ಮನೆಗಳಲ್ಲಿ ಮುದ್ದಿಗಾಗಿ, ಪ್ರತಿಷ್ಠೆಯ ಸಂಕೇತವಾಗಿ ಹೆಚ್ಚಿನ ಜನರು ವಿವಿಧ ವಿದೇಶಿ ತಳಿಗಳ ನಾಯಿಗಳನ್ನು ಸಾಕುತ್ತಾರೆ. ಅವುಗಳಿಗಾಗಿ ಡಾಗ್ ಷೋ, ಗೆಟ್ಟುಗೆದರ್ ಆಯೋಜಿಸಲಾಗುತ್ತದೆ.
ಆದರೆ ಅದೇ ಬೀದಿ ನಾಯಿಗಳ ವಿಷಯಕ್ಕೆ ಬಂದರೆ; ಅವುಗಳನ್ನು ದತ್ತು ತೆಗೆದುಕೊಳ್ಳುವುದು ಇರಲಿ, ಹತ್ತಿರಕ್ಕೂ ಬರಲು ಬಿಡುವುದಿಲ್ಲ. ಬೀದಿನಾಯಿಗಳ ಬಗ್ಗೆ ಜನರಲ್ಲಿ ಇರುವ ತಪ್ಪು ಕಲ್ಪನೆ, ಕೀಳು ಭಾವನೆ ಹೋಗಲಾಡಿಸುವ ಹಾಗೂ ಅವುಗಳನ್ನು ದತ್ತು ಸ್ವೀಕರಿಸುವ ಪ್ರವೃತ್ತಿ ಬೆಳೆಸುವ ಸಲುವಾಗಿ ಶ್ವಾನಪ್ರಿಯರ ಗುಂಪೊಂದು ಕಳೆದ ಎರಡು ವರ್ಷಗಳಿಂದ ‘ದಿ ಗ್ರೇಟ್ ಇಂಡಿಯನ್ ಡಾಗ್ ಷೋ’ ಪ್ರಾಜೆಕ್ಟ್ ಅಡಿಯಲ್ಲಿ ವಿವಿಧ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದೆ. ಅದರ ಒಂದು ಭಾಗವಾಗಿ ಈ ಡಾಗ್ ಷೋ ನಡೆಯಲಿದೆ.
ಬೆರಳೆಣಿಕೆ ಜನರು ಮಾತ್ರ ಬೀದಿ ನಾಯಿಗಳನ್ನು ದತ್ತು ತೆಗೆದುಕೊಳ್ಳುತ್ತಿದ್ದಾರೆ. ಹೀಗೆ ಆಶ್ರಯ ಪಡೆದ ಬೀದಿ ನಾಯಿಗಳಿಗೆ ಶುದ್ಧ ತಳಿ ಶ್ವಾನಗಳಿಗಾಗಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಸಿಗುವುದು ತೀರಾ ಕಡಿಮೆ. ಅದಕ್ಕಾಗಿ ಬೀದಿ ನಾಯಿಗಳು ಒಂದೆಡೆ ಸೇರಿ, ಆಡಿ ಸಂತೋಷಪಡಲು ಅವಕಾಶ ಕಲ್ಪಸಲೆಂದು ಡಾಗ್ ಷೋ ಆಯೋಜಿಸಲಾಗಿದೆ. ಈ ಷೋನಲ್ಲಿ ಸಾಕಷ್ಟು ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಮೂರು ಮಂದಿ ತೀರ್ಪುಗಾರರು ಇರುತ್ತಾರೆ.
ಮುದ್ದಾಗಿ ಕಾಣುವ ಶ್ವಾನ, ಬುದ್ಧಿವಂತ ಶ್ವಾನ, ಅತಿ ತುಂಟ ಶ್ವಾನ, ಉತ್ತಮ ಆರೋಗ್ಯ ಹೊಂದಿರುವ ಶ್ವಾನ… ಹೀಗೆ 21 ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಈ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರುವ ಶ್ವಾನಗಳಿಗೆ ಬಹುಮಾನ ನೀಡಲಾಗುವುದು. ಅದರಲ್ಲಿ ಎಲ್ಲ ರೀತಿಯಲ್ಲೂ ಉತ್ತಮವಾಗಿರುವ ಶ್ವಾನಗಳಿಗೆ ಷೋ ಸ್ಟಾಪರ್ ಮೇಲ್ ಹಾಗೂ ಫೀಮೇಲ್ ಪ್ರಶಸ್ತಿಗಳನ್ನು ನೀಡಲಾಗುವುದು.
ವಿದೇಶಿ ನಾಯಿಗಳಿಗಿಂತ ಸ್ವದೇಶಿ ನಾಯಿಗಳು ಯಾವ ವಿಷಯದಲ್ಲಿ ಮುಂದಿರುತ್ತವೆ. ಅವುಗಳಿಂದ ಆಗುವ ಪ್ರಯೋಜನ ಹಾಗೂ ಅವುಗಳ ನಡುವಿನ ವ್ಯತ್ಯಾಸವನ್ನೂ ತಿಳಿಸಿಕೊಡಲಾಗುವುದು.
ಇಷ್ಟೇ ಅಲ್ಲದೆ ಶ್ವಾನಗಳನ್ನು ದತ್ತು ಪಡೆದ ನಂತರ ತಮ್ಮ ಜೀವನದಲ್ಲಿ ಆಗಿರುವ ಬದಲಾವಣೆಗಳು, ಅವುಗಳು ಸಿಕ್ಕಾಗ ಇದ್ದ ಪರಿಸ್ಥಿತಿ ಕುರಿತಂತೆ ಶ್ವಾನಗಳ ಮಾಲೀಕರು ಅನುಭವ ಹಂಚಿಕೊಳ್ಳಲಿದ್ದಾರೆ.
ವೈ.ಮಾನ್ಸಿ, ಡೇನಿಯಲ್ ಡಿ ಸಿಲ್ವಾ, ಕಾರ್ತಿಕ್ ಉಪಾಧ್ಯಾ, ಅರವಿಂದ್ ಭಟ್, ಸೈರಾ ಸಯಾನಿ, ಡೈಲಾನ್ ಪಿಂಟೊ, ವಿನಯ್ ನಾರಾಯಣಸ್ವಾಮಿ, ಜೆ.ಜೈ, ರುಷಿತ್ ರೆಡ್ಡಿ ಹಾಗೂ ಅಪರಾಜಿತ ಸೂದ್ ಅವರ ತಂಡ ಈ ಕಾರ್ಯಕ್ರಮವನ್ನು ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.
ಈ ಕಾರ್ಯಕ್ರಮದಿಂದ ಬರುವ ಹಣವನ್ನು ಬೀದಿ ನಾಯಿಗಳ ರಕ್ಷಣೆ ಹಾಗೂ ಆರೈಕೆಯಲ್ಲಿ ತೊಡಗಿರುವ ಇಂದಿರಾನಗರದ ‘ವಾಯ್ಸ್ ಆಫ್ ಸ್ಟ್ರೇ ಡಾಗ್’ ಸಂಸ್ಥೆಗೆ ನೀಡಲಾಗುತ್ತದೆ.
ದಿ ಗ್ರೇಟ್ ಇಂಡಿಯನ್ ಡಾಗ್ಷೋ ಹಾಗೂ ಇಂದಿರಾನಗರದ ವಾಯ್ಸ್ ಆಫ್ ಸ್ಟ್ರೇ ಡಾಗ್ಸ್ನ ಸಹಯೋಗದಲ್ಲಿ ಏರ್ಪಡಿಸಲಾಗಿರುವ ಶ್ವಾನಗಳ ಔತಣ ಕೂಟ ‘ದಿ ಗ್ರೇಟ್ ಇಂಡಿಯನ್ ಡಾಗ್ ಷೋ’ ಡಿಸೆಂಬರ್ 6ರಂದು ಆರ್.ಟಿ.ನಗರದ ‘ಪಟೇಲ್ ಇನ್’ನಲ್ಲಿ ಮಧ್ಯಾಹ್ನ 3ರಿಂದ 7ರವರೆಗೆ ನಡೆಯಲಿದೆ. ಅಪಘಾತಕ್ಕೀಡಾಗಿ ಬೀದಿಯಲ್ಲಿ ಬಿದ್ದಿರುವ, ಯಾರದ್ದೋ ಕ್ರೌರ್ಯಕ್ಕೆ ಬಲಿಯಾಗಿ ಬದುಕುಳಿದ ಹಾಗೂ ಪ್ರಾಣಿ ದಯಾ ಸಂಘಗಳಿಂದ ದತ್ತು ಸ್ವೀಕರಿಸಿರುವ ಬೀದಿ ನಾಯಿಗಳು ಮಾತ್ರ ಇದರಲ್ಲಿ ಭಾಗವಹಿಸಬಹುದು.
ಪ್ರದರ್ಶನದಲ್ಲಿ ಶ್ವಾನಗಳ ದಿನನಿತ್ಯದ ವಸ್ತುಗಳ ಮಾರಾಟ ಮಳಿಗೆಗಳಿರುತ್ತವೆ. ವುಗಳೊಂದಿಗೆ ನಾಯಿಗಳನ್ನು ದತ್ತು ನೀಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಇಲ್ಲಿ ದತ್ತು ಪಡೆಯುವ ನಾಯಿಗಳಿಗೆ ಉಚಿತ ವ್ಯಾಕ್ಸಿನೇಷನ್ ಲಭ್ಯವಿದ್ದು, ಅದನ್ನು ಸ್ಥಳದಲ್ಲಿ ನೀಡಲಾಗುತ್ತದೆ.
ಬೀದಿ ನಾಯಿಗಳನ್ನು ದತ್ತು ಸ್ವೀಕರಿಸಿರುವವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರು. ಕೇವಲ 60 ನಾಯಿಗಳಿಗೆ ಪ್ರವೇಶ. ಇಲ್ಲಿಯವರೆಗೆ 30 ನಾಯಿಗಳ ಮಾಲೀಕರು ನೋಂದಣಿ ಮಾಡಿಕೊಂಡಿದ್ದು, ಅದು ಪೂರ್ತಿಯಾಗದಿದ್ದಲ್ಲಿ ಮಾತ್ರ ಕಾರ್ಯಕ್ರಮದ ದಿನವೂ ನೋಂದಣಿ ಮಾಡಿಕೊಳ್ಳಲಾಗುವುದು. ನೋಂದಣಿಗೆ ಉಚಿತ ಅವಕಾಶ ಕಲ್ಪಿಸಲಾಗಿದ್ದು, ಪ್ರತಿ ಸ್ಪರ್ಧಿಗೂ ಗುಡಿ ಬ್ಯಾಗ್ ನೀಡಲಾಗುವುದು.
ನೋಂದಣಿ ಮಾಡಿಕೊಳ್ಳಲು ಸಂಪರ್ಕಿಸಿ: ದೂರವಾಣಿ– 9964097956
ಇಮೇಲ್– thegreatindiandogshow@gmail.com
ವೆಬ್ಸೈಟ್– www.thegreatindiandogshow.com
ಸ್ವದೇಶಿ ನಾಯಿಗಳ ಜೀವಿತಾವಧಿ ಹೆಚ್ಚು
ತಾಯ್ನಾಡನ್ನು ಬಿಟ್ಟು ಬರುವ ವಿದೇಶಿ ತಳಿಗಳ ಶ್ವಾನಗಳ ಜೀವಿತಾವಧಿ ತುಂಬಾ ಕಡಿಮೆ. ಅದರಲ್ಲೂ ವಯಸ್ಸಾಗುತ್ತಿದ್ದಂತೆ ನಾನಾ ರೀತಿಯ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಅದೇ ಸ್ವದೇಶಿ ನಾಯಿಗಳು (ಬೀದಿ ನಾಯಿಗಳು) ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿರುವ ಕಾರಣ ಅವುಗಳ ಜೀವಿತಾವಧಿ ಹೆಚ್ಚು ಹಾಗೂ ಅವುಗಳ ಪಾಲನೆಗೆ ತುಂಬಾ ವೆಚ್ಚವಾಗುವುದಿಲ್ಲ. ಅದಕ್ಕಾಗಿ ಬೀದಿ ನಾಯಿಗಳನ್ನು ದತ್ತು ಸ್ವೀಕರಿಸುವಂತೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸ್ವದೇಶಿ ನಾಯಿಗಳನ್ನು ಬೀದಿ ನಾಯಿಗಳು ಎಂದು ಕರೆಯುವುದನ್ನು ತಪ್ಪಿಸಲು ನಿರಂತರವಾಗಿ ಪ್ರಯತ್ನಿಸುತ್ತೇವೆ.
–ವೈ.ಮಾನ್ಸಿ, ಶ್ವಾನ ಪ್ರೇಮಿ
