ಮಂಗಳೂರು, ಸೆ.30: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮರಳು ಎತ್ತುವಿಕೆ ಮತ್ತು ವಿಲೇವಾರಿಯನ್ನು ಏಕರೂಪದಲ್ಲಿ ನಡೆಸುವಂತೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಅವರು ಸೂಚಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರಾವಳಿಯಲ್ಲಿ ಮರಳು ವಿಲೇವಾರಿ ಬಗ್ಗೆ ದ.ಕ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಜನರಿಗೆ ಅತ್ಯಂತ ಸರಳ ರೀತಿಯಲ್ಲಿ ಮರಳು ಸಿಗುವಂತಾಗಬೇಕು. ಕಾನೂನುಬದ್ಧ ರೀತಿಯಲ್ಲಿ ಮರಳನ್ನು ನದಿಯಿಂದ ತೆಗೆದು, ಸಾಗಾಟವಾಗಬೇಕು. ಅದರಲ್ಲೂ, ಸ್ಥಳೀಯರಿಗೆ ಯತೇಚ್ಛವಾಗಿ, ಕಡಿಮೆ ದರದಲ್ಲಿ ಮರಳು ಸಿಗಲು ಕ್ರಮಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು. ಮರಳು ಲಾರಿಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಈ ವ್ಯವಸ್ಥೆ ಜಿಲ್ಲಾಡಳಿತದ ನಿಯಂತ್ರಣದಲ್ಲಿರಬೇಕು. ಅಲ್ಲದೆ, ಮರಳು ವಿಷಯದಲ್ಲಿ ಪ್ರತೀ ತಿಂಗಳು ಸಭೆ ನಡೆಸುವಂತೆ ಸಚಿವರು ತಿಳಿಸಿದರು.
ಈಗಾಗಲೇ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮರಳು ಬಾರ್ಗಳನ್ನು ಗುರುತಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ ಮರಳು ಬ್ಲಾಕ್ಗಳನ್ನು ಗುರುತಿಸಿ, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಚಿವ ರಮಾನಾಥ ರೈ ಅವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಮರಳೆತ್ತುವಿಕೆ ಬಗ್ಗೆ ನಿರ್ಧರಿಸಲು ೭ಸದಸ್ಯರ ಸಮಿತಿ ರಚಿಸಲು ಸರಕಾರ ಸೂಚಿಸಿದ್ದು, ಈ ಸಮಿತಿಯು ಮರಳು ಸಾಗಾಟದ ಪರವಾನಿಗೆ ಯನ್ನು ನಿರ್ಧರಿಸಲಿದೆ ಎಂದು ಅವರು ಹೇಳಿದರು. ಶೀಘ್ರದಲ್ಲೇ ಮರಳು ಸಾಗಾಟದ ಹೊಸ ಪದ್ಧತಿ ಜಾರಿಗೆ ತಂದು ಪರವಾನಿಗೆ ನೀಡಬೇಕು ಎಂದರು.
ಅಕ್ಟೋಬರ್ 13 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮರಳು ಪೂರೈಕೆ ಸಂಬಂಧ ಸಭೆ ನಡೆಯಲಿದೆ ಎಂದರು. ಸಭೆಯಲ್ಲಿ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸರಕಾರದ ಕಾರ್ಯದರ್ಶಿ ರಾಮಚಂದ್ರ, ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಉಡುಪಿ ಜಿಲ್ಲಾಧಿಕಾರಿ ಪಟ್ಟಣ ಶೆಟ್ಟಿ, ಉತ್ತರ ಕನ್ನಡ ಜಿಲ್ಲಾಧಿಕಾರಿ ಉಜ್ವಲ್ ಘೋಷ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇಣಿ ಮತ್ತಿತರರು ಇದ್ದರು.
