ಹೆಲ್ಸಿಂಕಿ: ಫಿನ್ ಲ್ಯಾಂಡಿನ ಮೊಬೈಲ್ ಸಂವಹನಾ ಸಂಸ್ಥೆ ನೋಕಿಯಾ ಮಂಗಳವಾರ ತನ್ನ ಬ್ರಾಂಡಿನಡಿ ಮೊದಲ ಆಂಡ್ರಾಯ್ದ್ ಟ್ಯಾಬ್ಲೆಟ್ ಘೋಷಿಸಿದೆ.
ಫಿನ್ ಲ್ಯಾಂಡಿನ ರಾಜಧಾನಿಯಲ್ಲಿ ಆಯೋಜಿಸಿರುವ ತಂತ್ರಜ್ಞಾನ ಮತ್ತು ಸ್ಟಾರ್ಟ್-ಅಪ್ ಕಾರ್ಯಕ್ರಮದಲ್ಲಿ ನೋಕಿಯಾ ಇದರ ಘೋಷಣೆ ಮಾಡಿದ್ದು ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಕ್ಷೇತ್ರಗೆ ಮರು ಪ್ರವೇಶ ಕೊಟ್ಟಿದೆ.
ಆಂಡ್ರಾಯ್ದ್ ೫.೦ ಲಾಲಿಪಪ್ ಮೇಲೆ ನಡೆಯುವ ಈ ಟ್ಯಾಬ್ಲೆಟ್ ನನ್ನು ಎನ್-೧ ಎಂದು ನಾಮಕರಣ ಮಾಡಲಾಗಿದೆ.
ಮೊದಲ ಬಿಡುಗಡೆಯಲ್ಲಿ ಎನ್-೧ ಚೈನಾದಲ್ಲಿ ೨೦೧೫ರಲ್ಲಿ ದೊರೆಯಲಿದೆ ಎಂದು ಪತ್ರಿಕಾ ವರದಿ ತಿಳಿಸಿದೆ. ನಂತರ ರಷಿಯಾ ಮತ್ತು ಯೂರೋಪಿನಲ್ಲಿ ಈ ಟ್ಯಾಬ್ಲೆಟ್ ದೊರಕಲಿದ್ದು, ಸದ್ಯಕ್ಕೆ ಅಮೇರಿಕಾದಲ್ಲಿ ಬಿಡುಗಡೆ ಮಾಡುವ ಯೋಜನೆಗಳಿಲ್ಲ ಎಂದು ತಿಳಿದು ಬಂದಿದೆ.
ಒಂದು ಕಾಲದಲ್ಲಿ ಮೊಬೈಲ್ ಕ್ಷೇತ್ರವನ್ನು ಆಳುತ್ತಿದ್ದ ನೋಕಿಯಾ ಸಂಸ್ಥೆಯ ಮೊಬೈಲ್ ವಿಭಾಗವನ್ನು ಮೈಕ್ರೋಸಾಫ್ಟ್ ಕೊಡುಕೊಂಡಿತ್ತು. ನಂತರದ ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಗಳ ಯುಗದಲ್ಲಿ ತನ್ನ ಮಾರುಕಟ್ಟೆಯನ್ನು ಸ್ಯಾಮ್ಸಂಗ್ ಮತ್ತು ಆಪಲ್ ಸಂಸ್ಥೆಗಳಿಗೆ ನೋಕಿಯಾ ಬಿಟ್ಟುಕೊಟ್ಟಿತ್ತು. ಸಾಮಾನ್ಯವಾಗಿ ಮೈಕ್ರೋಸಾಫ್ಟ್ ನ ವಿಂಡೋಸ್ ಮೇಲೆ ಓಡುವ ಫೋನುಗಳನ್ನೆ ತಯಾರಿಸುತ್ತಿದ್ದ ನೋಕಿಯಾ ಮೊದಲ ಬಾರಿಗೆ ಆಂಡ್ರಾಯ್ದ್ ಟ್ಯಾಬ್ಲೆಟ್ ಅನ್ನು ಮಾರುಕಟ್ಟೆಗೆ ಬಿಟ್ಟಿರುವುದು ಕುತೂಹಲ ಕೆರಳಿಸಿದೆ.
