ನವದೆಹಲಿ: ಬೆಳಗಾವಿಯಲ್ಲಿ ಶೀಘ್ರವೇ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ (ಕೆಎಟಿ) ಪೀಠ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಇಲ್ಲಿ ಹೇಳಿದರು.
ರಾಜ್ಯದಲ್ಲಿ ಬಾಕಿ ಉಳಿದಿರುವ ಯೋಜನೆಗಳ ಬಗ್ಗೆ ಚರ್ಚಿಸಲು ರಾಜ್ಯವನ್ನು ಪ್ರತಿನಿಧಿಸುವ ಸಂಸದರಿಗೆ ಔತಣಕೂಟ ಏರ್ಪಡಿಸಿದ್ದ ಸಂದರ್ಭದಲ್ಲಿ ಅವರು ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದರು.
ಬೆಳಗಾವಿ ಜಿಲ್ಲೆಯ ವಕೀಲರು ನಡೆಸುತ್ತಿರುವ ಪ್ರತಿಭಟನೆ ಕೈಬಿಡಲು ಮನವಿ ಮಾಡಿದ ಅವರು, ಕೆಎಟಿ ಪೀಠಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈ ವಿಷಯವನ್ನು ಶೀಘ್ರವೇ ಸಚಿವ ಸಂಪುಟದ ಮುಂದಕ್ಕೆ ತರಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದರು.
ರೈಲ್ವೆ ಯೋಜನೆ: ರಾಜ್ಯದಲ್ಲಿ ಬಾಕಿ ಉಳಿದಿರುವ ರೈಲ್ವೆ ಯೋಜನೆಗಳಿಗೆ ಬೇಕಾದ ಹಣ ಹಾಗೂ ಉಚಿತ ಭೂಮಿಯನ್ನು ಒಪ್ಪಂದದ ಪ್ರಕಾರ ಒದಗಿಸಲು ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ ೧೪ ಯೋಜನೆಗಳಿಗೆ ರೈಲ್ವೆ ಇಲಾಖೆ ಮಂಜೂರಾತಿ ನೀಡಿದ್ದು ಇವುಗಳಿಗೆ ಶೇ ೫೦ರಷ್ಟು ಹಣವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದರು.
ಕಲಬುರ್ಗಿ ಇಎಸ್‌ಐ ಆಸ್ಪತ್ರೆಯ ಖಾಲಿ ಹುದ್ದೆಗಳನ್ನು ತುಂಬಲಾಗುವುದು. ದಾವಣಗೆರೆ, ಮೈಸೂರು, ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ಇಎಸ್‌ಐ ಆಸ್ಪತ್ರೆಗಳ ನಿರ್ಮಾಣವನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಪಶ್ಚಿಮ ಘಟ್ಟಗಳ ಸಂರಕ್ಷಣೆ ಸಂಬಂಧ ಕಸ್ತೂರಿ ರಂಗನ್ ವರದಿಯ ಬಗ್ಗೆ ರಾಜ್ಯ ಸರ್ಕಾರ ಡಿ.೧೫ರೊಳಗೆ ತನ್ನ ಅಭಿಪ್ರಾಯವನ್ನು ಸಲ್ಲಿಸಬೇಕಿದ್ದು, ಈ ಗಡುವನ್ನು ಮಂದೂಡಲು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಸರ್ಕಾರವು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ ಈ ವರದಿ ಬಗ್ಗೆ ಅಂತಿಮ ಅಭಿಪ್ರಾಯಕ್ಕೆ ಬರಲಿದೆ ಎಂದರು.
ಹಾಸನ ಜಿಲ್ಲೆಯಲ್ಲಿ ಎತ್ತಿನಹೊಳೆ ಜಾರಿಗೊಳಿಸಿದರೆ ಅದರಿಂದ ದಕ್ಷಿಣ ಕನ್ನಡದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಭಯವನ್ನು ಹೋಗಲಾಡಿಸಲು ಮಂಗಳೂರಿನಲ್ಲಿ ಜನಪ್ರತಿನಿಧಿಗಳನ್ನು ಒಳಗೊಂಡ ಸಭೆಯನ್ನು ನಡೆಸಲಾಗುವುದು ಸಿಎಂ ಹೇಳಿದರು.
