ಕರ್ನಾಟಕ

ರಾಘವೇಶ್ವರ ಶ್ರೀ ವೈದ್ಯ ಪರೀಕ್ಷೆ ಅನಿವಾರ್ಯ: ಹೈಕೋರ್ಟ್‌ನ ಮೌಖಿಕ ಅಭಿಮತ

Pinterest LinkedIn Tumblr

pvec18BRY-ragveswar-Guru-1

ಬೆಂಗಳೂರು: ‘ಸಿಐಡಿ ಪೊಲೀಸರ ದಾಖಲೆಗಳನ್ನು ನಾನು ನಿನ್ನೆ ನೋಡಿರುವ ಅನುಸಾರ ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರದ ಆರೋಪಿ ರಾಘವೇಶ್ವರ ಭಾರತಿ ಸ್ವಾಮೀಜಿಗಳನ್ನು ವೈದ್ಯಕೀಯ ಪರೀಕ್ಷೆಗೆ ಖಂಡಿತಾ ಒಳಪಡಿಸಬೇಕಿದೆ’. – ಇದು ನ್ಯಾಯಮೂರ್ತಿ ಎ.ಎನ್. ವೇಣು ಗೋಪಾಲ ಗೌಡ ಅವರ ಏಕ­ಸದಸ್ಯ ಪೀಠದ ಮೌಖಿಕ ಅಭಿಮತ.

ಅತ್ಯಾಚಾರದ ಆರೋಪ ಎದುರಿ­ಸುತ್ತಿರುವ ರಾಮ ಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿಯವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ತಕರಾರು ಎತ್ತಿರುವ ಪ್ರಕರಣದ ವಿಚಾರಣೆ ಗುರುವಾರ (ನ.27) ಮುಕ್ತಾಯವಾಗಿದ್ದು ಆದೇಶವನ್ನು ಕಾಯ್ದಿರಿಸಲಾಗಿದೆ.
ಅಡ್ವೊಕೇಟ್ ಜನರಲ್ ಮತ್ತು ಸಹಾಯಕ ಸಾಲಿಸಿಟರ್ ಜನರಲ್ ಅವರ ವಾದಕ್ಕೆ ಪ್ರತಿಯಾಗಿ ರಾಘ­ವೇಶ್ವರ ಸ್ವಾಮೀಜಿ ಪರ ವಕೀಲರು ಮಧ್ಯಾಹ್ನದ ಕಲಾಪದಲ್ಲಿ ಸುದೀರ್ಘ ಒಂದು ಗಂಟೆ ಉತ್ತರ ನೀಡಿದರು.

ಹಿರಿಯ ವಕೀಲ ಕೆ.ಜಿ.ರಾಘವನ್ ಅವರು ಉತ್ತರ ನೀಡಲು ಆರಂಭಿಸು­ತ್ತಿದ್ದಂತೆಯೇ ನ್ಯಾಯ­ಮೂರ್ತಿ ಗಳು, ‘ಸ್ವಾಮೀಜಿಯವರನ್ನು ಈ ಪ್ರಕರಣದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಅನಿವಾರ್ಯತೆ ಇದೆ’ ಎಂಬ ದೃಢ ನಿಲುವನ್ನು ಹೊರಗೆಡವಿದರು. ‘ನಾನು ದಾಖಲೆಗಳನ್ನು ನೋಡಿರುವ ಪ್ರಕಾರ ಶ್ರೀಗಳ ದೇಹ ಪರೀಕ್ಷೆ ನಡೆಯಲೇಬೇಕು. ಪರೀಕ್ಷೆ ವೇಳೆ ಅವರಿಗೆ ಯಾವ ತೊಂದರೆಯೂ ಆಗುವುದಿಲ್ಲ ಎಂಬ ಭರವಸೆ ಈ ಕೋರ್ಟಿಗೆ ಇದೆ’ ಎಂದು ನ್ಯಾಯ ಮೂರ್ತಿಗಳು ಹೇಳಿ­ದರು.

ಈ ಮಾತಿಗೆ ರಾಘವನ್ ಅವರು ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಅವರು, ‘ಪೊಲೀಸರು ಸ್ವಾಮೀಜಿಗೆ ನೋಟಿಸ್ ನೀಡದೆಯೇ ವೈದ್ಯ ಪರೀಕ್ಷೆ ನಡೆಸಿದ್ದರೆ ಚೆನ್ನಾಗಿರುತ್ತಿತ್ತೇನೊ’ ಎಂಬ  ಬೇಸರ ಹೊರಹಾಕಿದರು.

ಇದಕ್ಕೆ ಮರುನುಡಿದ ರಾಘವನ್, ‘ನಾವು ವೈದ್ಯಕೀಯ ಪರೀಕ್ಷೆ ಬೇಡ ಎನ್ನುತ್ತಿಲ್ಲ. ಆದರೆ ಅದು ನೀತಿಬದ್ಧವಾಗಿ, ನ್ಯಾಯಯುತವಾಗಿ, ಮುಕ್ತ ಮತ್ತು ಪಾರದರ್ಶಕವಾಗಿ ಇರಬೇಕೆಂದು ಪ್ರತಿ­ಪಾದಿಸುತ್ತಿದ್ದೇವೆ ಅಷ್ಟೇ. ಒಂದೊಮ್ಮೆ ವೈದ್ಯರು ಈ ಅಂಶಗಳನ್ನು ಪರೀಕ್ಷೆ ವೇಳೆ ಪರಿಪಾಲಿಸದೇ ಹೋದರೆ ಯಾವುದೇ ಕ್ರಿಮಿನಲ್ ಆರೋಪಿಗೆ ಸಾಂವಿಧಾ­ನಿಕವಾಗಿ ಕೊಡಮಾಡಲಾಗಿರುವ 21ನೇ ಮತ್ತು 14ನೇ ವಿಧಿಯ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಆಗುತ್ತದೆ’ ಎಂದು ಮತ್ತೆ ಮತ್ತೆ ಉಚ್ಚರಿಸಿದರು.

ಈ ಹಂತದಲ್ಲಿ ರಾಘವನ್ ಅವರು, ‘ಅಪರಾಧ ಪ್ರಕ್ರಿಯಾ ಸಂಹಿತೆಯಿಂದ 53 ಎ ವಿಧಿಯನ್ನೇ ಕೈಬಿಡಬೇಕು ಎಂದು ಗಟ್ಟಿಯಾಗಿ ಪ್ರತಿಪಾದಿಸಿದರು. ಇದನ್ನು ಅಷ್ಟೇ ಸ್ಪಷ್ಟವಾಗಿ ಅಲ್ಲಗಳೆದ ಪೀಠವು, ‘ಈ ರೀತಿ ಮಾಡುತ್ತಾ ಹೋದರೆ  ಮುಂದೆ ಇದೊಂದು ಕ್ಷೀಷೆಯ ಸಂಗತಿಯಾದೀತು’ ಎಂದು ಎಚ್ಚರಿಸಿತು.

‘ನೋಟಿಸಿನ ಸಾಂವಿಧಾನಿಕ ಸಿಂಧುತ್ವ ಹಾಗೂ ಅಪರಾಧ ಪ್ರಕ್ರಿಯಾ ಸಂಹಿತೆಯ ನಿರ್ದಿಷ್ಟ ಕಲಂ ಕುರಿತಾಗಿ ಮಾತ್ರವೇ ನಮ್ಮ ತಕರಾರು. ವೈದ್ಯಕೀಯ ಪರೀಕ್ಷೆ ಇಂತಹುದೇ ಎಂದು ಹೇಳಿದರೆ ನಮ್ಮ ದುಗುಡ ಕಡಿಮೆಯಾದೀತು. ಯಾಕೆಂದರೆ ವೈದ್ಯರು ಒಳಗೆ ಕರೆದು­ಕೊಂಡು ಹೋದ ಮೇಲೆ ಏನಾದರೂ ಆಗಬಾರದ್ದು ಆಗಿ ಹೋದರೆ ಅದು ಕಸ್ಟಡಿಯೊಳಗಿನ ಹಿಂಸೆ ಎಂದೆನಿಸು­ವುದಿ­ಲ್ಲವೇ’ ಎಂದು ರಾಘವನ್ ನ್ಯಾಯಪೀಠ­ವನ್ನು ಪ್ರಶ್ನಿಸಿದರು.

‘ಇಲ್ಲಿ ಕಸ್ಟಡಿಯೊಳಗೆ ಹಿಂಸೆ ನಡೆದೀತು ಎಂಬ ಪ್ರಶ್ನೆಯೇ ಬರುವು­ದಿಲ್ಲ. ಇದೆಲ್ಲಾ ಕೇವಲ ನಿಮ್ಮ ಊಹೆ­ಯಷ್ಟೇ. ಆರೋಪಿಯು ಕೋರ್ಟ್ ಕಸ್ಟಡಿಯಲ್ಲಿಯೇ ಇರುತ್ತಾರಲ್ಲವೇ ? ಅಷ್ಟಕ್ಕೂ ಆರೋಪಿ ಈಗ  ನಿರೀಕ್ಷಣಾ ಜಾಮೀನಿನ ಮೇಲಿದ್ದಾರೆ. ತನಿಖೆಗೆ ಸಹಕರಿಸುತ್ತೇನೆ ಎಂಬ ಷರತ್ತನ್ನು ಒಪ್ಪಿರುವುದಕ್ಕಾಗಿಯೇ ಅವರಿಗೆ ಜಾಮೀನು ಮಂಜೂರಾಗಿದೆ. ಹೀಗಿರು­ವಾಗ ನೀವು ಯಾಕೆ ಹೆಜ್ಜೆ ಹೆಜ್ಜೆಗೂ ಆಕ್ಷೇಪಣೆ ಎತ್ತುತ್ತಿ ದ್ದೀರಿ’ ಎಂದು ಪೀಠವು ಕೊಂಚ ಗರಂ ಆಯಿತು.

ಇದಕ್ಕೆ ರಾಘವನ್‌ ಅವರು, ‘ನಾವು ಯಾವತ್ತೂ ಕಾನೂನಿಗೆ ತಲೆ ಬಾಗಿ ನಡೆಯುತ್ತೇವೆ. ಆದಾಗ್ಯೂ ನಮ್ಮ ಕೊನೆಯ ಮನವಿ ಏನೆಂದರೆ, ನಮ್ಮ ಕಕ್ಷಿದಾರರಿಗೆ ಈಗ ಒದಗಿರುವ ಪರಿಸ್ಥಿತಿ ನಾಳೆ ಪ್ರತಿವಾದಿಗಳಿಗೂ ಬರಬಹುದು. ಆದ್ದರಿಂದ ನಮ್ಮ ವಾದ ಮತ್ತು ಕೋರಿಕೆಯನ್ನು ಪೀಠವು ಗಂಭೀರವಾಗಿ ಪರಿಗಣಿ ಸಬೇಕು’ ಎಂದು ಕೇಳಿ­ಕೊಂಡರು.

‘ಪ್ರಜಾಪ್ರಭುತ್ವದಲ್ಲಿ ಪೊಲೀಸರು ವ್ಯವಸ್ಥೆ ಕಾಪಾ ಡುವುದಕ್ಕಾಗಿಯೇ ಇದ್ದಾರೆ ಹೊರತು ಯಾರ ನೆಮ್ಮ ದಿ­ಯನ್ನೂ ಕೆಡಿಸುವುದಿಲ್ಲ’ ಎಂದು ಭರವಸೆ ನೀಡಿದ ಪೀಠವು, ‘ಪ್ರಕರಣದ ವಿಚಾರಣೆ ಪರಿಸಮಾಪ್ತಿಯಾಗಿದೆ’ ಎಂದು ಹೇಳುವ ಮೂಲಕ ಆದೇಶವನ್ನು ಕಾಯ್ದಿರಿಸಿತು.

Write A Comment