ರಾಷ್ಟ್ರೀಯ

ಏರ್ ಇಂಡಿಯಾ ಹಣಕಾಸು ಬಿಕ್ಕಟ್ಟು : ಸರಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

Pinterest LinkedIn Tumblr

AirIndia_Court_order

ಹೊಸದಿಲ್ಲಿ, ಅ.12: ತೀವ್ರ ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಏರ್ ಇಂಡಿಯಾದ ‘ಲಾಭದಾಯಕ ಮಾರ್ಗಗಳನ್ನು’ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಬಿಟ್ಟುಕೊಟ್ಟಿರುವ ಕೇಂದ್ರ ಸರಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಏರ್ ಇಂಡಿಯಾದಲ್ಲಿನ ಪರಿಸ್ಥಿತಿಗಳು ಹೀಗೆಯೇ ಮುಂದುವರಿದಲ್ಲಿ ಸರಕಾರಿ ವಿಮಾನಯಾನ ಸಂಸ್ಥೆಯು ಮುಚ್ಚಿ ಹೋಗಲಿದೆ. ಈ ಹಿನ್ನೆಲೆಯಲ್ಲಿ ಅದರ ಪರಿಸ್ಥಿತಿಗಳ ಸುಧಾರಣೆಗೆ ಯೋಜನೆಯೊಂದನ್ನು ರೂಪಿಸುವಂತೆ ಸರಕಾರಕ್ಕೆ ಸೂಚನೆ ನೀಡಿದೆ.

‘ಹಲವಾರು ಲಾಭದಾಯಕ ಮಾರ್ಗಗಳನ್ನು ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಯಾಕೆ ನೀಡಲಾಗಿದೆ?’ ಎಂದು ನ್ಯಾ.ವಿಕ್ರಮ್‌ಜಿತ್ ಸೇನ್ ಮತ್ತು ನ್ಯಾ.ಕುರಿಯನ್ ಜೋಸೆಫ್ ಅವರನ್ನು ಒಳಗೊಂಡ ಪೀಠ ಸರಕಾರವನ್ನು ಪ್ರಶ್ನಿಸಿದೆ. ಏರ್ ಇಂಡಿಯಾ ಮತ್ತು ಇಂಡಿಯನ್ ಏರ್‌ಲೈನ್ಸ್‌ಗಳನ್ನು ವಿಲೀನಗೊಳಿಸಿದ ನಂತರ ಏರ್ ಇಂಡಿಯಾವು ಖಾಸಗಿ ವಿಮಾನಯಾನ ಸಂಸ್ಥೆಗಳ ಮುಂದೆ ಕಳಾಹೀನವಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ಸರಕಾರಿ ವಿಮಾನಯಾನ ಸಂಸ್ಥೆಯು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಕೇಂದ್ರ ವಿಮಾನಯಾನ ಸಚಿವಾಲಯವು ಪರಾಮರ್ಶೆ ಮಾಡಬೇಕು. ವಿಮಾನಗಳ ಹಾರಾಟದ ದಟ್ಟ ಅವಧಿಯಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಗಳ ವಿಮಾನಗಳಿಗೆ ಮೊದಲು ಇಳಿಯಲು ಅವಕಾಶ ಕೊಟ್ಟು ಏರ್ ಇಂಡಿಯಾ ವಿಮಾನಗಳು ಆಗಸದಲ್ಲೇ ಹಾರಾಟ ನಡೆಸುವಂತೆ ಮಾಡಲಾಗುತ್ತಿದೆ. ಇದರಿಂದ ದುಬಾರಿ ಇಂಧನ ಅಪವ್ಯಯವಾಗುವುದರ ಜೊತೆಗೆ ಸಂಸ್ಥೆಗೆ ನಷ್ಟ ತರುತ್ತಿದೆ ಎಂದು ನ್ಯಾಯಮೂರ್ತಿಗಳು ಹೇಳಿದರು.

ಖಾಸಗಿ ವಿಮಾನಯಾನ ಸಂಸ್ಥೆಗಳಲ್ಲಿ ಯಾನ ಮಾಡಿದ ನಂತರ ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸಿದರೆ, ಇಲ್ಲಿ ಯಾಕೆ ಟಿಕೆಟ್ ಖರೀದಿಸಿದೆ ಎಂಬ ಯೋಚನೆ ಯಾರಿಗಾದರೂ ಬರುತ್ತದೆ. ಪರಿಸ್ಥಿತಿ ನಿಜಕ್ಕೂ ಕೆಟ್ಟದಾಗಿದೆ ಎಂದು ಹೇಳಲು ಬೇಸರವಾಗುತ್ತದೆ. ಬಹಳ ಸಮಯದಿಂದ ಹಣಕಾಸು ನಷ್ಟದ ಮಾತುಗಳು ಕೇಳಿ ಬರುತ್ತಿವೆ. ಇದರ ಜೊತೆಗೆ ಪ್ರಯಾಣಿಕರ ಅತೃಪ್ತಿ ಸುಳ್ಳೇನೂ ಅಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು.

ಲಾಭದಾಯಕ ಮಾರ್ಗಗಳನ್ನು ಖಾಸಗಿ ಸಂಸ್ಥೆಗಳಿಗೆ ನೀಡಿದ ನಂತರ ಹಣ ಕಳೆದುಕೊಳ್ಳುವ ಮಾರ್ಗಗಳ ಮೇಲೆ ಏರ್ ಇಂಡಿಯಾವು ಗಮನ ಹರಿಸುತ್ತಿದೆ. ಇದು ಬಹಳ ಅಚ್ಚರಿ ತರುವ ಸಂಗತಿಯಾಗಿದೆ. ಏರ್ ಇಂಡಿಯಾದಲ್ಲಿ ಬದಲಾವಣೆ ತರುವ ಕುರಿತು ದಯವಿಟ್ಟು ಯೋಚನೆ ಮಾಡಿರಿ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಏರ್ ಇಂಡಿಯಾ ಮುಚ್ಚಿ ಹೋಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಈ ಸಂದರ್ಭದಲ್ಲಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಕೇಂದ್ರ ಸರಕಾರ ಮತ್ತು ಏರ್ ಇಂಡಿಯಾ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದರು.

Write A Comment