ಬೆಂಗಳೂರು: ಕನ್ನಡದ ಏಳ್ಗೆಗಾಗಿ ಜೀವ ತೇಯ್ದ ಆ ನಾಲ್ವರು ಹಿರಿಯರು ಕುರ್ಚಿ ಮೇಲೆ ಮುದುಡಿ ಕುಳಿತಿದ್ದರು. ವೃದ್ಧಾಪ್ಯ ಹಾಗೂ ಬಡತನ ಎರಡೂ ಅವರನ್ನು ಸಂಪೂರ್ಣವಾಗಿ ಕುಗ್ಗಿಸಿಬಿಟ್ಟಿತ್ತು. ಬಿಬಿಎಂಪಿ ಪ್ರೀತಿಯಿಂದ ಕರೆದು ಕೊಟ್ಟ ಚೆಕ್ಗಳು ಅವರಲ್ಲಿ ಹರ್ಷದ ಧಾರೆಯನ್ನು ಉಕ್ಕಿಸಿದ್ದವು. ಸಾರ್ಥಕ ಕೆಲಸ ಮಾಡಿದ ಖುಷಿಯಲ್ಲಿ ಚೆಕ್ ಕೊಟ್ಟವರ ಕಣ್ಣುಗಳು ಸಹ ತೇವಗೊಂಡಿದ್ದವು.
ಮೇಯರ್ ಎನ್.ಶಾಂತಕುಮಾರಿ ಅವರ ಕಚೇರಿ ಬುಧವಾರ ಅತ್ಯಂತ ಹೃದಯಸ್ಪರ್ಶಿ ಸಮಾರಂಭವೊಂದಕ್ಕೆ ಸಾಕ್ಷಿಯಾಯಿತು. ನಾಲ್ವರು ಕನ್ನಡ ಚೇತನಗಳಿಗೆ ಬಿಬಿಎಂಪಿ ಸದಸ್ಯರು ತಮ್ಮ ಒಂದು ತಿಂಗಳ ವೇತನವನ್ನು ಅರ್ಪಿಸುವ ಮೂಲಕ ಮಾನವೀಯತೆ ತೋರಿದರು. ಕನ್ನಡಪ್ರೇಮವನ್ನೂ ಮೆರೆದರು.
ಹಿರಿಯ ಚಿತ್ರ ಸಾಹಿತಿ ಚಿಟ್ಟನಹಳ್ಳಿ ವೆಂಕಟಕೃಷ್ಣಭಟ್ಟ (ಸಿ.ವಿ.) ಶಿವಶಂಕರ್, ಪೋಷಕನಟ ಶನಿ ಮಹದೇವಪ್ಪ, ಕನ್ನಡಕ್ಕೆ ಬಾವುಟವನ್ನು ವಿನ್ಯಾಸ ಮಾಡಿಕೊಟ್ಟ ಮ. ರಾಮಮೂರ್ತಿ ಸ್ಮರಣೆಯಲ್ಲಿ ಅವರ ಪತ್ನಿ ಕಮಲಮ್ಮ ಮತ್ತು ಕನ್ನಡ ನಾಡಿಗಾಗಿ ಪ್ರಾಣಾರ್ಪಣೆ ಮಾಡಿದ ಮು.ಗೋವಿಂದರಾಜು ನೆನಪಿನಲ್ಲಿ ಅವರ ಪತ್ನಿ ಧನಭಾಗ್ಯಮ್ಮ ಅವರಿಗೆ ಬಿಬಿಎಂಪಿ ತಲಾ ರೂ. 5 ಲಕ್ಷ ಸಹಾಯಧನದ ಚೆಕ್ ವಿತರಿಸಿತು. ‘ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ’ ಎಂಬ ಗೀತೆಯನ್ನು ಕನ್ನಡಕ್ಕೆ ಕೊಟ್ಟ ಶಿವಶಂಕರ್ ಅವರಿಗೆ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್, ‘ನಿಮ್ಮ ಆರ್ಥಿಕ ಸ್ಥಿತಿ ಹೇಗಿದೆ’ ಎಂದು ಕೇಳಿದ್ದರಂತೆ. ಅದಕ್ಕೆ ‘ಇದು ನನ್ನ ಸ್ವಾಭಿಮಾನದ ಪ್ರಶ್ನೆ; ವಿವರಿಸಲಾರೆ ಎಂಬ ಉತ್ತರ ನೀಡಿದ್ದೆ’ ಎಂದು ಶಿವಶಂಕರ್ ನೆನಪಿಸಿಕೊಂಡರು.
ಗೀತೆ ರಚಿಸಿದ ಕವಿ ಬಡತನದಲ್ಲೇ ಉಳಿದರೆ, ಹಾಡು ಹಾಡಿದ ಹಲವು ಗಾಯಕರು ದುಡ್ಡು ಮಾಡಿದರು. ಅದನ್ನು ಗುರುತಿಸಿದ ಬಿಬಿಎಂಪಿ ಈ ಗೀತ ರಚನೆಕಾರನಿಗೆ ಸಹಾಯಧನ ನೀಡಿ ಸಂಭ್ರಮಿಸಿತು. ಸನ್ಮಾನದ ವೇಳೆ ‘ಬೆಳೆದಿದೆ ನೋಡಾ ಬೆಂಗಳೂರು ನಗರ…’, ‘ಕನ್ನಡದಾ ರವಿ ಮೂಡಿ ಬಂದಾ…’ ಸಾಲುಗಳೂ ತೇಲಿಬಂದವು.
ಕನ್ನಡಕ್ಕಾಗಿ ಹೋರಾಡಿದ ಮ.ರಾಮಮೂರ್ತಿ ಬಾವಿ ತೋಡಿಸುವಾಗ ಉಂಟಾದ ಭೂಕುಸಿತದಲ್ಲಿ ಮಕ್ಕಳಸಹಿತ ಸಮಾಧಿ ಆಗಿದ್ದರು. ಅವರ ಪತ್ನಿ ಕಮಲಮ್ಮ ರಾಮಕೃಷ್ಣ ಆಶ್ರಮದಲ್ಲಿ ಸೇವೆ ಸಲ್ಲಿಸುತ್ತಲೇ ಕಾಲ ದೂಡುತ್ತಾ ಬಂದವರು. ಚೆಕ್ ಸ್ವೀಕರಿಸುವಾಗ ಕಣ್ಣೀರು ಒರೆಸಿಕೊಳ್ಳುತ್ತಾ, ‘ಈ ಗಳಿಗೆಯಲ್ಲಿ ಅವರಿದ್ದಿದ್ದರೆ ಸಂತೋಷ ಪಡುತ್ತಿದ್ದರು’ ಎಂದರು.
ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಮುಂದೆ ‘ಶನಿ ಮಹಾತ್ಮೆ’ ನಾಟಕವಾಡಿದ್ದ ಶನಿ ಮಹದೇವಪ್ಪ, ‘ನಾನು ಪಡೆದ ಗರಿಷ್ಠ ಸಂಭಾವನೆಯೇ ರೂ.16 ಸಾವಿರ. ನನ್ನ ಜೀವಮಾನದಲ್ಲಿ ಇಷ್ಟು ಹಣವನ್ನು ಎಂದಿಗೂ ನೋಡಿರಲಿಲ್ಲ. ಕಷ್ಟದ ದಿನಗಳಲ್ಲಾದ ಬಿಬಿಎಂಪಿಗೆ ಧನ್ಯವಾದ’ ಎಂದು ಗದ್ಗದಿತರಾಗಿ ಹೇಳಿದರು.
ಮು.ಗೋವಿಂದರಾಜು ಅವರು ಮಹಾಜನ್ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ರೈಲಿಗೆ ತಲೆ ಕೊಟ್ಟವರು. ರೈಲು ಹರಿದು ಗೋವಿಂದರಾಜು ಅವರ ದೇಹ ತುಂಡು ತುಂಡಾದ ಘಟನೆಯ ವಿವರ ಸಿಗುತ್ತಾ ಹೋದಂತೆ ಅಲ್ಲಿದ್ದವರ ಮನಸ್ಸುಗಳೆಲ್ಲ ಆರ್ದ್ರವಗೊಂಡಿದ್ದವು. ಅವರ ಪತ್ನಿ ಧನಭಾಗ್ಯಮ್ಮ ಬಿಬಿಎಂಪಿ ಶಾಲೆಯಲ್ಲೇ ಆಯಾ ಆಗಿದ್ದವರು. ಮಗನ ಮನೆಯಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿರುವ ಅವರಿಗೆ ಪತಿಯ ಸ್ಮರಣೆಯಲ್ಲಿ ಮಾತೇ ಹೊರಡಿಲ್ಲ. ಕಣ್ಣೀರು ಮಾತ್ರ ಹರಿಯುತ್ತಲೇ ಇತ್ತು.
