
ಖಾವಿಧಾರಿ ರಿಷಿಕುಮಾರ ಸ್ವಾಮಿಯ ಅವತಾರಗಳು ಒಂದೆರಡಲ್ಲ. ಹೆಸರು ಒಂದೇ, ನಾನಾ ವೇಷ ಎನ್ನುವಂತೆ ಈ ಸ್ವಾಮಿ ಹಾಕದಿರುವ ವೇಷವೇನಾದರೂ ಇದೆಯೇ? ಎಂದುಕೊಳ್ಳುವಾಗಲೇ ಕೈಯಲ್ಲೊಂದು ಪಿಸ್ತೂಲು ಹಿಡಿದುಕೊಂಡು ಬಂದಿದ್ದಾರೆ.
‘ಬಿಗ್ಬಾಸ್’ ರಿಯಾಲಿಟಿ ಶೋನಲ್ಲಿ ಕಾಮಿಡಿ ಪೀಸು ಎಸಿಸಿಕೊಂಡ, ಖಾವಿ ಭಕ್ತಾದಿಗಳ ಕೋಪಕ್ಕೂ ಗುರಿಯಾದ, ಸಿನಿಮಾ ಕಾರ್ಯ ಕ್ರಮಗಳ ವೇದಿಕೆಗಳಲ್ಲಿ ಕುಣಿದು ಅಚ್ಚರಿ ಮೂಡಿಸಿದ, ಐಟಂ ಹಾಡಿಗೆ ಹೆಜ್ಜೆ ಹಾಕಿ ಗಾಂಧಿನಗರಕ್ಕೆ ಶಾಕ್ ಕೊಟ್ಟ ಈ ಸ್ವಾಮಿ, ಈಗ ವಿಲನ್. ಈಗಾಗಲೇ ನಿಜ ಜೀವನದಲ್ಲೂ ಕೆಲವರ ದೃಷ್ಟಿಯಲ್ಲಿ ಖಳನಾಯಕನಾಗಿರುವ ರಿಷಿಕುಮಾರ ಸ್ವಾಮಿ, ತೆರೆ ಮೇಲೂ ಅದೇ ವಿಲನ್ ಆಗಿದ್ದಾರೆ.
ಹೌದು, ‘ಕಲಿಯುಗ’ ಎನ್ನುವ ಚಿತ್ರದಲ್ಲಿ ಈ ಕಾಳಿ ಸ್ವಾಮಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಬಾಲಿವುಡ್ನ ಸೋನುಸೂಧ್ರನ್ನೂ ಮೀರಿಸುವಂಥ ಸ್ಮಾರ್ಟ್ ವಿಲನ್ ಅವತಾರಗಳಲ್ಲಿ ಲಕಲಕನೆ ಹೊಳೆಯುತ್ತಿದ್ದಾರೆ.
ಕಪ್ಪು ಕನ್ನಡಕ, ವೈಟ್ ಸೂಟ್ ಧರಿಸಿ ಸ್ಮಾರ್ಟ್ ಆಗಿ ಕಾಣಿಸಿಕೊಂಡರೂ, ಮತ್ತೊಮ್ಮೆ ಕಾಳಿಯಂತೆ ಅಬ್ಬರಿಸಿದ್ದಾರೆ. ಮಗದೊಮ್ಮೆ ತನ್ನ ತಲೆಗೆ ತಾನೆ ಪಿಸ್ತೂಲು ಹಿಡಿದು ಟಿಪಿಕಲ್ ಖಳನಾಯಕ ಎಂದು ನಂಬಿಸುವ ಪ್ರಯತ್ನ ಮಾಡಿದಂತೆ ಕಾಣುತ್ತದೆ. ಒಟ್ಟಿನಲ್ಲಿ ಕಿರುತೆರೆಯಲ್ಲಿ ರಿಯಾಲಿಟಿ ಶೋ, ಸಿನಿಮಾಗಳಲ್ಲಿ ಅತಿಥಿ ಪಾತ್ರ, ಐಟಂ ಹಾಡಿಗೆ ಡ್ಯಾನ್ಸ್ ಹೀಗೆ ನಾನಾ ಪಾತ್ರಗಳನ್ನು ಮಾಡಿದ ಮೇಲೆ ಈಗ ವಿಲನ್ ಆಗಿದ್ದಾರೆ.
ರಿಷಿಕುಮಾರ ಸ್ವಾಮಿ ಖಳನಾಯಕನಾಗಿ ನಟಿಸುತ್ತಿರುವ ‘ಕಲಿಯುಗ’ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಗಿಸಿ, ಎರಡನೇ ಹಂತದ ಚಿತ್ರೀಕರಣ ಆರಂಭಗೊಂಡಿದೆ. ಈ ಚಿತ್ರಕ್ಕೆ ನಾಯಕ ಪ್ರತೀಕ್ಷ್ ಅಕ್ಕಿ. ಪ್ರಮುಖ ತಾರಾಬಳಗದಲ್ಲಿ ದೀಪಿಕಾ ದಾಸ್, ಮಯೂರ್, ಕಡ್ಡಿಪುಡಿ ಚಂದ್ರು, ಮುನಿ, ಮಿಮಿಕ್ರಿ ದಯಾನಂದ್, ಸರಿಗಮ ವಿಜಿ, ಮಾರಿಮುತ್ತು, ಪಂಕಜ, ಕಿಲ್ಲರ್ ವೆಂಕಟೇಶ್, ಉಜ್ವಲ್, ಯೋಗೇಶ್ ಮುಂತಾದವರು ಅಭಿನಯಿಸುತ್ತಿದ್ದಾರೆ.
ಚಲಪತಿ ಬಿ ಕೋಲಾರ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಈ ಕಾಳಿ ಸ್ವಾಮಿಯನ್ನು ತಮ್ಮ ಚಿತ್ರದಲ್ಲಿ ಬಿಟ್ಟಿ ಪ್ರಚಾರಕ್ಕಾಗಿ ಪಾತ್ರ ಕೊಟ್ಟಿದ್ದಾರೆಯೇ? ಗೊತ್ತಿಲ್ಲ. ಮತ್ತೊಂದು ವಿಶೇಷ ಅಂದರೆ ಈ ಕಾಳಿ ಸ್ವಾಮಿ ‘ದಂಢಕ’ ಎನ್ನುವ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಆದರೆ, ಚಿತ್ರ ಬಿಡುಗಡೆಯಾದ ಮೇಲೆ ಈ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರಿಗೆ ‘ಈವಯ್ಯ ನಮ್ ಚಿತ್ರಕ್ಕೆ ಹೀರೋ ಆಗಿದ್ದು ದಂಡಕ್ಕಾ’ ಅನ್ನಿಸದಿದ್ದರೆ ಸಾಕು.