ಮಂಗಳೂರು: ಹುಡ್ಹುಡ್ ಚೆಂಡಮಾರುತದ ಆತಂಕ ಮುಗಿದಿದ್ದೆ.. ಆದರೆ ಈಗ ಕರಾವಳಿಯಲ್ಲಿ ಗುಡ್ಗುಡ್ ಅರ್ಭಟಕ್ಕೆ ಜನತೆ ತಲ್ಲಣಗೊಂಡಿದ್ದಾರೆ. ಮಂಗಳೂರು ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಶನಿವಾರ ರಾತ್ರಿ ಬಿರುಸಿನ ಗಾಳಿ ಮಳೆಯಾಗಿದೆ. ಇದರ ಜೊತೆಗೆ ಗುಡುಗಿನ ಸದ್ದು ನಗರವಾಸಿಗಳನ್ನು ನಡುಗುವಂತೆ ಮಾಡಿತು. ಗುಡುಗು ಮಿಂಚುಗಳ ಅರ್ಭಟಕ್ಕೆ ನಗರವಿಡೀ ತತ್ತರಿಸಿದೆ. ಕಳೆದ ಐದು ವರ್ಷಗಳಲ್ಲಿ ಕಂಡಿರದ ಗುಡುಗಿನ ಅರ್ಭಟದ ಅನುಭವ ಶನಿವಾರ ಮಂಗಳೂರಿನ ಜನತೆಗಾಗಿದೆ. ಗುಡುಗಿನ ಭೀಕರತೆಗೆ ಜನರು ಮನೆಯಿಂದ ಹೊರಗೆ ಬರಲು ಭಯಪಡುವಂತಾಗಿತ್ತು. ಅಷ್ಟೋಂದು ಜೋರಾಗಿತ್ತು ಸಿಡಿಲು ಮಿಂಚುಗಳ ಆರ್ಭಟ..
ಹಗಲಿನ ವೇಳೆ ಬಿಸಿಲಿನ ವಾತಾವರಣವಿದ್ದು, ಸಂಜೆಯಾಗುತ್ತಿದ್ದಂತೆ ಹಠಾತ್ತನೇ ಭಾರಿ ಮಳೆಯಾಗಿದೆ. ಶನಿವಾರ ರಾತ್ರಿ 7.10ಕ್ಕೆ ಆರಂಭವಾದ ಗಾಳಿ ಮಳೆ ಸಿಡಿಲು ಮಿಂಚುಗಳ ಆರ್ಭಟ ಸುಮಾರು 9.10ಕ್ಕೆ ಕಡಿಮೆಯಾಗಿದೆ ಈ ಬಾರಿಯ ಮಳೆಗಾಲದಲ್ಲಿ ಮಿಂಚಿನ ಆರ್ಭಟ ಹಿಂದಿಗಿಂತ ಜಾಸ್ತಿಯಾಗಿತ್ತು.
ಗಾಳಿ ಮಳೆಯ ಬಿರುಸಿನಿಂದಾಗಿ ನಗರದ ಬಹುತೇಕ ಕಾಂಕ್ರೀಟ್ ರಸ್ತೆಗಳ ಮೇಲಿನಿಂದಲೇ ಮಳೆ ನೀರು ಹರಿದುಹೋಗುತ್ತಿತ್ತು. ಚರಂಡಿಗಳಿಲ್ಲದ ರಸ್ತೆಯಲ್ಲಿ ನೀರು ಹರಿಯಲು ಸೂಕ್ತ ವ್ಯವಸ್ಥೆಯಿಲ್ಲದೆ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಪರದಾಡಬೇಕಾಯಿತು. ಮಳೆಯ ನಿರೀಕ್ಷೆಯಿಲ್ಲದ ಕಾರಣ ಕೊಡೆ, ರೈನ್ಕೋಟ್ಗಳನ್ನು ಹಿಡಿದುಕೊಂಡು ಬಾರದವರು ಅಲ್ಲಲ್ಲಿ ಗುಂಪು ಗುಂಪಾಗಿ ಆಶ್ರಯ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಳೆಯ ಹಿನ್ನೆಲೆಯಲ್ಲಿ ನಾನಾ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು. ಅಲ್ಲಲ್ಲಿ ಮ್ಯಾನ್ಹೋಲ್ಗಳು ತುಂಬಿ ಕೊಚ್ಚೆ ನೀರು ರಸ್ತೆಯಲ್ಲೇ ಹರಿಯಿತು.

