ಕರ್ನಾಟಕ

ಇಂದು ಕಲಬುರ್ಗಿಯಲ್ಲಿ ಸಂಪುಟ ಸಭೆ: ಕಾರ್ಯಸೂಚಿಯಲ್ಲಿ 38 ಅಭಿವೃದ್ಧಿ ಯೋಜನೆ

Pinterest LinkedIn Tumblr

ka

ಬೆಂಗಳೂರು: ಕಲಬುರ್ಗಿಯಲ್ಲಿ ಇಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಹೈದರಾ­ಬಾದ್‌ ಕರ್ನಾಟಕ ಪ್ರದೇಶದಲ್ಲಿ ಸಂವಿಧಾನದ 371 (ಜೆ) ಕಲಂ ಜಾರಿಯ ಪ್ರಗತಿ ಸೇರಿದಂತೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳು  ಚರ್ಚೆಗೆ ಬರುವ ಸಾಧ್ಯತೆ ಇದೆ.

ಈ ಭಾಗಕ್ಕೆ ಸಂಬಂಧಿಸಿದ 38 ಅಭಿವೃದ್ಧಿ ಯೋಜನೆಗಳನ್ನು ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಪಟ್ಟಿ ಮಾಡಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಹೈದರಾಬಾದ್‌ ಕರ್ನಾಟಕದ ವ್ಯಾಪ್ತಿ­ಯಲ್ಲಿ ಬರುವ ಕಲಬುರ್ಗಿ, ಯಾದಗಿರಿ, ಬಳ್ಳಾರಿ, ಬೀದರ್‌, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಜನರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವ ಸಂವಿಧಾನದ 371 (ಜೆ) ಕಲಂನ ಅನುಷ್ಠಾನದ ಪ್ರಗತಿಯ ಬಗ್ಗೆ ಸಂಪುಟ ಸಭೆಯು ಪ್ರಮುಖವಾಗಿ ಚರ್ಚಿಸಲಿದೆ.

ಅಕ್ರಮ ಗಣಿಗಾರಿಕೆಯಿಂದ ಹಾನಿ­ಗೊಳ­ಗಾಗಿರುವ ಬಳ್ಳಾರಿಯ ಭೂ ಪ್ರದೇಶದ ಪುನಶ್ಚೇತನ ಮತ್ತು ಪರಿಹಾರ ಕಾರ್ಯಕ್ಕಾಗಿ ರೂಪಿಸಲಾಗಿರುವ ಸಮಗ್ರ ಪರಿಸರ ಯೋಜನೆ, ‘ಸಿ’ ವರ್ಗದ ಗಣಿಗಳ ಹರಾಜಿನ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಹೈದರಾಬಾದ್‌ ಕರ್ನಾಟಕ ಭಾಗದ ಅಭಿವೃದ್ಧಿ ಮಂಡಳಿಯು ಆ ಭಾಗದಲ್ಲಿ ಕೈಗೆತ್ತಿಕೊಳ್ಳಲಿರುವ ₨ 400ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ಕಲಬುರ್ಗಿಯಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಸಭೆಯು ಆಡಳಿತಾ­ತ್ಮಕ ಅನುಮೋದನೆ ನೀಡುವ ನಿರೀಕ್ಷೆ ಇದೆ. ಹೈದರಾಬಾದ್‌ ಕರ್ನಾಟಕ ಭಾಗದ 250 ಗ್ರಾಮ ಪಂಚಾಯಿತಿಗಳಲ್ಲಿ ‘ಜ್ಞಾನ ಕೇಂದ್ರ’ಗಳ ನಿರ್ಮಾಣಕ್ಕೆ, ಮೈಸೂರು ಮತ್ತು ಕಲಬುರ್ಗಿಗಳಲ್ಲಿ ತುರ್ತು ಚಿಕಿತ್ಸಾ ಕೇಂದ್ರ ಹಾಗೂ ಯಾದಗಿರಿಯಲ್ಲಿ ಸರ್ಕಾರಿ ವೈದ್ಯ­ಕೀಯ ಕಾಲೇಜು ಸ್ಥಾಪನೆಗೂ ಸಂಪುಟ ಸಭೆ ಸಮ್ಮತಿ ನೀಡುವ ಸಾಧ್ಯತೆ ಇದೆ.

ರೌಡಿ ಮುನ್ನಾ ವಿರುದ್ಧದ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದ ಪೊಲೀಸ್‌ ಇನ್‌ಸ್ಪೆಕ್ಟರ್‌ ಮಲ್ಲಿಕಾರ್ಜುನ ಬಂಡೆ ಅವರ ಪತ್ನಿಗೆ ಕಲ್ಬುರ್ಗಿಯಲ್ಲಿ ನಿವೇಶನ ನೀಡುವುದು ಮತ್ತು ವಿವಿಧ ಕಡೆಗಳಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಸ್ಥಾಪನೆ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬರಲಿವೆ ಎಂದು ಮೂಲಗಳು ಹೇಳಿವೆ.

ರಾಜ್ಯ ಸಚಿವರೂ ಭಾಗಿ: ಹೈದರಾ­ಬಾದ್‌ ಕರ್ನಾಟಕ ಭಾಗದ ರಾಜ್ಯ ಸಚಿವರೂ ಸಂಪುಟ ಸಭೆಯಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

Write A Comment