ಬಂಟ್ವಾಳ;ಬಿ.ಸಿ.ರೋಡಿನಲ್ಲಿ ಸೋಮವಾರ ಮತ್ತೊಮ್ಮೆ ಟ್ರಾಫಿಕ್ ಜಾಮ್ ನಿಂದಾಗಿ ಜನಸಾಮಾನ್ಯರು ಪರದಾಡುವಂತಾಯಿತು. ಕಳೆದ ವಾರ ದೀಪಾವಳಿ ಹಬ್ಬದ ಪ್ರಯುಕ್ತ ರಜಾ ದಿನದಿಂದಾಗಿ ಊರಿಗೆ ತೆರಳಿದ್ದವರು, ಮರಳಿ ತಮ್ಮ ಕರ್ತವ್ಯಕ್ಕೆ ಹಾಜರಾಗಬೇಕಾದ ಹಿನ್ನೆಲೆಯಲ್ಲಿ ವಾಹನ ಹಾಗೂ ಜನದಟ್ಟಣೆಯಿಂದ ಟ್ರಾಫಿಕ್ ಜಾಮ್ ಉಂಟಾಯಿತು.
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಟ್ರಾಫಿಕ್ ಜಾಮ್ ಉಂಟಾದ್ದರಿಂದ ನಿಗದಿತ ಕಛೇರಿ ಸಮಯಕ್ಕೆ ತಲುಪಬೇಕಾದವರು, ಒಂದು ಬಸ್ ನಿಂದ ಇಳಿದು ಮತ್ತೊಂದು ಬಸ್ ಹತ್ತಬೇಕಾದವರು ಪರದಾಡಬೇಕಾಯಿತು. ರಾಷ್ಟ್ರೀ ಹೆದ್ದಾರಿ ಸಹಿತ ಮೇಲ್ಸೇತುವೆಯಲ್ಲೂ ವಾಹನಗಳು ಸಂಚರಿಸತೊಡಗಿದ್ದು ಮತ್ತು ತಾಮುಂದು ತಾಮುಂದು ಎಂದು ಕೆಲ ವಾಹನಗಳು ಪೈಪೋಟಿಗೆ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಮತ್ತಷ್ಟು ಬಿಗಡಾಯಿಸಿತು.
ಇದನ್ನು ಕ್ಲಿಯರ್ ಮಾಡಲು ಬಂಟ್ವಾಳ ಪೊಲೀಸರು ಹಾಗೂ ಹೋಂಗಾರ್ಡ್ ಸಿಬ್ಬಂದಿಗಳು ಹರಸಾಹಸ ಪಟ್ಟರು. ಜೊತೆಗೆ ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ವರೇ ಖುದ್ದು ರಸ್ತೆಯಲ್ಲಿ ನಿಂತು ಟ್ರಾಫಿಕ್ ಕಂಟ್ರೋಲ್ ಮಾಡಬೇಕಾಯಿತು. ಬಿ.ಸಿ.ರೋಡಿನಲ್ಲಿ ಪ್ರತೀ ಸೋಮವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಟ್ರಾಫಿಕ್ ಜಾಮ್ ಕಿರಿಕಿರಿ ತಪ್ಪಿದ್ದಲ್ಲ. ಬಿ.ಸಿ.ರೋಡು ವೃತ್ತ ಬಳಿ ಸುಗಮ ವಾಹನ ಸಂಚಾರದ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರನ್ನು ನಿಯುಕ್ತಿ ಗೊಳಿಸಲಾಗುತ್ತಿದೆಯಾದರೂ ವಾಹನದಟ್ಟಣೆ ಯಿಂದಾಗಿ ಮತ್ತು ವೃತ್ತದ ಅವ್ಯವಸ್ಥೆಯಿಂದಾಗಿ ಟ್ರಾಫಿಕ್ ಜಾಮ್ ಬಿ.ಸಿ.ರೋಡಿಗೆ ಶಾಪವಾಗಿ ಪರಿಣಮಿಸಿದೆ.
ಬಿ.ಸಿ.ರೋಡಿನಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾದ ಮೆಲ್ಸೇತುವೆ ಕೂಡ ಇಲ್ಲಿನ ಟ್ರಾಫಿಕ್ ಜಾಮ್ ಗೆ ಕಾರಣವಾಗುತ್ತಿದೆ.ಬಿ.ಸಿ.ರೋಡಿಗೆ ಈಗಾಗಲೇ ಟ್ರಾಫಿಕ್ ಪೊಲೀಸ್ ಠಾಣೆ ಸರ್ಕಾರದಿಂದ ಮಂಜೂರಾತಿಯಾದರೂ, ಇದು ಕಾರ್ಯರೂಪಕ್ಕೆ ಬರಲು ಸಚಿವರು ಪ್ರಯತ್ನಿಸುವಂತೆ ಆಗ್ರಹಗಳು ಕೇಳಿಬಂದಿದೆ.











