ಕನ್ನಡ ವಾರ್ತೆಗಳು

ವಾರಾಹಿ ನೀರು ಹರಿಯುವ ತನಕ ಸತ್ಯಾಗ್ರಹ ನಿಲ್ಲದು : ಗಣಪತಿ ಟಿ. ಶ್ರೀಯಾನ್

Pinterest LinkedIn Tumblr

ಕುಂದಾಪುರ: 35 ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ವಾರಾಹಿ ಕಾಮಗಾರಿ ಒಂದು ನಿರ್ದಿಷ್ಟ ಕಾಲಮಿತಿಯಲ್ಲಿ ಮುಗಿಯಬೇಕು. ಕಾಲುವೆಗಳಲ್ಲಿ ನೀರು ಹರಿಸುವಂತಾಗಬೇಕು. ಈ ಯೋಜನೆಯಲ್ಲಿ ಜಾಗ ಕಳೆದುಕೊಂಡ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗಬೇಕು, ಕಳಪೆ ಕಾಮಗಾರಿ ಹಾಗೂ ಅಧಿಕಾರ ದುರುಪಯೋಗ ಪಡಿಸಿಕೊಂಡವರ ವಿರುದ್ಧ ಸೂಕ್ತ ತನಿಖೆ ಆಗಬೇಕು ಎನ್ನುವ ಸದ್ದುದ್ದೇಶದಿಂದ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ರಾಜಕೀಯ ರಹಿತವಾಗಿ ಅನಿರ್ದಿಷ್ಟವಧಿ ಧರಣಿ ನಡೆಯುತ್ತಿದೆ ಎಂದು ರೈತಸಂಘದ ಪದಾಧಿಕಾರಿ, ಜಿ.ಪಂ.ಸದಸ್ಯ ಗಣಪತಿ ಟಿ.ಶ್ರೀಯಾನ್ ಹೇಳಿದರು.

Varahi_Press Meat_Kundapura

ಕುಂದಾಪುರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ರಾಜಕೀಯವಿಲ್ಲ. ವಾರಾಹಿ ಕಾಮಗಾರಿ ಒಂದು ಹಂತಕ್ಕೆ ಬರಬೇಕು ಎನ್ನುವ ನೆಲೆಯಲ್ಲಿ ನಮ್ಮ ಹೋರಾಟ ನಡೆಯುತ್ತಿದೆ. ಯೋಜನೆಗೆ ಅಂದು ಜನಸಾಮಾನ್ಯರು ಸ್ಥಳವನ್ನೇ ಬಿಡದಿದ್ದರೆ ಇವತ್ತು ಯೋಜನೆ ಈ ಹಂತಕ್ಕೂ ಬರುತ್ತಿರಲಿಲ್ಲ. ತಮ್ಮ ತುಂಡು ಭೂಮಿಯನ್ನು ಬಿಟ್ಟು ವಲಸೆ ಹೋದ ಸಂತ್ರಸ್ತರ ಬಗ್ಗೆಯೂ ನಮಗೆ ಕಾಳಜಿ ಇದೆ. ಪರಿಹಾರ ಸಿಗದ ಸಂತೃಸ್ತರಿಗೆ ಸೂಕ್ತ ಪರಿಹಾರ ಸಿಗುವಂತಾಗಬೇಕು. ಸಂತ್ರಸ್ತರ ಪರವಾಗಿ ಧ್ವನಿ ಎತ್ತಲಿದ್ದೇವೆ ಎಂದರು.

ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿ, ನ್ಯಾಯವಾದಿ ಉಮೇಶ ಶೆಟ್ಟಿ ಶಾನ್ಕಟ್ಟು ಮಾತನಾಡಿ, ಜಿಲ್ಲಾ ಉಸ್ತವಾರಿ ಸಚಿವರು ಈ ಹಿಂದೆ ಡಿಸಂಬರ್ ೩೧ರೊಳಗೆ ಕಾಲುವೆಗಳಲ್ಲಿ ನೀರು ಹರಿಸುವ ವಾಗ್ದಾನ ನೀಡಿದ್ದರು. ಆ ಸಂದರ್ಭದ ರೈತ ಸಂಘದ ಅಧ್ಯಕ್ಷ ಪ್ರತಾಪಚಂದ್ರ ಶೆಟ್ಟಿಯವರು ಡಿ.೩೧ರೊಳಗೆ ಕಾಲುವೆಯಲ್ಲಿ ನೀರು ಹರಿಸದಿದ್ದರೆ ಜ.೧ರಿಂದ ಸತ್ಯಾಗ್ರಹ ಮಾಡುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಸರ್ಕಾರ ಕಾಲುವೆಗಳಲ್ಲಿ ನೀರು ಹರಿಸುವಲ್ಲಿ ವಿಫಲವಾದ್ದರಿಂದ ಸತ್ಯಾಗ್ರಹ ನಡೆಸುತ್ತಿದ್ದೇವೆ. ಸತ್ಯಾಗ್ರಹಕ್ಕೆ ಎಲ್ಲ ಪಕ್ಷದ ಮುಖಂಡರು ಪಕ್ಷಾತೀತವಾಗಿ ಬೆಂಬಲ ನೀಡಿದ್ದಾರೆ. ವಿವಿಧ ಸಂಘ ಸಂಸ್ಥೆಗಳು, ವಾರಹಿ ಸಂತ್ರಸ್ತರು ಮತ್ತು ವಾರಾಹಿ ನೀರಿಗೆ ಸಂಬಂಧಪಡದ ಪ್ರದೇಶದವರು ಸತ್ಯಾಗ್ರಹದಲ್ಲಿ ಭಾಗವಹಿಸುತ್ತಿದ್ದಾರೆ. ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ್ದಲ್ಲದೇ ಮುಖ್ಯಮಂತ್ರಿಗಳ ಜೊತೆಗೆ ಈ ಬಗ್ಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಲ್ಲದೇ ರೈತ ಸಂಘದ ನಿಯೋಗದೊಂದಿಗೆ ತರಳಿ ಅರಣ್ಯ, ಕಂದಾಯ, ನೀರಾವರಿ ಅಧಿಕಾರಿಗಳ ಜೊತೆ ಸಮಾಲೋಚನೆ ನೆಡೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದರು.

ಈ ಯೋಜನೆ ಆರಂಭದಿಂದ ಇಂದಿನವರೆಗೆ ರಾಜ್ಯದಲ್ಲಿ ಯಾವೆಲ್ಲ ರಾಜಕೀಯ ಪಕ್ಷಗಳು ಅಧಿಕಾರ ನಡೆಸಿವೆ ಆ ಎಲ್ಲಾ ಪಕ್ಷಗಳು, ಸಚಿವರುಗಳು, ಲೋಕಸಭಾ ಸದಸ್ಯರುಗಳು, ವಿಧಾನ ಸಭಾ ಸದಸ್ಯರುಗಳು, ಜಿ.ಪಂ., ತಾ.ಪಂ., ಗ್ರಾ.ಪಂ ಸದಸ್ಯರುಗಳು ಸೇರಿದಂತೆ ರೈತರು ಕೂಡ ಇಲ್ಲಿ ಜವಾಬ್ದಾರರಾಗುತ್ತಾರೆ. ಪ್ರತಾಪಚಂದ್ರ ಶೆಟ್ಟರು ಈ ವಿಷಯದಲ್ಲಿ ವಿಧಾನಸಭೆ ಹಾಗೂ ಪರಿಷತ್‌ನಲ್ಲಿ ಸಾಕಷ್ಟು ಸಲ ಪ್ರಶ್ನಿಸಿದ್ದಾರೆ ಎಂದರು.

ಕೆಲವರು ವಾರಾಹಿ ಬಗ್ಗೆ ಕನಿಷ್ಠ ಜ್ಞಾನ ಇಲ್ಲದವರು ಸತ್ಯಾಗ್ರಹವನ್ನು ಟೀಕಿಸುತ್ತಿದ್ದಾರೆ. ಆ ಟೀಕೆಗಳಿಗೆ ಅರ್ಥವೇ ಇಲ್ಲ. ವಾರಾಹಿ ಕಾಲುವೆಯಲ್ಲಿ ನೀರು ಹರಿಯಬೇಕು, ಕಾಮಗಾರಿಯಲ್ಲಿನ ಭ್ರಷ್ಟಾಚಾರದ ಬಗ್ಗೆ ತನಿಖೆಯಾಗಬೇಕು, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತಾಗಬೇಕು. ಅಲ್ಲಿಯ ತನಕ ಸತ್ಯಾಗ್ರಹ ಮುಂದುವರಿಯುತ್ತದೆ ಎಂದರು.

ತಾ.ಪಂ.ಸದಸ್ಯ, ರೈತ ಸಂಘದ ಪದಾಧಿಕಾರಿ ಪ್ರದೀಪಚಂದ್ರ ಶೆಟ್ಟಿ ಮಾತನಾಡಿ, ವಾರಾಹಿ ಯೋಜನೆಯ ರೂಪುರೇಷೆಯನ್ನು ಬದಲಾಯಿಸಬೇಕು ಎನ್ನುವ ನೆಲೆಯಲ್ಲಿ ೧೯೯೪ರಲ್ಲಿ ಕೂಡಾ ಪ್ರತಿಭಟನೆ ನಡೆದಿತ್ತು. ಈ ಕಾಲುಗಳು ಮಳೆಯಾಶ್ರಯಿತ ಪ್ರದೇಶಕ್ಕೆ ಸರಿಹೊಂದುವುದಿಲ್ಲ. ಚೀನಾದ ಬರ್ಮ್ ಮಾದರಿಯಂತೆ ಅನುಷ್ಠಾನಿಸಬೇಕು ಎಂದು ಅಂದಿನ ಕುಂದಾಪುರ ತಾಲೂಕು ರೈತ ಸಂಘ ಮಡಾಮಕ್ಕಿ ಮಂಜಯ್ಯ ಶೆಟ್ಟರ ನೇತೃತ್ವದಲ್ಲಿ, ಎ.ಜಿ ಕೊಡ್ಗಿಯವರ ನಾಯಕತ್ವದಲ್ಲಿ ದಿ.ಉದಯಕುಮಾರ್ ಶೆಟಟಿ ಹಾಲಾಡಿಯವರ ಜೊತೆಗೂಡಿ ೨೪ ಗಂಟೆಗಳ ಸತ್ಯಾಗ್ರಹ ನಡೆಸಿತ್ತು. ಆದರೆ ಸರ್ಕಾರ ಅಂದು ಈ ಸಲಹೆಯನ್ನು ಸ್ವೀಕರಿಸಲಿಲ್ಲ. ಬರ್ಮ್ ಮಾದರಿಯಲ್ಲಿ ಮಾಡಿದ್ದರೆ ಇಷ್ಟರೊಳಗೆ ಕಾಮಗಾರಿ ಮುಗಿಯುತ್ತಿತ್ತು. ಸಾಕಷ್ಟು ಹಣವೂ ಉಳಿಯುತ್ತಿತ್ತು. ಈಗಾಗಲೇ ೩೫ ವರ್ಷ ಕಳೆದಿದೆ. ವಾರಾಹಿ ಎಡದಂಡೆ, ಬಲದಂಡೆ ವ್ಯಾಪ್ತಿಯಲ್ಲಿ ಸಾಕಷ್ಟು ಕುಟುಂಬಗಳು ಜಾಗ ಕಳೆದುಕೊಂಡು ಸಮಸ್ಯೆ ಅನುಭವಿಸುತ್ತಿದ್ದಾರೆ. ಅವರ ಸಮಸ್ಯೆಯನ್ನು ಹರಿಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಸಂತೃಸ್ತರಿಗೆ ನ್ಯಾಯ ಸಿಗಬೇಕು. ರೈತರಿಗೆ ನೀರು ಸಿಗಬೇಕು ಎನ್ನುವುದಷ್ಟೆ ಈ ಸತ್ಯಾಗ್ರಹದ ಉದ್ದೇಶ ಇಲ್ಲಿ ಯಾವುದೇ ದ್ವಂದ್ವ ಇಲ್ಲ ಎಂದರು.

Write A Comment