ಮಂಗಳೂರು: ಶಿಕ್ಷಣ, ಆರೋಗ್ಯ ಮತ್ತು ಬಡ ಜನರ, ನಿರ್ಗತಿಕರ ಸೇವೆಗೆ ಕ್ರೈಸ್ತ ಸೇವಾ ಸಂಸ್ಥೆಗಳು ಹೆಸರಾಗಿದ್ದು, ಈ ಸೇವಾ ಪರಂಪರೆ ಮುಂದುವರಿಯಲಿದೆ ಎಂದು ಮಂಗಳೂರಿನ ಬಿಷಪ್ ರೈ| ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಹೇಳಿದರು.
ಅವರು ಶನಿವಾರ ಬಿಜೈ ಚರ್ಚ್ ಸಭಾಂಗಣದಲ್ಲಿ ನಡೆದ ಅರ್ಸುಲೈನ್ ಫ್ರಾನ್ಸಿಸ್ಕನ್ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರ ಕ್ರೈಸ್ತರಿಗೆ ಆತ್ಮಿಯವಾದುದು. ಯೇಸು ಕ್ರಿಸ್ತ ಸ್ವತಃ ಬೋಧಕರಾಗಿದ್ದರು ಎಂದ ಅವರು, ಉತ್ತಮ ಗುಣಮಟ್ಟದ ಹಾಗೂ ಶಿಸ್ತು ಮತ್ತು ಮೌಲ್ಯಭರಿತ ಜೀವನಕ್ಕೆ ಪೂರಕವಾದ ಶಿಕ್ಷಣ ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಲಭಿಸುವುದರಿಂದ ಈ ಸಂಸ್ಥೆಗಳು ಎಲ್ಲರನ್ನು ಆಕರ್ಷಿಸುತ್ತಿವೆ. ಅರ್ಸುಲೈನ್ ಫ್ರಾನ್ಸಿಸ್ಕನ್ ಶಿಕ್ಷಣ ಸಂಸ್ಥೆ ಅಧಿಕೃತವಾಗಿ 50 ವರ್ಷಗಳ ಹಾಗೂ ಅನಧಿಕೃತವಾಗಿ 112 ವರ್ಷಗಳ ಶೈಕ್ಷಣಿಕ ಸೇವೆ ಸಲ್ಲಿಸಿದೆ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಜಿಲ್ಲೆಯ ಮತ್ತು ರಾಜ್ಯದ ಶೈಕ್ಷಣಿಕ ಅಭಿವೃದ್ಧಿಗೆ ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಅಪಾರ ಕೊಡುಗೆ ನೀಡಿವೆ ಎಂದು ಅಭಿನಂದಿಸಿ ಅರ್ಸುಲೈನ್ ಫ್ರಾನ್ಸಿಸ್ಕನ್ ಶಿಕ್ಷಣ ಸಂಸ್ಥೆಯ ಸೇವೆಯನ್ನು ಪ್ರಶಂಸಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಶಿವಮೊಗ್ಗದ ಬಿಷಪ್ ರೈ| ರೆ| ಡಾ| ಫ್ರಾನ್ಸಿಸ್ ಸೆರಾವೊ ಮಾತನಾಡಿ, ಮಾನವನನ್ನು ಸಮರ್ಪಕ ಮಾನವನನ್ನಾಗಿ ಪರಿವರ್ತಿಸುವ ಕಾರ್ಯವನ್ನು ಧರ್ಮ ಭಗಿನಿಯರು ತಮ್ಮ ಸೇವೆ ಮೂಲಕ ಮಾಡುತ್ತಿದ್ದಾರೆ ಎಂದರು.
ತಾಂಜಾನಿಯಾದ ಸಾಮೆ ಧರ್ಮ ಪ್ರಾಂತದ ಮಹಾ ಕಾರ್ಯದರ್ಶಿ ರೆ| ಫಾ| ಬ್ರೂನೊ ಚೆಲಂಗಾವ, ಶಾಸಕ ಜೆ.ಆರ್. ಲೋಬೊ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕಿ ಫಿಲೋಮಿನಾ ಲೋಬೊ, ದ. ಕ. ಜಿಲ್ಲಾ ಡಿಡಿಪಿಐ ವಾಲ್ಟರ್ ಡಿ’ಮೆಲ್ಲೊ, ಸಂತ ಅಲೋಶಿಯಸ್ ಕಾಲೇಜಿನ ಪಿಜಿಡಿಬಿಎಂ ವಿಭಾಗದ ಡೀನ್ ಪ್ರೊ| ಎಡ್ಮಂಡ್ ಫ್ರಾಂಕ್, ಅರ್ಸುಲೈನ್ ಫ್ರಾನ್ಸಿಸ್ಕನ್ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ ಸಿ| ಎಡಿಲ್‌ಬರ್ಗಾ ಮೊಂತೇರೊ ಅತಿಥಿಗಳಾಗಿದ್ದರು.
ಧೀರ್ಘಾವಧಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಸಮ್ಮಾನ :
ಅರ್ಸುಲೈನ್ ಫ್ರಾನ್ಸಿಸ್ಕನ್ ಶಿಕ್ಷಣ ಸಂಸ್ಥೆಯು 75ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ಈ ಸಂಸ್ಥೆಗಳಲ್ಲಿ 40 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ 9 ಮಂದಿ ಶಿಕ್ಷಕಿಯರು ಮತ್ತು 35 ವರ್ಷಕ್ಕೂ ಅಧಿಕ ಸೇವೆ ಸಲ್ಲಿಸಿದ 10 ಮಂದಿ ಶಿಕ್ಷಕ/ಶಿಕ್ಷಕಿಯರನ್ನು ಸಮ್ಮಾನಿಸಲಾಯಿತು. ಸಂಸ್ಥೆಯ ಮಾಜಿ ಕಾರ್ಯದರ್ಶಿಗಳಾದ ಸಿ| ಕ್ಲಾಡಿಯಾ ಮತ್ತು ಸಿ| ಐರಿನ್ ಡಿ’ಸೋಜಾ ಅವರನ್ನು ಹಾಗೂ 11 ಮಂದಿ ಉಪ ಕಾರ್ಯದರ್ಶಿಗಳನ್ನು ಗೌರವಿಸಲಾಯಿತು. ಸಂಸ್ಥೆಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ ‘ಲೈಟೆಡ್ ಟು ಲೈಟ್’ ಕೃತಿಯ ಬಿಡುಗಡೆ, ಶಿಕ್ಷಕ ನಿಧಿಯ ಉದ್ಘಾಟನೆ ನೆರವೇರಿತು.
ಸಂಸ್ಥೆ ಅಧ್ಯಕ್ಷ ಸಿ| ಡೋರಿನ್ ಡಿ’ಸೋಜಾ ಸ್ವಾಗತಿಸಿ ಕಾರ್ಯದರ್ಶಿ ಸಿ| ಲಿಲ್ಲಿ ಫೆರ್ನಾಂಡಿಸ್ ವಂದಿಸಿದರು. ಉಪಾಧ್ಯಕ್ಷರಾದ ಸಿ| ಸುಶೀಲಾ ಸಿಕ್ವೇರಾ ಸಹಕರಿಸಿದರು. ಪ್ರಾರಂಭದಲ್ಲಿ ಮಂಗಳೂರು ಮತ್ತು ಶಿವಮೊಗ್ಗದ ಬಿಷಪ್‌ಗ್ಳ ನೇತೃತ್ವದಲ್ಲಿ ಬಿಜೈ ಚರ್ಚ್‌ನಲ್ಲಿ ಬಲಿ ಪೂಜೆ ನಡೆಯಿತು.









