ಕರ್ನಾಟಕ

ನಾಲ್ವರು ಯುವತಿಯರ ಸ್ಟಾರ್ಟ್‌ಅಪ್‌; ಶೂನ್ಯದಿಂದ ಕೈತುಂಬಾ ಆದಾಯ!

Pinterest LinkedIn Tumblr

ಹ

ಈಗ ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರ ಸೇರಿದಂತೆ ವಿವಿಧ ಉದ್ಯಮ ವಲಯಗಳಲ್ಲಿ ಸ್ಟಾರ್ಟ್‌ಅಪ್‌ಗಳ ಮಾತು ಹೆಚ್ಚು ಕೇಳಿಬರುತ್ತಿದೆ. ಆಸಕ್ತಿ, ಅನುಭವ, ಮಾರುಕಟ್ಟೆ ಮಾಹಿತಿ, ಸ್ವಲ್ಪವೇ ಹಣ ಇದ್ದರೂ ಸಾಕು ಸ್ಟಾರ್ಟ್‌ಅಪ್‌ಗೆ ಚಾಲನೆ ನೀಡಬಹುದು. ಒಬ್ಬರೋ, ಇಬ್ಬರೋ ಅಥವಾ ನಾಲ್ಕೈದು ಮಂದಿ ಸಮಾನ ಮನಸ್ಕರು ಸೇರಿಕೊಂಡು ಒಂದು ತಂಡ ರಚಿಸಿಕೊಂಡು ವೃತ್ತಿ ಬದುಕಿಗೆ ನಾಂದಿ ಹಾಡಬಹುದು, ಸ್ಟಾರ್ಟ್‌್ಅಪ್‌ ಮೊಳಕೆ ಒಡೆಯುವಂತೆ ಮಾಡಬಹುದು.

ಇದೇ ದಿಕ್ಕಿನಲ್ಲಿ ಸಾಗಿದ್ದಾರೆ ಹುಬ್ಬಳ್ಳಿಯ ನಾಲ್ವರು ಯುವತಿಯರು. ಅವರು ಆರಿಸಿ ಕೊಂಡಿರುವ ಕ್ಷೇತ್ರ ಒಳಾಂಗಣ ವಿನ್ಯಾಸ. ಆರಂಭ ದಲ್ಲಿ ಹೂಡಿದ ಬಂಡವಾಳ ಶೂನ್ಯ. ಆದರೆ, ಸಮಾನ ಅಭಿರುಚಿ, ಆಸಕ್ತಿ, ಕೆಲಸದಲ್ಲಿನ ಬದ್ಧತೆಯ ಕಾರಣದಿಂದಾಗಿಯೇ ಕೆಲವೇ ತಿಂಗಳುಗಳ ಅಲ್ಪಾವಧಿಯಲ್ಲಿ ಈ ಯುವತಿ ಯರು, ಹುಬ್ಬಳ್ಳಿ ಭಾಗದಲ್ಲಿನ ಉತ್ತಮ ಒಳಾಂಗಣ ವಿನ್ಯಾಸಕಿಯರು ಎಂದು ಗ್ರಾಹಕರಿಂದ ಮೆಚ್ಚುಗೆಯನ್ನೂ ಗಳಿಸಿದ್ದಾರೆ.

‘ಮನೆಯ ಹೊರಾಂಗಣ ಮತ್ತು ಒಳಾಂಗಣ ಸೌಂದರ್ಯ, ಅಲಂಕಾರ, ವಿನ್ಯಾಸದ ಬಗ್ಗೆ ಜನರಲ್ಲಿ ಇತ್ತೀಚಿನ ವರ್ಷಗಳಿಂದ ಆಸಕ್ತಿ ಹೆಚ್ಚುತ್ತಿದೆ. ಈ ಅಂಶವೇ ನಮ್ಮನ್ನು ಈ ಒಳಾಂಗಣ ವಿನ್ಯಾಸ ಉದ್ಯಮದತ್ತ ಗಮನ ಹರಿಸುವಂತೆ ಮಾಡಿದೆ. ಕೆಲಸದೆಡೆಗಿನ ಬದ್ಧತೆ, ಗ್ರಾಹಕರಿಗೆ ಸ್ಪಂದಿಸುವುದರಿಂದಾಗಿಯೇ ಈ ಭಾಗದಲ್ಲಿ ನಮ್ಮ ಒಳಾಂಗಣ ವಿನ್ಯಾಸ (ಇಂಟೀರಿಯರ್‌ ಡಿಸೈನ್‌) ತಂಡಕ್ಕೆ ಸಾಕಷ್ಟು ಒಳ್ಳೆಯ ಹೆಸರಿದೆ’ ಎನ್ನುವಾಗ ಆ ನಾಲ್ವರೂ ಯುವತಿಯರ ಮೊಗದಲ್ಲಿ ಆತ್ಮವಿಶ್ವಾಸ ಮಿನುಗುತ್ತದೆ.

ಶೂನ್ಯದಿಂದ ₨6.50 ಆದಾಯ!
ಹುಬ್ಬಳ್ಳಿಯ ಇಂಟರ್‌ನ್ಯಾಷನಲ್‌ ಫ್ಯಾಷನ್‌ ಡಿಸೈನಿಂಗ್‌ (ಐಎನ್‌ಎಫ್‌ಡಿ) ಕಾಲೇಜಿನಲ್ಲಿ ಇಂಟೀರಿಯರ್‌ ಡಿಸೈನಿಂಗ್‌ ವಿಭಾಗದಲ್ಲಿ ಒಂದು ವರ್ಷದ ಡಿಪ್ಲೊಮಾ ಕೋರ್ಸ್‌ ಮುಗಿಸಿರುವ ಈ ನಾಲ್ವರು ಯುವತಿಯರ ಹೆಸರು ಸಂಜನಾ ಜರ್ತಾರ್ಗರ್‌, ನಿಷಾ ಓಸ್ವಾಲ್‌, ಪ್ರಿಯಾಂಕಾ ಪವಾರ್‌ ಮತ್ತು ಶ್ರೀನಾ ಮೊರ್ಜರಿಯಾ.

ವ್ಯಾಸಂಗ ಮಾಡುತ್ತಿರುವಾಗಲೇ ಒಳಾಂಗಣ ವಿನ್ಯಾಸವನ್ನು ವೃತ್ತಿಯಂತೆಯೇ ನಿರ್ವಹಿಸಲಾ ರಂಭಿಸಿದ ಈ ಯುವ ಉದ್ಯಮಿಗಳ ಶಿಕ್ಷಣ ಹಿನ್ನೆಲೆ ವಿಭಿನ್ನ. ಸಂಜನಾ ಪಿಯುಸಿ ಪೂರ್ಣ ಗೊಳಿಸಿದ್ದಾರೆ. ನಿಷಾ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ.

ಪ್ರಿಯಾಂಕಾ ಸಿವಿಲ್‌ ಎಂಜಿನಿಯರಿಂಗ್‌ ಪದವೀಧರೆ. ಶ್ರೀನಾ ಬ್ಯಾಚುಲರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಷನ್‌ (ಬಿಸಿಎ) ಪದವೀಧರೆ. ತೀವ್ರ ಆಸಕ್ತಿ ಹಾಗೂ ಒಂದೇ ಬಗೆಯ ಆಲೋಚನಾ ಕ್ರಮ ಇವರನ್ನು ಒಂದೇ ಹಡಗಿನ ಪ್ರಯಾಣಿಕರನ್ನಾಗಿಸಿದೆ. ಒಳಾಂಗಣ ವಿನ್ಯಾಸ ಕ್ಷೇತ್ರದಲ್ಲಿಯೇ ವೃತ್ತಿ ಬದುಕು ಕಂಡುಕೊಳ್ಳುವಂತೆ ಮಾಡಿದೆ.

ಮೆಚ್ಚುಗೆ, ಕೈತುಂಬಾ ಹಣ
‘ಮೊದಲಿನಿಂದಲೂ ಭಿನ್ನ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದೆಂದರೆ ಖುಷಿ. ಇದೇ ಕಾರಣವಾಗಿ ಫ್ಯಾಷನ್‌ ಡಿಸೈನಿಂಗ್‌ ಕ್ಷೇತ್ರ ಆರಿಸಿಕೊಂಡೆ. ಧಾರವಾಡದಲ್ಲಿ ಕೋರ್ಸ್‌ಗೂ ಸೇರಿದೆ. ಅಲ್ಲಿ ಒಟ್ಟುಗೂಡಿದ ನಾಲ್ವರೂ ವ್ಯಾಸಂಗ ಮಾಡುತ್ತಿರುವಾಗಲೇ ಹಲವು ಮನೆಗಳಿಗೆ ಒಳಾಂಗಣ ವಿನ್ಯಾಸವನ್ನೂ ವೃತ್ತಿಪರರಂತೆಯೇ ಮಾಡಿ ಮೆಚ್ಚುಗೆ ಪಡೆದಿದ್ದೇವೆ. ಕೈತುಂಬಾ ಹಣವನ್ನೂ ಕಂಡಿದ್ದೇವೆ’ ಎನ್ನುತ್ತಾರೆ ನಿಷಾ.

16 ಮನೆಗಳಿಗೆ ವಿನ್ಯಾಸ
ಕಲಿಯುವಾಗಲೇ ಗಳಿಸಲಾರಂಭಿಸಿದ್ದ ಈ ಯುವತಿಯರು, ಈವರೆಗೆ ಒಟ್ಟು 16 ಮನೆಗಳಿಗೆ ಒಳಾಂಗಣ ವಿನ್ಯಾಸ ನಡೆಸಿದ್ದಾರೆ. ಅಲ್ಲದೇ ಇನ್ನೂ 6 ಮನೆಗಳ ವಿನ್ಯಾಸದಲ್ಲಿ ತೊಡಗಿದ್ದಾರೆ.

ಕೆಲವೇ ತಿಂಗಳಲ್ಲಿ ಸ್ವಂತ ಕಂಪೆನಿ
ಮನೆಯಲ್ಲಿಯೇ ಯೋಜನೆ, ವಿನ್ಯಾಸ, ಚರ್ಚೆ, ಸಂಶೋಧನೆ ನಡೆಯುತ್ತಿದ್ದು, ಕೆಲವೇ ತಿಂಗಳಲ್ಲಿ ಕಂಪೆನಿ ಆರಂಭಿಸುವ ಯೋಜನೆಯಲ್ಲಿದ್ದಾರೆ. ಶೂನ್ಯ ಬಂಡವಾಳದಿಂದ ನಡಿಗೆ ಆರಂಭಿಸಿರುವ ಈ ಯುವತಿಯರು ಕನಿಷ್ಠ 20 ಯುವತಿಯರಿಗೆ ಉದ್ಯೋಗ ನೀಡುವ ಉದ್ದೇಶವನ್ನೂ ಹೊಂದಿದ್ದಾರೆ.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮಿ ಗಳಾಗಬೇಕು. ಅಂದಾಗ ಮಾತ್ರವೇ ಲಿಂಗ ತಾರ ತಮ್ಯ ಸರಿಪಡಿಸಬಹುದು ಎನ್ನುವುದು ಈ ನಾಲ್ವರೂ ಯುವತಿಯರ ಒಮ್ಮತದ ಅಭಿಪ್ರಾಯ.

ಸದ್ಯ ತಾವು ವಾಸವಿರುವ ಮನೆಯನ್ನೇ ಒಳಾಂಗಣ ವಿನ್ಯಾಸ ಚಟುವಟಿಕೆಗೆ ಕಚೇರಿಯಾ ಗಿಸಿಕೊಂಡು ಕೆಲಸ ನಿರ್ವಹಿಸುತ್ತಿರುವ ಈ ಯುವತಿಯರು, ಸ್ವಂತದ ಕಂಪೆನಿಗಾಗಿ ಸೂಕ್ತ ಸ್ಥಳದ ಹುಡುಕಾಟದಲ್ಲಿದ್ದಾರೆ.

ಒಳಾಂಗಣ ವಿನ್ಯಾಸದಲ್ಲೂ ಹಲವು ವಿಧಗಳಿವೆ. ಮನೆ, ಕಂಪೆನಿ, ವಾಣಿಜ್ಯ ಮಳಿಗೆ, ವಾಹನಗಳ ಷೋರೂಂ… ಹೀಗೆ ಬೇರೆ ಬೇರೆ ಚಟುವಟಿಕೆಗಳಿಗೆ ತಕ್ಕಂತೆ ಅಲ್ಲಿನ ಅನುಕೂಲ ನೋಡಿಕೊಂಡು ವಿನ್ಯಾಸ ಮಾಡಬೇಕಾಗುತ್ತದೆ ಎನ್ನುತ್ತಾ ಒಳಾಂಗಣ ವಿನ್ಯಾಸ ವೃತ್ತಿ ಕ್ಷೇತ್ರದಲ್ಲಿನ ತಮ್ಮ ಒಂದೂವರೆ ವರ್ಷಗಳ ಅನುಭವ ಬಿಚ್ಚಿಡುವ ಈ ಯುವ ಉದ್ಯಮಿಗಳು, ಸದ್ಯ ಮನೆಗಳ ಒಳಾಂಗಣ ವಿನ್ಯಾಸಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ.

ಪೋಷಕರು, ಗೆಳೆಯರ ಪರಿಚಿತರು, ಸಂಬಂಧಿಕರ ಮನೆಗಳಿಗೆ ಒಳಾಂಗಣ ವಿನ್ಯಾಸ ಮಾಡುವುದ ರೊಂದಿಗೆ ಇವರ ಕೆಲಸ ಆರಂಭವಾಗಿದ್ದು, ಸದ್ಯ ಹುಬ್ಬಳ್ಳಿ–ಧಾರವಾಡ, ಗದಗ, ಪುಣೆಯಲ್ಲಿ ತಮ್ಮ ಕೈಚಳಕ, ಅಭಿರುಚಿ, ವೃತ್ತಿಪರತೆಯನ್ನು ಪ್ರದರ್ಶಿಸಿದ್ದಾರೆ.

‘ನಾವು ಮಾಡುವ ಒಳಾಂಗಣ ವಿನ್ಯಾಸದ ಶೈಲಿಗಳು ಇಷ್ಟವಾಗಿ, ಸಾಕಷ್ಟು ಮಂದಿ ನಮಗೆ ಅವಕಾಶ ನೀಡುತ್ತಿದ್ದಾರೆ. ಗ್ರಾಹಕರೊಂದಿಗೆ ನೇರ ಸಂಪರ್ಕ ಇಟ್ಟುಕೊಂಡಿದ್ದೇವೆ. ಅವರ ಆಸಕ್ತಿಗಳನ್ನು ಗಮನಿಸಿ ಅದಕ್ಕೆ ತಕ್ಕಂತೆಯೇ ಕೆಲಸ ಮಾಡಬೇಕಾಗುತ್ತದೆ. ಈ ಕ್ಷೇತ್ರದಲ್ಲಿ ದುಡಿಯಲು ಸಾಕಷ್ಟು ಸಾವಧಾನ ಬೇಕು’ ಎನ್ನುತ್ತಾರೆ ಪ್ರಿಯಾಂಕ.

ಗ್ರಾಹಕರ ಬಯಕೆ, ಯೋಚನೆಯ ಧಾಟಿ ಬದಲಾಗಿದೆ. ತಂತ್ರಜ್ಞಾನದ ಕ್ರಾಂತಿ ಸಾಕಷ್ಟು ಅವಕಾಶ ಒದಗಿಸುವುದರ ಜೊತೆಗೆ ತೀವ್ರ ಸ್ಪರ್ಧೆಯನ್ನೂ ತಂದೊಡ್ಡಿದೆ. ಬೆರಳ ತುದಿಯಲ್ಲಿ ಮಂದಿಗೆ ಮಾಹಿತಿ ಸಿಗುತ್ತದೆ. ನಾವು ಹೇಳಿದ ವಿನ್ಯಾಸವನ್ನು ಗೂಗಲ್‌ನಲ್ಲಿಯೂ ಜಾಲಾಡಿ ನೋಡುವ ಚತುರರಿದ್ದಾರೆ.

ಇಂತಹ ಸಂದರ್ಭದಲ್ಲಿ ಕೆಲವು ಗ್ರಾಹಕರಿಗೆ ವಿಷಯ ಮನವರಿಕೆ ಮಾಡಿಕೊಡುವುದು ಸವಾಲಿನ ಕೆಲಸವಾಗುತ್ತದೆ. ಇದಕ್ಕಾಗಿಯೇ ಹಿಂದೆ ನಮ್ಮ ಹಿರಿಯರು ಮನೆ ನಿರ್ಮಿಸುತ್ತಿದ್ದ ಪರಿ, ಹಳೆಯ ಕಾಲದ ಮನೆಗಳ ಶೈಲಿಗಳನ್ನೂ ಅರಿಯಬೇಕಾಗುತ್ತದೆ. ಇದಕ್ಕಾಗಿ ಹಲವು ನಾಗರಿಕತೆಗಳನ್ನೂ ಅಧ್ಯಯನ ಮಾಡುತ್ತೇವೆ.

ಸ್ಥಳೀಯ ಅಭಿರುಚಿಯನ್ನೂ ಉಳಿಸಿಕೊಂಡು, ಅವಕಾಶವಿದ್ದೆಡೆ ಅಂತರರಾಷ್ಟ್ರೀಯ ಮಟ್ಟದನ್ನೂ ಜತೆಗೂಡಿ ಬಹಳ ವಿಶೇಷವಾದ ಒಳಾಂಗಣ ವಿನ್ಯಾಸವನ್ನು ಗ್ರಾಹಕರಿಗೆ ಒದಗಿಸುವ, ಅತ್ಯಂತ ಕಡಿಮೆ ವೆಚ್ಚದಲ್ಲಿ ಅಳವಡಿಸುವ ನಿಟ್ಟಿನಲ್ಲಿ ನಾವು ಯೋಚಿಸುತ್ತಿರುವುದು ನಮ್ಮ ಕೆಲಸವನ್ನು ಸುಲಭವಾಗಿಸಿದೆ.

ಇದೆಲ್ಲದರ ಜೊತೆಗೆ ಗ್ರಾಹಕರಿಗೆ ಸಮಯ ಮಿತಿಯಲ್ಲಿಯೇ ಕೆಲಸ ಮಾಡಿಕೊಡುವುದು, ಮನೆ ಮಂದಿಯ ಅಭಿಪ್ರಾಯಗಳನ್ನೆಲ್ಲಾ ಸಂಗ್ರಹಿಸಿಕೊಂಡು, ಒಟ್ಟಾರೆ ವಿನ್ಯಾಸಕ್ಕೆ ರೂಪುಕೊಡುವುದೂ ಮುಖ್ಯವಾಗುತ್ತದೆ. ಈ ಕೆಲಸದಲ್ಲೂ ನಾವು ಯಶಸ್ಸು ಕಂಡಿದ್ದೇವೆ. ಸಾಕಷ್ಟು ಕಂಪೆನಿಗಳು ನಿಯಮಾವಳಿಗಳನ್ನು ರೂಢಿಸಿಕೊಂಡು ಅವುಗಳಿಗೆ ಜೋತು ಬೀಳುವುದನ್ನು ಕಂಡ ಜನರು, ಈಗ ನಮ್ಮ ತಂಡದ ಕೆಲಸವೇ ಉತ್ತಮ ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಈ ಯುವ ಉದ್ಯಮಿಗಳು.

ಮೆಚ್ಚುಗೆ ನಂತರ ಶುಲ್ಕ ನಿಗದಿ
ಇಷ್ಟೇ ಶುಲ್ಕ ನೀಡಿ ಎಂದೂ ಕೇಳುವುದಿಲ್ಲ. ಮೊದಲಿಗೆ ಕೆಲಸ ಗ್ರಾಹಕರಿಗೆ ಇಷ್ಟವಾಗಿಸುವುದು. ಗ್ರಾಹಕರು ನಮಗೆ ಪ್ರತಿಕ್ರಿಯಿಸುವಾಗಲೇ ಇವರು ಒಳಾಂಗಣ ವಿನ್ಯಾಸದ ಕೆಲಸ ನೀಡುತ್ತಾರೆ ಅಥವಾ ಇಲ್ಲ ಎಂಬುದನ್ನು ತೀರ್ಮಾನಿಸುತ್ತೇವೆ. ಅವರು ಬ್ಯುಸಿನೆಸ್‌ ನೀಡದಿದ್ದರು ನಮ್ಮ ಕೆಲವು ಆಲೋಚನೆಗಳು ಅವರಿಗೆ ಇಷ್ಟವಾದರ ಸಾಕು. ಎಂದಾದರೂ ಒಂದು ದಿನ ನಮ್ಮ ಮನೆಯ ಕದ ತಟ್ಟುತ್ತಾರೆ ಎಂಬ ವಿಶ್ವಾಸ ಎನ್ನುವ ಅವರು ಎಲ್ಲವನ್ನೂ ಹಣದಿಂದಲೇ ಅಳೆಯಲಾಗದು ಎನ್ನುತ್ತಾರೆ.

ನಾವು ಕೆಲಸ ಮಾಡುವ ಕ್ಷೇತ್ರದ ಮಾಹಿತಿಯಷ್ಟೇ ಅಲ್ಲ, ಗ್ರಾಹಕರ ಮನಸ್ಥಿತಿ, ಮಾರುಕಟ್ಟೆಯ ಏರಿಳಿತ, ತಂತ್ರಜ್ಞಾನದ ಪಲ್ಲಟ, ಪ್ರತಿಸ್ಪರ್ಧಿಗಳ ಯೋಜನೆಗಳು, ಕಾನೂನಿನ ಮಿತಿ ಹೀಗೆ ಸಾಕಷ್ಟು ವಿಚಾರಗಳ ಕಡೆ ಗಮನ ಹರಿಸಬೇಕಾಗುತ್ತದೆ. ಈ ಎಲ್ಲಾ ಸವಾಲುಗಳನ್ನು ಎದುರಿಸಿ ಮುನ್ನಡೆಯುತ್ತಿದ್ದೇವೆ ಎನ್ನುವ ಈ ಯುವತಿಯರ ಆತ್ಮವಿಶ್ವಾಸ ಮಹಿಳಾ ಸಮೂಹಕ್ಕೆ ಪ್ರೇರಣೆಯಾಗಬಹುದು.

ಒಳಾಂಗಣ ವಿನ್ಯಾಸ ವೈವಿಧ್ಯ
ನಗರಗಳಲ್ಲಿ ಕಟ್ಟಡ ನಿರ್ಮಾಣ ಹೆಚ್ಚಾದಂತೆ ಒಳಾಂಗಣ ವಿನ್ಯಾಸಕ್ಕೂ ಭಾರಿ ಬೇಡಿಕೆ ಬಂದಿದೆ. ಜನರು ಹೊಸತನಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಮನೆಯ ವಾತಾವರಣ ನಮ್ಮ ದೈನಂದಿನ ಚಟುವಟಿಕೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಕಿಟಕಿ ಎಷ್ಟು ಅಗಲ, ಎತ್ತರ ಇರಬೇಕು, ಮನೆಯ ಯಾವ ಯಾವ ಭಾಗಗಳಲ್ಲಿರಬೇಕು, ಅದಕ್ಕೆ ಯಾವ ಬಣ್ಣದ, ಎಂತಹ ವಿನ್ಯಾಸದ ಕರ್ಟನ್‌ ಹಾಕಬೇಕು? ಗೋಡೆಗಳಿಗೆ ಯಾವ ಬಣ್ಣದ ಪೇಂಟ್‌ ಮಾಡಿಸಿದರೆ ಚೆನ್ನ? ಕನ್ನಡಿ ಎಲ್ಲಿಡಬೇಕು, ಫ್ಯಾನ್‌ ಎಲ್ಲಿ ಅಳವಡಿಸಿದರೆ ಉತ್ತಮ, ಕೊಠಡಿಗಳಲ್ಲಿ ಮಂಚ ಎಲ್ಲಿರಬೇಕು ಎಷ್ಟು ಅಗಲ ಉದ್ದ ಎತ್ತರ ಇರಬೇಕು? ಮನೆಗೆ ಯಾವ ರೀತಿಯ ಬಾಗಿಲುಗಳನ್ನು ಬಳಸಬೇಕು.

ಬಣ್ಣಗಳ ಕಂಬಿನೇಷನ್‌, ಹಜಾರದ ಅಂದ, ಅಡುಗೆ ಕೋಣೆ, ಮಕ್ಕಳ ಕೋಣೆಯ ವಿನ್ಯಾಸ, ಅಲ್ಮೆರಾ, ಲಾಕರ್‌ಗಳನ್ನು ಎಲ್ಲಿಡಬೇಕು? ತಾರಸಿಯಿಂದ ಎಂತಹ ಶೈಲಿಯ ಬಣ್ಣದ ದೀಪ ತೂಗುಬಿಡಬೇಕು? ಕುರ್ಚಿ, ಸೋಫಾ ಎಲ್ಲಿಟ್ಟರೆ ಚೆನ್ನ? ನೆಲಹಾಸು, ದೇವರ ಕೋಣೆ ಹೇಗಿರಬೇಕು?… ಹೀಗೆ ಒಟ್ಟಾರೆ ಒಂದು ಮನೆಯ ವಿನ್ಯಾಸದ ಕುರಿತು ಚಿಂತಿಸಿ ಯೋಜಿಸುವುದೇ ಒಳಾಂಗಣ ವಿನ್ಯಾಸ. ಕುಟುಂಬದ ಸದಸ್ಯರೆಲ್ಲರ ಭಿನ್ನ ಅಭಿರುಚಿಗೆ ತಕ್ಕಂತೆ ಮನೆಯ  ವಾತಾವರಣವನ್ನು ಆಹ್ಲಾದಕರವಾಗಿಸುವುದೇ ಒಳಾಂಗಣ ವಿನ್ಯಾಸದ ಮಹತ್ವ. ಈ ನಿಟ್ಟಿನಲ್ಲಿ ಒಳಾಂಗಣ ವಿನ್ಯಾಸಕಾರರ ಪಾತ್ರ ಮಹತ್ವದ್ದು ಎನ್ನುವುದು ಈ ಯುವತಿಯರ ಸ್ಪಷ್ಟನುಡಿ.

‘ಹೊಸ ಪ್ರತಿಭೆಗೆ ಅವಕಾಶ ನೀಡಬೇಕು’
ಹುಬ್ಬಳ್ಳಿಯ ಜೈರಾಮ್‌ ಪವಾರ್‌ ಅವರ 9 ಕೊಠಡಿಗಳ ಮೂರಂತಸ್ತಿನ ಬಂಗಲೆ, ಹುಬ್ಬಳ್ಳಿಯ ಅರ್ಜುನ್ ಶಿರಾಳ್ಕರ್‌ ಅವರ 4 ಕೊಠಡಿಗಳ ಮನೆ, ಸೈಯದ್‌ ಟಿಪ್ಪು ಸುಲ್ತಾನ್‌, ಪ್ರಕಾಶ್‌ ಕೊಠಾರಿ, ಗದಗದಲ್ಲಿ ಬೇಕರಿ, ಪುಣೆಯಲ್ಲಿ ಕಲ್ಯಾಣ್‌ ಹೀಗೆ ಒಟ್ಟು 16 ಮಂದಿಯ ಮನೆಯ ಒಳಾಂಗಣ ವಿನ್ಯಾಸವನ್ನು ಈ ಯುವತಿಯರು ಮಾಡಿದ್ದು, 6 ಯೋಜನೆಗಳು ಚಾಲ್ತಿಯಲ್ಲಿವೆ.

‘ಗೆಳೆಯರ ಮನೆಯ ಒಳಾಂಗಣ ವಿನ್ಯಾಸ ನೋಡಿದೆವು. ಅಲ್ಲಿನ ಶೈಲಿ ತುಂಬಾ ಇಷ್ಟವಾಯಿತು. ನಮ್ಮ ಮನೆಯವರೆಲ್ಲರೂ ಹೋಗಿ ನೋಡಿಕೊಂಡು ಬಂದು  ಯುವತಿಯರ ತಂಡ ಕೈಗೊಂಡ ಒಳಾಂಗಣ ವಿನ್ಯಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇವರಿಗೇ ನಮ್ಮ ಮನೆಯ ಒಳಾಂಗಣ ವಿನ್ಯಾಸದ ಜವಾಬ್ದಾರಿ ನೀಡಬೇಕೆಂದು ನಿರ್ಧರಿಸಿದೆವು.

ನಮಗೆ ಇಷ್ಟವಾಗುವಂತೆ ಎಂಟು ತಿಂಗಳಲ್ಲಿ ಒಳಾಂಗಣ ವಿನ್ಯಾಸ ಪೂರ್ಣಗೊಳಿಸಿಕೊಟ್ಟಿದ್ದಾರೆ. ನಮ್ಮ ಪರಿಚಿತರಿಗೂ ಈ ಯುವತಿಯರ ತಂಡದ ಕೆಲಸವನ್ನು ತೋರಿಸಿ ಒಳಾಂಗಣ ವಿನ್ಯಾಸಕ್ಕೆ ಅವರನ್ನೇ ಆರಿಸಿಕೊಳ್ಳುವಂತೆ ಶಿಫಾರಸು ಸಹ ಮಾಡಿದ್ದೇವೆ. ಪ್ರತಿಭಾನ್ವಿತರಾದ ಇವರಿಗೆ ಅವಕಾಶಕೊಡಬೇಕು. ಇಲ್ಲವಾದರೆ ಅವರು ಸ್ವಂತ ಕಂಪೆನಿ ಆರಂಭಿಸಿ, ನಾಲ್ಕಾರು ಜನರಿಗೆ ಕೆಲಸಕೊಡುವುದಾದರೂ ಹೇಗೆ?’ ಎನ್ನುತ್ತಾರೆ ಹುಬ್ಬಳ್ಳಿಯ ಗಂಗಸಾ ಪವಾರ್‌.

Write A Comment