ಕರಾವಳಿ

ಕ್ಯಾನ್ಸರ್ ಪೀಡಿತೆ ಬಾಲಕಿಗೆ ಚಿಕಿತ್ಸೆಗೆ ನೆರವಾಗಿ : ಅಮಾಯಕಿ ಬಾಲಕಿಯ ಭಾವಚಿತ್ರ ಬಳಸಿದ ವಂಚಕ : ಸುಳ್ಳು ಜಾಹಿರಾತು ಮೂಲಕ ಹಣ ಸಂಗ್ರಹಿಸಿ ಪರಾರಿ :

Pinterest LinkedIn Tumblr

Chiting_case_puttur_1

ಪುತ್ತೂರು,ನ.29 : ಸುಳ್ಳು ಮಾಹಿತಿ, ನಕಲಿ ವಿಳಾಸದೊಂದಿಗೆ ಬ್ಯಾಂಕ್ ಅಕೌಂಟ್ ನಂಬ್ರವನ್ನು ನಮೂದಿಸಿ ಎಳೆಯ ಪ್ರಾಯದ ಬಾಲಕಿಯೊಬ್ಬಳಿಗೆ ರಕ್ತದ ಕ್ಯಾನ್ಸರ್ ಕಾಯಿಲೆ ಇದೆ ಎಂದು ಸ್ಥಳೀಯ ಪತ್ರಿಕೆಯೊಂದರಲ್ಲಿ ವರದಿ ಬಿತ್ತರಿಸಿ ಸಾರ್ವಜನಿಕ ದಾನಿಗಳಿಂದ ದೊಡ್ಡ ಮೊತ್ತದ ನೆರವು ಪಡೆದು ವಂಚಿಸಿದ ಪ್ರಕರಣವೊಂದು ಪುತ್ತೂರಿನಲ್ಲಿ ಬೆಳಕಿಗೆ ಬಂದಿರುವುದಾಗಿ ಸುದ್ದಿ ಹರಡಿದೆ. ದೂರು ದಾಖಲಾಗದ ಮತ್ತು ಪೊಲೀಸರು ಸರಿಯಾಗಿ ತನಿಖೆ ನಡೆಸದ ಕಾರಣದಿಂದಾಗಿ ಈ ವಂಚನೆಯ ಸೂತ್ರದಾರ ಯಾರೆಂಬುವುದು ಇನ್ನೂ ನಿಗೂಢವಾಗಿ ಉಳಿದಿದೆ.

ರಕ್ತದ ಕ್ಯಾನ್ಸರ್‍ನಿಂದ ಬಳಲುತ್ತಿರುವ 6 ವರ್ಷ ಪ್ರಾಯದ ತನ್ನ ಮಗಳು ರಶ್ಮಿಯ ಚಿಕಿತ್ಸೆಗೆ ನೆರವಾಗುವಂತೆ ಕೋಡಿಂಬಾಡಿ ಗ್ರಾಮದ ಪರಿವಾರ ಕಾನದ ದಿ.ನಾಗರಾಜ್ ಅವರ ಪತ್ನಿ ಸುಶೀಲಾ ಎಂಬವರ ಹೆಸರಿನಲ್ಲಿ ಮನವಿ ಮಾಡಿರುವ ಸುದ್ದಿ ಪ್ರಕಟವಾಗಿತ್ತು. ಅನಾರೋಗ್ಯಕ್ಕೊಳಗಾಗಿದ್ದ ಬಾಲಕಿಯನ್ನು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಿದಾಗ ಆಕೆಗೆ ರಕ್ತದ ಕ್ಯಾನ್ಸರ್ ಕಾಯಿಲೆ ಇರುವುದು ತಿಳಿದು ಬಂದಿತ್ತು. ಚಿಕಿತ್ಸೆಗೆ ರೂ.8ಲಕ್ಷ ಖರ್ಚಾಗಲಿದೆ ಎಂದು ಅಲ್ಲಿನ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿರುವ ತನಗೆ ಅಷ್ಟೊಂದು ದೊಡ್ಡ ಮೊತ್ತದ ಹಣವನ್ನು ಹೊಂದಿಸಲು ಸಾಧ್ಯವಿಲ್ಲ. ಪತಿ ಎರಡು ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಇಲ್ಲಿಯವರೆಗೆ ಬಾಲಕಿಯ ಚಿಕಿತ್ಸೆಗೆ ಸುಮಾರು ಒಂದು ಲಕ್ಷದಷ್ಟು ಖರ್ಚಾಗಿದೆ. ಈ ಹಣವನ್ನು ಸಾಲ ಮಾಡಿ ಭರಿಸಲಾಗಿದೆ ಎಂದು ಪ್ರಚಾರ ಮಾಡಲಾಗಿತ್ತು.

ಬಾಲಕಿಯ ಚಿಕಿತ್ಸೆಗೆ ನೆರವು ನೀಡುವವರು ಪುತ್ತೂರಿನ ಕೆ.ಪಿ.ಕಾಂಪ್ಲೆಕ್ಸ್‍ನಲ್ಲಿರುವ ವಿಜಯಾ ಬ್ಯಾಂಕಿನಲ್ಲಿ ಸುಶೀಲಾ ಅವರ ಖಾತೆಗೆ ಜಮಾ ಮಾಡುವಂತೆ ಮನವಿ ಮಾಡಲಾಗಿತ್ತು.
ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗೆ ಸ್ಪಂದಿಸಿ ಕ್ಯಾನ್ಸರ್ ಪೀಡಿತ ಬಾಲಕಿಗೆ ನೆರವಾಗುವ ಉತ್ತಮ ಉದ್ದೇಶದೊಂದಿಗೆ ಮಾನವೀಯ ನೆಲೆಯಲ್ಲಿ ಹಲವಾರು ಮಂದಿ ಈ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು. ಸುಮಾರು 1.35 ಲಕ್ಷಕ್ಕೂ ಅಧಿಕ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿತ್ತು ಎನ್ನಲಾಗಿದೆ. ಈ ನಡುವೆ ಬ್ಯಾಂಕ್ ಖಾತೆಗೆ ಜಮೆಯಾದ ಹಣವನ್ನು ಎಟಿ‌ಎಂ ಮೂಲಕ ಹಲವು ಬಾರಿ ಡ್ರಾ ಮಾಡಲಾಗಿದ್ದು, ಯಾರು ಈ ಹಣವನ್ನು ಡ್ರಾ ಮಾಡಿದ್ದಾರೆ ಎನ್ನುವುದು ನಿಗೂಢವಾಗಿದೆ.

ಪ್ರಸ್ತುತ ನೀಡಲಾಗಿರುವ ಬ್ಯಾಂಕ್ ಅಕೌಂಟ್ ನಂಬ್ರ ಬನ್ನೂರು ಗ್ರಾಮದ ಆನೆಮಜಲು ನಿವಾಸಿ ಸುಶೀಲಾ ಅವರದ್ದಾಗಿದೆ ಎಂದು ಸುದ್ದಿಯಾಗಿದೆ. ಇವರಿಗೆ ಮೂವರು ಮಕ್ಕಳಿದ್ದಾರೆ. ಕ್ಯಾನ್ಸರ್ ಪೀಡಿತ ಮಕ್ಕಳು ಯಾರೂ ಇಲ್ಲ. ರಶ್ಮಿ ಹೆಸರಿನ ಪುತ್ರಿಯೂ ಇಲ್ಲ. ಪತಿಯೂ ಜೀವಂತವಾಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈ ವಿಚಾರ ಪುತ್ತೂರು ನಗರ ಪೊಲೀಸರ ಗಮನಕ್ಕೂ ಬಂದಿದ್ದು, ಪುತ್ತೂರು ನಗರ ಪೊಲೀಸರು ಸುಶೀಲಾ ಅವರನ್ನು ವಿಚಾರಣೆ ನಡೆಸಿದ್ದಾರೆ.

ಆ ವೇಳೆ ಆಕೆ ಒಬ್ಬ ವ್ಯಕ್ತಿಯ ಹೆಸರು ತಿಳಿಸಿ ಆತ ಬಡತನದಲ್ಲಿರುವ ನಿನಗೆ ಹಣಕಾಸಿನ ಸಹಾಯ ಮಾಡುವುದಾಗಿ ಹೇಳಿ ಈ ರೀತಿ ಮಾಡಿದ್ದಾನೆ. ಆತನೇ ಹಣ ಡ್ರಾ ಮಾಡುತ್ತಿದ್ದಾನೆ ಎಂದು ಹೇಳಿಕೊಂಡಿರುವುದಾಗಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಆದರೆ ಈ ಪ್ರಕರಣದಲ್ಲಿ ಸುಶೀಲಾ ಅಮಾಯಕಿಯೇ ಅಥವಾ ಶಾಮೀಲಾಗಿದ್ದಾರೆಯೇ ಎಂಬುವುದು ಸರಿಯಾದ ತನಿಖೆ ನಡೆದಲ್ಲಿ ಮಾತ್ರ ಸ್ಪಷ್ಟವಾಗಲಿದೆ.

ಬ್ಯಾಂಕ್ ಖಾತೆಗೆ ಜಮೆಯಾದ ನೆರವು ಹಣದ ಪೈಕಿ 1.25 ಲಕ್ಷ ಹಣವನ್ನು ಎಟಿ‌ಎಂ ಮೂಲಕ ಡ್ರಾ ಮಾಡಲಾಗಿದೆ ಎನ್ನಲಾಗುತ್ತಿದ್ದು, ಯಾರು ಹಣವನ್ನು ಡ್ರಾ ಮಾಡಿದ್ದಾರೆ ಎನ್ನುವುದು ತನಿಖೆ ನಡೆಯದ ಹಿನ್ನೆಲೆಯಲ್ಲಿ ನಿಗೂಢವಾಗಿದೆ. ತನಿಖೆ ನಡೆಯದಿರಲು ಯಾರೂ ದೂರು ನೀಡದಿರುವುದು ಕಾರಣವೇ ಅಥವಾ `ಪಿಕ್ಸಿಂಗ್’ ಕಾರಣವೇ ಎಂಬುವುದರ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿದೆ. ಇದೀಗ ಆ ಬ್ಯಾಂಕ್ ಅಕೌಂಟ್ ನಂಬ್ರವನ್ನು ಕ್ಲೋಸ್ ಮಾಡಲಾಗಿದೆ ಎಂಬ ಸುದ್ದಿಯೂ ಇದೆ.

ಒಟ್ಟಿನಲ್ಲಿ ಅಮಾಯಕಿಯಾದ ಬಾಲಕಿಯೊಬ್ಬಳ ಭಾವಚಿತ್ರವನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಕ್ಯಾನ್ಸರ್ ಪೀಡಿತೆ ಎಂದು ಬಿಂಬಿಸಿ ಹಣ ಗಳಿಸುವ ದಂಧೆ ನಡೆಸಿರುವ ಅಮಾನವೀಯ ದುರುಪಯೋಗ ಘಟನೆಗೆ ಸಂಬಂಧಿಸಿ ನಡೆಸಬೇಕಾಗಿದ್ದ ಸತ್ಯಶೋಧನಾ ಕಾರ್ಯ ಬಾಕಿಯಾಗಿಯೇ ಉಳಿದಿದೆ. ಮಾನವೀಯ ನೆಲೆಯಲ್ಲಿ ಸಾರ್ವಜನಿಕರು ನೀಡಿದ ಹಣ ದುರುಪಯೋಗ ಪಡಿಸಿಕೊಂಡ ಈ ಪ್ರಕರಣದ ಸತ್ಯ ಕಂಡು ಹಿಡಿಯಬೇಕಾದವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಪೊಲೀಸ್ ಇಲಾಖೆ ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ದಾನಿಗಳು ಆಗ್ರಹಿಸಿದ್ದಾರೆ.

Write A Comment