ಮಂಗಳೂರು, ನ.5: ಮಂಗಳೂರು ವಿಮಾನ ನಿಲ್ದಾಣದ ರನ್ವೇ ವಿಸ್ತರಣೆ ಹಿನ್ನೆಲೆಯಲ್ಲಿ ಸುಮಾರು 1,100 ಕೋಟಿ ರೂ. ಅಗತ್ಯವಿದೆ ಎಂದು ಕೇಂದ್ರ ವಿಮಾನಯಾನ ಸಚಿವರು ತಿಳಿಸಿರುವ ಹಿನ್ನೆಲೆಯಲ್ಲಿ ಅನಿವಾಸಿ ಭಾರತೀಯರು ಬಂಡವಾಳ ಹೂಡಲು ಆಕರ್ಷಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದ್ದಾರೆ.ಇತ್ತೀಚೆಗೆ ಕುವೈತ್ಗೆ ಭೇಟಿ ನೀಡಿ ವಾಪಸಾಗಿರುವ ಶಾಸಕ ಜೆ.ಆರ್. ಲೋಬೋ, ತಮ್ಮ ಕಚೇರಿಯಲ್ಲಿಂದು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಅನಿವಾಸಿ ಭಾರತೀಯರ ಪೈಕಿ ಒಬ್ಬರು 50 ಕೋ.ರೂ. ಹೂಡಿಕೆ ಮಾಡಲು ಈಗಾಗಲೇ ಒಪ್ಪಿಗೆ ಸೂಚಿಸಿದ್ದಾರೆ. ಕೊಚ್ಚಿನ್ ಮಾದರಿಯಲ್ಲಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಪಡಿಸುವ ಕುರಿತಂತೆ ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವ ರೋಷನ್ ಬೇಗ್ರಲ್ಲಿ ಚರ್ಚಿಸಿ, ದ.ಕ. ಜಿಲ್ಲಾ ಸಂಸದರ ಗಮನಕ್ಕೆ ತಂದು, ಕೇಂದ್ರ ಸರಕಾರಕ್ಕೆ ಮನವಿ ಮಾಡುವುದಾಗಿ ಶಾಸಕ ಲೋಬೊ ಹೇಳಿದರು.
ಮಂಗಳೂರು-ಕುವೈತ್ ನೇರ ವಿಮಾನ ಸೇವೆ ಈಗಾಗಲೇ ಪ್ರಾರಂಭವಾಗಿದ್ದು, ಅನಿವಾಸಿ ಭಾರತೀಯರ ಮಕ್ಕಳಿಗೆ ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆಯಲ್ಲಿ ಕುಳಿತು ಕೊಳ್ಳಲು ಅವಕಾಶ ಸಿಗುತ್ತಿಲ್ಲ. ಪ್ರಸಕ್ತ ಮಹಾರಾಷ್ಟ್ರ, ಕೇರಳ ಮತ್ತು ಗೋವಾದಲ್ಲಿ ಇದಕ್ಕೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ದಲ್ಲೂ ಅವಕಾಶ ನೀಡುವಂತೆ ಮುಖ್ಯಮಂತ್ರಿಯವರನ್ನು ಆಗ್ರಹಿಸಲಾಗುವುದು ಎಂದು ಶಾಸಕ ಲೋಬೊ ಹೇಳಿದರು.
ನೇತ್ರಾವತಿ ಹಾಗೂ ಗುರುಪುರ ಪ್ರವಾಹಪೀಡಿತ ಪ್ರದೇಶಗಳ ರಕ್ಷಣೆಗೆ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ 150 ಕೋ.ರೂ. ಪ್ರಸ್ತಾವನೆ ರಾಜ್ಯ ಸರಕಾರಕ್ಕೆ ಕಳುಹಿಸಲಾಗಿದೆ. ಇದಕ್ಕೆ ಶೇ.50ರಷ್ಟು ಹಣವನ್ನು ಕೇಂದ್ರ ಸರಕಾರ ಹಾಗೂ ಶೇ.50ರಷ್ಟನ್ನು ರಾಜ್ಯ ಸರಕಾರ ಭರಿಸುವ ವಿಶ್ವಾಸವಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ್ಕುಮಾರ್ ದಾಸ್, ಟಿ.ಕೆ.ಸುಧೀರ್, ಅರುಣ್ ಕುವೆಲ್ಲೊ, ಡೆನಿಸ್ ಡಿಸಿಲ್ವ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಾದ ಷಣ್ಮುಗಮ್, ಶೇಷಕೃಷ್ಣ ಉಪಸ್ಥಿತರಿದ್ದರು.

