿಮಾ ಎನ್ನುವುದನ್ನು ಮುಂದಿನ ದಿನಗಳಲ್ಲಿ ತೋರಿಸುವೆ. 2016ಕ್ಕೆ ನಿರ್ದೇಶನಕ್ಕೂ ಬರುತ್ತಿದ್ದೇನೆ.
*ಅರೆರೆರೆ…! ಆ್ಯಕ್ಷನ್–ಕಟ್ ಟೋಪಿ ತೊಡುವ ಆಲೋಚನೆ ಇದೆ ಅಂದಂಗೆ ಆಯ್ತು?
ನಿರ್ದೇಶಕರ ಟೋಪಿ ಹಾಕ್ಕೊಂಡು ಹೆಗಲ ಮೇಲೆ ಟವಲ್ಲು ಮಡಿಕ್ಕಂಡು ಆ್ಯಕ್ಷನ್–ಕಟ್ ಕಟ್ಟ್ಟ್… ಎನ್ನುವ ಕಾಲ ದೂರವೇನೂ ಇಲ್ಲ. 2016ಕ್ಕೆ ನಿರ್ದೇಶಕನಾಗುತ್ತಿದ್ದೇನೆ. ಈ ವರುಷ ನಾಲ್ಕು ಸಿನಿಮಾ ಇವೆ. ಅದನ್ನೆಲ್ಲ ಮುಗಿಸಿ ನಿರ್ದೇಶಕ ನಾಗುವೆ. ನಾನು ನಿರ್ದೇಶಿಸುವ ಮೊದಲ ಕಥೆ ರೈತರಿಗೆ ಸಂಬಂಧಿಸಿದ್ದು.
*ಬಾಲ್ಯದಲ್ಲಿಯೇ ಬೇಜಾನ್ ಹವಾ ಇಟ್ಟಿದ್ರಂತೆ?
ಹಾಗೇನಿಲ್ಲಪ್ಪ! ಆದರೆ ಮರಳಿನಲ್ಲಿ ಆಟವಾಡು ವಾಗ, ನಾನು ಅಂಬರೀಷ್, ವಿಷ್ಣುವರ್ಧನ್ ಇತ್ಯಾದಿ ನಟರ ಹೆಸರನ್ನು ನಮಗೆ ಅನ್ವಯಿಸಿಕೊಂಡು ಆಡುತ್ತಿದ್ದೆವು. ನಾನು ನನ್ನ ಸ್ನೇಹಿತನಿಗೆ ಹೇಳಿದ್ದೆ, ‘ಮಗ ಕೆ.ಜಿ. ರೋಡಿನಲ್ಲಿ ನನ್ನ ಕಟೌಟ್ ನಿಲ್ಲಿಸಿದರೆ ನೀನು ಅದನ್ನು ಕತ್ತು ಎತ್ತಿಕೊಂಡು ನೋಡಿಕೊಂಡು ಹೋಗಬೇಕು’ ಎಂದು. ಅದು ಈಡೇರಿದೆ. ಅವನಿಗೂ ಇದೇ ಆಸೆ ಇತ್ತು.
*ಸಂಸಾರದ ಕನಸುಗಳು ಬೀಳುತ್ತಿಲ್ಲವೇ?
ಇದು ದೂರದ ಯೋಚನೆ. ಅಲ್ಲಲ್ಲ…ದೂರದ ಯೋಜನೆ.
*ನಾಟಿ ಕೋಳಿ ಸಾರು, ಮುದ್ದೆ ಅಂದ್ರೆ ಬಾಯಲ್ಲಿ ನೀರು ಸುರಿಯುತ್ತಂತೆ?
ಇವು ಎರಡೇ ಅಲ್ಲ, ಸೊಪ್ಸಾರು, ನುಗ್ಗೆ ಸಾರು, ಹುರುಳಿಕಾಳು ಉಪ್ಸಾರು ಫೇವರೆಟ್ಟು. ಅವೆಲ್ಲ ನೆನಪಾದರೆ ಬಾಯಲ್ಲಿ ನೀರು ಸುರಿಯುತ್ತೆ.
*ಮಂಡ್ಯ ಭಾಷೆಯನ್ನು ಕರ್ನಾಟಕದಲ್ಲಿ ಫೇಮಸ್ಸು ಮಾಡಿದ್ದೂ ಅಲ್ಲದೇ ‘ಲೂಸಿಯಾ’ದಲ್ಲಿ ಫಾರಿನ್ನರಿಗೂ ಕಲ್ಸಿಬಿಟ್ರಿ?
ಮಂಡ್ಯ ಗ್ರಾಮೀಣ ಹಿನ್ನೆಲೆಯವನು ನಾನು. ಬಡ್ಡೆತದ್ದು… ಇಂಥವೇ ಹಳ್ಳಿ ಭಾಷೆ ನನ್ನ ಪರಿಸರದ್ದು. ಅದನ್ನು ಮನೆಯಲ್ಲಿ ಮಾತನಾಡಿದಂತೆ ಸಿನಿಮಾದಲ್ಲೂ ಹೇಳಿದಾಗ ಇವ ನಮ್ಮ ಮನೆ ಮಗ ಎಂದುಕೊಂಡು ಜನರು ಒಪ್ಪಿಕೊಂಡು ಬಿಟ್ಟರು. ಫಾರಿನ್ನವರ ವಿಚಾರಕ್ಕೆ ಬರುವುದಾದರೆ ನಮ್ಮದು ಫಾರ್–ಇನ್ ಭಾಷೆ ಎಲ್ಲರನ್ನೂ ಒಳಗೊಳ್ಳಬೇಕು.
*ಇಷ್ಟೆಲ್ಲಾ ಮಾತನಾಡುವ ಹುಡುಗನಿಗೆ ‘ಡ್ರಾಮಾ’ ಸಿನಿಮಾದಲ್ಲಿ ಮೂಗಿ ಜತೆ ಪಾರ್ಟು ಕೊಟ್ರಲ್ಲ, ಆ ಭಟ್ಟರು?
ಏ… ಮೂಗಿಗೆ ಮಾತು ಬರಲ್ಲ ಅಷ್ಟೇ! ಉಳಿದಂತೆ ಎಲ್ಲದೂ ಬತ್ತದೆ ಸುಮ್ಕಿರಿ. ನಾನು ಸಿಕ್ಕಾಪಟ್ಟೆ ಮಾತನಾಡುತ್ತೇನೆ. ನನ್ನ ಕಂಟ್ರೋಲ್ ಮಾಡುವುದಕ್ಕಾಗಿಯೇ ಭಟ್ಟರು ಆ ಪಾತ್ರ ಕ್ರಿಯೇಟ್ ಮಾಡಿ ನನಗೆ ಜತೆ ಮಾಡಿದರು ಅನ್ನಿಸುತ್ತೆ.
*ಹೊಸದಾಗಿ ಕೊಟ್ಟರೆ ಯಾವ ಸ್ಟಾರ್ ಬೇಕೋ?
ಶುಗರ್ ಸ್ಟಾರ್! ಯಾವಾಗಲೂ ಸಕ್ಕರೆ ರೀತಿ ಸಿಹಿ ಸಿಹಿಯಾಗಿ ಪ್ರೇಕ್ಷಕರನ್ನು ನಗಿಸಿಕೊಂಡು ಇರಬೇಕು.
ನಾನು ಸ್ಕೂಲ್ನಲ್ಲಿ ಇದ್ದಾಗ ಬಸವರಾಜಪ್ಪ ಅಂತಾ ಒಬ್ಬರು ಮೇಷ್ಟ್ರು ಇದ್ದರು. ಆ ಮೇಷ್ಟ್ರು ಶಾಲೆಯಲ್ಲಿ ನಿದ್ದೆ ಹೋಗುತ್ತಿದ್ದರು. ಸಾ ಸಾ… ಎಂದು ಕಿರುಬೆರಳು ಮೇಲೆ ಎತ್ತಿ ಟಾಯ್ಲೆಟ್ಗೆ ಹೋಗಲು ಪರ್ಮಿಷನ್ ತೆಗೆದುಕೊಂಡು ಹೊರಗೆ ಓಡಿಬಿಡುತ್ತಿದ್ದೆವು. ಆಗ ಕಾಲುವೆಯಲ್ಲಿ ಈಜುವುದು ಎಂದರೆ ನನಗೆ ತುಂಬಾ ಇಷ್ಟ. ಈ ವಿಷಯ ಮೇಷ್ಟ್ರಿಗೆ ಗೊತ್ತಾಯಿತು. ಒಂದು ಸಲ ನಿಜವಾಗಿಯೂ ಅರ್ಜೆಂಟ್ ಆಗಿ ಮೇಷ್ಟ್ರನ್ನ ಕೇಳಿದೆ. ಕ್ಲಾಸಿನಿಂದ ತಪ್ಪಿಸಿಕೊಂಡು ಹೋಗ್ತಾನೆ ಎಂದು ಹೊರಗೆ ಕಳುಹಿಸಲೇ ಇಲ್ಲ. ಇನ್ನೇನು ಚೆಡ್ಡಿ ಒದ್ದೆ ಆಗಬೇಕು ಎನ್ನುವಷ್ಟರಲ್ಲಿ ಕ್ಲಾಸಿನಿಂದ ಓಟ ಕಿತ್ತಿದ್ದೆ. ಇನ್ನೊಂದು ಸಂಗತಿ ಎಂದರೆ, ನನ್ನ ಸಿನಿಮಾ ಹುಚ್ಚು. ಅದು ವಿಪರೀತವಾಗಿತ್ತು. ರಾತ್ರಿ ವೇಳೆ ಹೊರಗಿನಿಂದ ಚಿಲಕ ಹಾಕಿಕೊಂಡು ಸಿನಿಮಾ ನೋಡುವುದಕ್ಕೆ ಹೋಗುತ್ತಿದ್ದೆ. ನಮ್ಮ ಅಮ್ಮನಿಗೆ ಏನಾದ್ರೂ ಗೊತ್ತಾಗಿದ್ದರೆ ಅಟ್ಟಾಡಿಸಿಕೊಂಡು ಬಂದು ಹೊಡೆಯುತ್ತಿದ್ದರು. ನಡುರಾತ್ರಿ ಯಾರಿಗೂ ಗೊತ್ತಿಲ್ಲದಂತೆ ಬಂದು ಮನೆ ಸೇರಿಬಿಡುತ್ತಿದ್ದೆ.
