ಕರ್ನಾಟಕ

ಏಡ್ಸ್‌ಗೆ ತಪ್ಪಿದ ವಿಶೇಷ ಆದ್ಯತೆ? ರಾಜ್ಯದಲ್ಲಿ 36,976 ಜನ ಮಹಾಮಾರಿಗೆ ಬಲಿ

Pinterest LinkedIn Tumblr

44-7

ಬಾಗಲಕೋಟೆ: ಮದ್ದಿಲ್ಲದೇ ಮಸಣಕ್ಕೆ ಒಯ್ಯುವ ಮಹಾಮಾರಿ ಎಂದೇ ಬಿಂಬಿತವಾಗಿದ್ದ ಏಡ್ಸ್‌ಗೆ ಇನ್ನು ಮುಂದೆ ವಿಶೇಷ ಆದ್ಯತೆ ಇಲ್ಲ.
ಹೌದು, ಮನುಷ್ಯರಿಗೆ ಬರುವ ಇತರೆ ಕಾಯಿಲೆಗಳಂತೆ ಎಚ್‌ಐವಿಯೂ ಒಂದು ಎಂದು ಪರಿಗಣಿಸಿರುವ ಕೇಂದ್ರ ಸರ್ಕಾರ, ಏಡ್ಸ್‌ ಜಾಗೃತಿ ಮತ್ತು ತಡೆಗೆ ಇದುವರೆಗೆ ನೀಡಿದ್ದ ವಿಶೇಷ ಆದ್ಯತೆಯನ್ನು ಕೈಬಿಡಲಿದೆ ಎಂದು ತಿಳಿದುಬಂದಿದೆ.

ಏಡ್ಸ್‌ ರೋಗಿಗಳ ಆರೈಕೆಗೆ ಮತ್ತು ಏಡ್ಸ್‌ ರೋಗದ ಬಗ್ಗೆ ಜನಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮ ಅನುಷ್ಠಾನಕ್ಕಾಗಿ ನೀಡಲಾಗುತ್ತಿದ್ದ ವಿಶೇಷ ಅನುದಾನವನ್ನು ಸ್ಥಗಿತಗೊಳಿಸಿ, ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಲ್ಲಿ ಇದನ್ನು ಸೇರ್ಪಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಜತೆಗೆ ಏಡ್ಸ್‌ ವಿರುದ್ಧದ ಜನಜಾಗೃತಿ ಆಂದೋಲನಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು  ವಿದೇಶಿ ಎನ್‌ಜಿಒಗಳಿಂದ ದೇಶಕ್ಕೆ ಹರಿದುಬರುತ್ತಿದ್ದ ವಿಶೇಷ ಧನಸಹಾಯ ಕೂಡ ಇನ್ನು ಮುಂದೆ ಬಂದ್‌ ಆಗಲಿದೆ ಎಂದು ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣ ಸಂಸ್ಥೆ ಖಚಿತಪಡಿಸಿದೆ.

36,976 ಜನ ಬಲಿ: ದೇಶದಲ್ಲಿ ಅತೀ ಹೆಚ್ಚು ಏಡ್ಸ್‌ ರೋಗಿಗಳಿರುವ ಐದು ರಾಜ್ಯದಲ್ಲಿ ಕರ್ನಾಟಕವೂ ಒಂದಾಗಿದ್ದು, ರಾಜ್ಯದಲ್ಲಿ ಇದುವರೆಗೆ ಈ ಮಹಾಮಾರಿಗೆ 36,976 ಜನ ತಮ್ಮ ಅಮೂಲ್ಯ ಜೀವ ಕಳೆದುಕೊಂಡಿದ್ದಾರೆ.

ಇಳಿಮುಖ: ರಾಜ್ಯದಲ್ಲಿ ಏಡ್ಸ್‌ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದ್ದು, 2014ರಲ್ಲಿ ಒಟ್ಟಾರೆ ಸೋಂಕಿತರಲ್ಲಿ ಶೇ 0.53ರಷ್ಟು ಇಳಿಮುಖವಾಗಿದೆ ಎಂದು ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣ ಸಂಸ್ಥೆ (ಕೆಎಸ್‌ಎಪಿಎಸ್‌) ಯೋಜನಾ ನಿರ್ದೇಶಕ ಎಸ್‌.ಜಿ. ರವೀಂದ್ರ ‘ಪ್ರಜಾವಾಣಿ’ಗೆ ಭಾನುವಾರ ತಿಳಿಸಿದರು.

4444(1)

ರಾಜ್ಯದಲ್ಲಿ 2013–14ರಲ್ಲಿ 16,64,848 ಜನರನ್ನು ಪರೀಕ್ಷಿಸಲಾಗಿ 29,473 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. 11,78,907 ಗರ್ಭೀಣಿಯರನ್ನು ಪರೀಕ್ಷಿಸಲಾಗಿ ಶೇ 0.12 ಎಚ್‌ಐವಿ ಸೋಂಕಿತರು ಕಂಡುಬಂದಿದ್ದಾರೆ ಎಂದರು.

2014ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ ವರೆಗೆ 9,64,868 ಜನರನ್ನು ಪರೀಕ್ಷಿಸಲಾಗಿ ಶೇ 1.44 ಜನ ಎಚ್‌ಐವಿ ಸೋಂಕಿತರನ್ನು ಪತ್ತೆಹಚ್ಚಲಾಗಿದೆ. 6,45,300 ಗರ್ಭಿಣಿಯರನ್ನು ಪರೀಕ್ಷಿಸಲಾಗಿ ಶೇ 0.11ರಷ್ಟು ಎಚ್‌ಐಚಿ ಸೋಂಕಿತರು ಕಂಡು­ಬಂದಿದ್ದಾರೆ ಎಂದು ಅವರು ತಿಳಿಸಿದರು.

ಎಚ್‌ಐವಿ ಬಾಧಿತರ ಶುಶ್ರೂಷೆಗಾಗಿ ರಾಜ್ಯದಲ್ಲಿ ಪ್ರಸ್ತುತ 61 ಎಆರ್‌ಟಿ ಕೇಂದ್ರಗಳು, 194 ಲಿಂಕ್‌ ಆ್ಯಂಟಿ ರೆಟ್ರೋವೈರಲ್‌ ಥೆರಪಿ ಮತ್ತು ಲಿಂಕ್‌ ಪ್ಲಸ್‌ ಆ್ಯಂಟಿ ರೆಟ್ರೋವೈರಲ್‌ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 1679 ಸಮಗ್ರ ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ (ಐಸಿಟಿಸಿ) ಎಚ್‌ಐವಿ ಆಪ್ತ ಸಮಾಲೋಚನೆ ಮತ್ತು ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

Write A Comment