ಭುವನೇಶ್ವರ, ಡಿ.5: ಮೂವತ್ತೈದನೆ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಮೆಂಟ್‌ಗೆ ಶನಿವಾರ ಚಾಲನೆ ದೊರೆಯಲಿದ್ದು, ಇಲ್ಲಿನ ಕಳಿಂಗ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತದ ಹಾಕಿ ತಂಡ ಜರ್ಮನಿ ತಂಡವನ್ನು ಎದುರಿಸಲಿದೆ.
36 ವರ್ಷಗಳ ಇತಿಹಾಸವನ್ನು ಹೊಂದಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ವರೆಗೆ ಭಾರತಕ್ಕೆ ಪ್ರಶಸ್ತಿ ಎತ್ತಲು ಸಾಧ್ಯವಾಗಲಿಲ್ಲ. 1982ರಲ್ಲಿ ಮೂರನೆ ಸ್ಥಾನ ಪಡೆದಿರುವುದು ಭಾರತದ ದೊಡ್ಡ ಸಾಧನೆ. ಆರು ಬಾರಿ ನಾಲ್ಕನೆ ಸ್ಥಾನದೊಂದಿಗೆ ಭಾರತ ಅಭಿಯಾನ ಕೊನೆಗೊಳಿಸಿತ್ತು.
13 ಬಾರಿ ಚಾಂಪಿಯನ್ಸ್ ಟ್ರೋಫಿ ಜಯಿಸಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಜಯ ಗಳಿಸಿರುವ ಭಾರತದ ಹಾಕಿ ತಂಡ ಜರ್ಮನಿಯ ವಿರುದ್ಧ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.
ಆಸ್ಟ್ರೇಲಿಯ ಸತತ ಆರನೆ ಬಾರಿ ಪ್ರಶಸ್ತಿ ಎತ್ತುವ ಕನಸು ಕಾಣುತ್ತಿದೆ. ಅದು ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಯಶಸ್ವಿ ತಂಡ. ಅದು 13 ಬಾರಿ ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ಜರ್ಮನಿ 9 ಬಾರಿ, ಹಾಲೆಂಡ್ 8, ಪಾಕಿಸ್ತಾನ 3 ಮತ್ತು ಸ್ಪೇನ್ 1 ಬಾರಿ ಪ್ರಶಸ್ತಿ ಎತ್ತಿದೆ. 2012ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಆಸ್ಟ್ರೇಲಿಯ ತಂಡ ಹಾಲೆಂಡ್‌ನ್ನು 2-1 ಅಂತರದಲ್ಲಿ ಮಣಿಸಿ ಸತತ ಐದನೆ ಬಾರಿ ಪ್ರಶಸ್ತಿ ಬಾಚಿಕೊಂಡಿತ್ತು.
ಚಾಂಪಿಯನ್ಸ್ ಟ್ರೋಫಿ ಒಲಿಂಪಿಕ್ಸ್, ವಿಶ್ವಕಪ್‌ನ್ನು ಹೊರತುಪಡಿಸಿದರೆ ವಿಶ್ವದ ಮೂರನೆ ಉನ್ನತ ಪ್ರಶಸ್ತಿಯಾಗಿದೆ. ಒಂಬತ್ತು ದಿನಗಳ ಕಾಲ ನಡೆಯಲಿರುವ ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನಲ್ಲಿ 2016ರ ವಿಶ್ವಕಪ್‌ಗೆ ತಯಾರಿಗೆ ವಿವಿಧ ತಂಡಗಳಿಗೆ ಉತ್ತಮ ಅವಕಾಶ ದೊರೆಯಲಿದೆ. ಆಸ್ಟ್ರೇಲಿಯ ತಂಡ ವಿಶ್ವಕಪ್ ಹಾಗೂ ಕಾಮನ್‌ವೆಲ್ತ್ ಗೇಮ್‌ನಲ್ಲಿ ಚಿನ್ನದ ಪದಕ ಬಾಚಿಕೊಂಡಿದ್ದು, ಇನ್ನೊಂದು ಪ್ರಶಸ್ತಿ ಎತ್ತಲು ನೋಡುತ್ತಿದೆ. ಕಳೆದ ಜೂನ್‌ನಲ್ಲಿ ಹಾಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ತಂಡ ಹಾಲೆಂಡ್‌ನ್ನು 6-1 ಅಂತರದಲ್ಲಿ ಬಗ್ಗು ಬಡಿದು ಪ್ರಶಸ್ತಿ ಜಯಿಸಿತ್ತು.
ಈ ಟೂರ್ನಮೆಂಟ್‌ನಲ್ಲಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ 6 ತಂಡಗಳಾದ ಆಸ್ಟ್ರೇಲಿಯ , ಜರ್ಮನಿ, ಹಾಲೆಂಡ್, ಇಂಗ್ಲೆಂಡ್, ಭಾರತ ಮತ್ತು ಪಾಕಿಸ್ತಾನ ತಂಡಗಳು ಸೇರಿದಂತೆ 8 ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿವೆೆ. ಬೆಲ್ಜಿಯಂ ಮತ್ತು ಅರ್ಜೆಂಟೀನ ಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಇನ್ನೆರಡು ತಂಡಗಳು.
ಒಲಿಂಪಿಕ್ಸ್ ಚಾಂಪಿಯನ್ ಜರ್ಮನಿ ತಂಡ ಕಳೆದ ವರ್ಲ್ಡ್‌ಕಪ್‌ನಲ್ಲಿ ಆರನೆ ಸ್ಥಾನದೊಂದಿಗೆ ಅಭಿಯಾನ ಕೊನೆಗೊಳಿಸಿತ್ತು. ಅದು ಚಾಂಪಿಯನ್ಸ್ ಟ್ರೋಫಿಯಲ್ಲಿ ಇದೀಗ ತನ್ನ ಸ್ಥಾನವನ್ನು ಉತ್ತಮಪಡಿಸಲು ನೋಡುತ್ತಿದೆ.
ವಿಶ್ವ ಹಾಕಿ ರ್ಯಾಂಕಿಂಗ್‌ನಲ್ಲಿ 2ನೆ ಸ್ಥಾನದಲ್ಲಿರುವ ಹಾಲೆಂಡ್‌ಲಂಡನ್ ಒಲಿಂಪಿಕ್ಸ್ ಮತ್ತು ಆಸ್ಟ್ರೇಲಿಯದಲ್ಲಿ ನಡೆದ ವಿಶ್ವಕಪ್‌ನಲ್ಲಿ ಎರಡನೆ ಸ್ಥಾನ ಪಡೆದಿತ್ತು. ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನಲ್ಲಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.
ಇಂಗ್ಲೆಂಡ್ ವಿಶ್ವಕಪ್‌ನಲ್ಲಿ ನಾಲ್ಕನೆ ಸ್ಥಾನ ಪಡೆದಿತ್ತು. ಚಾಂಪಿಯನ್ಸ್ ಟ್ರೋಫಿಯಲ್ಲಿ ಚೊಚ್ಚಲ ಪ್ರಶಸ್ತಿಯ ಕಡೆಗೆ ನೋಡುತ್ತಿದೆ. ಆತಿಥೇಯ ಭಾರತ ತಂಡ ಕೋಚ್ ಆಸ್ಟ್ರೇಲಿಯದ ಟೆರ್ರಿ ವಾಲ್ಶ್ ನಿರ್ಗಮನದ ಬಳಿಕ ಮೊದಲ ಟೂರ್ನಮೆಂಟ್‌ನಲ್ಲಿ ಭಾಗವಹಿಸುತ್ತಿದೆ. ಇಂಚೋನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಚಿನ್ನ ಜಯಿಸಲು ವಾಲ್ಶ್ ಸಮರ್ಥ ಮಾರ್ಗದರ್ಶನ ನೀಡಿದ್ದರು.
ಇತ್ತೀಚೆಗೆ ಅವರು ಕೋಚ್ ಹುದ್ದೆಗೆ ರಾಜೀನಾಮೆ ನೀಡಿ ತವರಿಗೆ ವಾಪಸಾಗಿದ್ದರು. ಏಶ್ಯನ್ ಗೇಮ್ಸ್‌ನಲ್ಲಿ ಪ್ರಶಸ್ತಿ ಎತ್ತಿದ ಭಾರತ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದೆ. ಭಾರತದ ಸಾಂಪ್ರದಾಯಿಕ ಎದುರಾಳಿ ಹಾಗೂ ಚೊಚ್ಚಲ ಚಾಂಪಿಯನ್ ಪಾಕಿಸ್ತಾನ ತಂಡ ವಿಶ್ವಕಪ್ ಮತ್ತು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲಗೊಂಡಿತ್ತು. ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ.