ಕರ್ನಾಟಕ

ಹನ್ನೊಂದು ವರ್ಷಗಳ ಬಳಿಕ ತಂದೆಯ ಭೇಟಿ: ಸಿರಿಮನೆ ಪುತ್ರಿ ಮಲ್ಲಿಗೆ ಹೇಳಿಕೆ

Pinterest LinkedIn Tumblr

mallige-press-meet

ಚಿಕ್ಕಮಗಳೂರು, ಡಿ.8: ಭೂಗತರಾಗಿ ಜೀವಿಸಲು ಸಾಧ್ಯವಾಗದೆ ಶರಣಾಗುತ್ತಿದ್ದಾರೆ ಎಂಬ ನಮ್ಮ ತಂದೆ ಸಿರಿಮನೆ ನಾಗರಾಜ್ ಮೇಲೆ ಕೆಲವರು ಮಾಡುತ್ತಿರುವ ಆರೋಪ ಒಪ್ಪುವಂತದ್ದಲ್ಲ ಎಂದು ಸಿರಿಮನೆ ನಾಗರಾಜ್ ಪುತ್ರಿ ಮಲ್ಲಿಗೆ ತಿಳಿಸಿದ್ದಾರೆ.

ಅವರು ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾಜದ ಮುಖ್ಯವಾಹಿನಿಗೆ ಬಂದು ಪ್ರಜಾತಾಂತ್ರಿಕ ನೆಲೆಗಟ್ಟಿನಲ್ಲಿ ಚಳವಳಿ ನಡೆಸಲು ನಿರ್ಧರಿಸಿದ್ದಾರೆ. ನಾಡಿನ ಪ್ರಜಾತಾಂತ್ರಿಕ ನಿಲುವುಗಳನ್ನು ಬೆಂಬಲಿಸು ವವರು ಈ ಚಾರಿತ್ರಿಕ ದಿನವನ್ನು ಸ್ವಾಗತಿಸಬೇಕು. ಕಳೆದ ಹತ್ತು-ಹನ್ನೊಂದು ವರ್ಷಗಳಿಂದ ನಾವು ಅವರನ್ನು ನೋಡಿಲ್ಲ. ಅವರ ಹೋರಾಟದ ಹಿನ್ನೆಲೆ ಗೊತ್ತಿರುವವರು ಹತಾಶ ಹೇಳಿಕೆಗಳನ್ನು ನೀಡುವುದಿಲ್ಲ. ಹಿಂದೆ ಪರಿಸರ ಚಳವಳಿ, ರೈತ ಚಳವಳಿ, ಭ್ರಷ್ಟಾಚಾರ ಮತ್ತು ಕೋಮುವಾದದ ವಿರುದ್ಧ ಅವರು ಹಲವು ಹೋರಾಟ ನಡೆಸಿದ್ದರು ಎಂದು ಅವರು ಸ್ಪಷ್ಟಪಡಿಸಿದರು.

ಕರ್ನಾಟಕ ವಿಮೋಚನಾ ರಂಗದಲ್ಲಿ ಗುರುತಿಸಿ ಕೊಳ್ಳುವುದಕ್ಕೂ ಮೊದಲು ಪತ್ರಕರ್ತರಾಗಿದ್ದಾಗಲೇ ಮೂರು ಬಾರಿ ಅವರ ಮೇಲೆ ಹಲ್ಲೆ ನಡೆದಿದ್ದವು. ಆಗ ಅವರ ರಕ್ಷಣೆಗೆ ಯಾರೂ ಬಂದಿರಲಿಲ್ಲ. ಅಂತಹ ಸಂದರ್ಭದಲ್ಲಿ ಸಶಸ್ತ್ರ ಹೋರಾಟದ ತೀರ್ಮಾನ ಅವರಿಗೆ ಅನಿವಾರ್ಯವಾಗಿತ್ತು. 2003ರಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಉಳಿಸಿ ಹೋರಾಟದಲ್ಲಿ ಅವರನ್ನು ಕೊನೆಯ ಬಾರಿ ನೋಡಿದ್ದೇವೆ. ಈ ಸಂದರ್ಭದಲ್ಲಿ ಹಲವು ಪ್ರಗತಿಪರ ಹೋರಾಟಗಾರರ ವಿರುದ್ಧ ಪೊಲೀಸರು ಸುಳ್ಳು ಕೇಸುಗಳನ್ನು ದಾಖಲಿಸಿದ್ದರು. ಅನೇಕ ಅಮಾಯಕರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗಿತ್ತು ಎಂದು ಮಲ್ಲಿಗೆ ಆರೋಪಿಸಿದರು.

2013-14ರ ಸಮಯದಲ್ಲಿ ಇಂತಹ ದೌರ್ಜನ್ಯ ವನ್ನು ಎದುರಿಸಲು ಸಾಧ್ಯವಾಗುವುದಿಲ್ಲ ಎಂಬ ತೀರ್ಮಾನಕ್ಕೆ ತಂದೆಯವರು ಬಂದಿದ್ದರು. ಆಗ ಇಡೀ ನಮ್ಮ ಕುಟುಂಬವೇ ಅವರೊಂದಿಗೆ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದೆವು. ಆದರೆ ನಿಧಾನವಾಗಿ ನಮ್ಮ ಕುಟುಂಬದೊಂದಿಗೆ ಅವರ ಸಂಪರ್ಕ ಕಡಿಮೆಯಾಯಿತು. ಈ ವೇಳೆಗಾಗಲೇ ಸರಕಾರ ಅವರನ್ನು ಭಯೋತ್ಪಾದಕರ ರೀತಿಯಲ್ಲಿ ನೋಡಿಕೊಂಡಿತ್ತು. ಅವರ ತಲೆಗೆ ಬಹುಮಾನ ಘೋಷಿಸಿ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿತ್ತು. ಈಗ ನೋಡಿದರೆ ಅವರ ಮೇಲೆ ಒಂದೇ ಒಂದು ಪ್ರಕರಣ ಮಾತ್ರವೇ ದಾಖಲಾಗಿರುವುದು ಸ್ಪಷ್ಟವಾಗುತ್ತಿದೆ ಎಂದರು

ಸಮಾಜದಲ್ಲಿ ಅಮೂಲಾಗ್ರ ಬದಲಾವಣೆ ಬೇಕು ಎಂಬ ಕಾರಣಕ್ಕೆ ಅವರು ಹೋರಾಟಕ್ಕೆ ಬಂದಿದ್ದರು. ದಲಿತ, ಪರಿಸರ, ರೈತ ಚಳವಳಿಗಳನ್ನು ಕಟ್ಟಿ ಬೆಳೆಸಿದ್ದವರು ಅವರು, ಹೋರಾಟಕ್ಕೆ ಪ್ರಜಾತಾಂತ್ರಿಕ ಅವಕಾಶ ಸಿಗದೇ ಇದ್ದಾಗ ಸಶಸ್ತ್ರ ಚಳವಳಿಗೆ ಧುಮುಕಿದ್ದರು. ಮುಖ್ಯವಾಹಿನಿಗೆ ಬರುತ್ತಿರುವ ಪ್ರಕ್ರಿಯೆಯನ್ನು ಟೀಕಿಸುತ್ತಾ ಕಾಡಿನಲ್ಲಿದ್ದರೆ ಸಮಾಜಕ್ಕೆ ಕಂಟಕ ಎಂದು ಭಾವಿಸುವುದಾದರೆ ಅವರು ಕ್ರಿಯಾಶೀಲರಾಗಿರುತ್ತಾರೆ ಎಂದರ್ಥ. ಅದೇ ವ್ಯಕ್ತಿ ಮುಖ್ಯವಾಹಿನಿಗೆ ಬಂದರೆ ಏನೂ ಪ್ರಯೋಜನವಿಲ್ಲ ಎಂದು ನುಡಿದರು.

ಕಾಡಿನಲ್ಲಿ ಬದುಕಲಾಗದೇ ಮುಖ್ಯವಾಹಿನಿಗೆ ಬರುತ್ತಿದ್ದರೆ ಎಂದು ಭಾವಿಸುವುದಾದರೆ ಈ ಅಭಿಪ್ರಾಯದಲ್ಲೇ ವೈರುಧ್ಯವಿದೆ. ಈ ರೀತಿ ಮನೋಭಾವನೆ ಹೊಂದಿರುವವರು ಅವರ ಅಭಿಪ್ರಾಯದ ಬಗ್ಗೆ ಅವಲೋಕನ ಮಾಡಿ ಕೊಳ್ಳಬೇಕು. ತಂದೆಯವರನ್ನು ಬಂಧಿಸಬೇಕು ಎಂದು ಕೇಳುವುದರಲ್ಲಿ ಅರ್ಥವಿಲ್ಲ. ಹಲವು ವರ್ಷಗಳ ಹೋರಾಟದ ನಂತರ ಓರ್ವ ಪರಿಪಕ್ವ ನೇತಾರರಾಗಿ ಅವರು ಹೊರ ಬರುತ್ತಿದ್ದಾರೆ. ಇದೊಂದು ಚಾರಿತ್ರಿಕ ಸಂದರ್ಭ ಎಂದು ಅವರು ವಿವರಿಸಿದರು

ಸಿರಿಮನೆ ನಾಗರಾಜುರೊಂದಿಗೆ ಹಲವು ಯುವಕರು ಕಾಡು ಸೇರಿದರು ಎನ್ನುವ ಆರೋಪ ಸುಳ್ಳು. ತಂದೆಯವರು ಸಹ ಸಾಕೇತ್ ರಾಜನ್ ಅವರನ್ನು ಹಿಂಬಾಲಿಸಿ ಹೋದದ್ದಲ್ಲ. ಎಲ್ಲರೂ ಸ್ವತಂತ್ರ ಚಿಂತನೆ ನಡೆಸಿ ಹೋಗಿದ್ದಾರೆ. ಪತ್ನಿ ಹೇಮಲತಾ ಮಾತನಾಡಿ, ಅನೇಕ ರೈತಪರ, ದಲಿತಪರ ಹೋರಾಟಗಳು ಸ್ಥಗಿತಗೊಂಡಿದೆ. ಅಂತಹ ಹೋರಾಟಗಳಿಗೆ ಪ್ರಜಾತಾಂತ್ರಿಕ ನೆಲೆಯಲ್ಲಿ ಜೀವ ತುಂಬುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪತಿ ಸಿರಿಮನೆ ನಾಗರಾಜ್ ಓರ್ವ ಪ್ರಜಾತಾಂತ್ರಿಕ ಹೋರಾಟಗಾರರಾಗಿ ಹೊರಹೊಮ್ಮಲಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದರು.

Write A Comment