ರಾಷ್ಟ್ರೀಯ

ಶುಭ ‘ಮಂಗಳ’; ಮಾರ್ಸ್ ಆರ್ಬಿಟರ್ ಮಿಷನ್ ಯಶಸ್ವಿ, ಕಕ್ಷೆ ಸೇರಿದ ‘ಮಂಗಳಯಾನ’ ನೌಕೆ

Pinterest LinkedIn Tumblr

Mangalyaan

ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಮಾರ್ಸ್ ಆರ್ಬಿಟರ್ ಮಿಷನ್ (ಮಾಮ್) ಯಶಸ್ವಿಯಾಗಿದ್ದು, ನಿರೀಕ್ಷೆಯಂತೆಯೇ ನೌಕೆಯನ್ನು ಮಂಗಳ ಗ್ರಹದ ಕಕ್ಷೆಗೆ ಸೇರಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.

ಬಾಹ್ಯಾಕಾಶ ಇತಿಹಾಸದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇತಿಹಾಸ ನಿರ್ಮಿಸಿದ್ದು, ಮೊದಲ ಯತ್ನದಲ್ಲೇ ಮಂಗಳಯಾನ ನೌಕೆ ಕೆಂಪುಗ್ರಹದ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ.

ಅಮೆರಿಕದ ಮಂಗಳಯಾನ ಯೋಜನೆಗೆ ಹೊಲಿಸಿದರೆ ಮೂರು ಪಟ್ಟು ಕಡಿಮೆ ಪ್ರಮಾಣದ ಸುಮಾರು ೪೫೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಮಂಗಳಯಾನ ಯೋಜನೆ ಯಶಸ್ವಿಯಾಗಿದ್ದು, ನಿಗದಿಯಂತೆ ನೌಕೆಯ ಎಂಜಿನ್ ಸುಮಾರು 24 ನಿಮಿಷಗಳ ಕಾಲ ಉರಿಯುವ ಮೂಲಕ ಯಶಸ್ವಿಯಾಗಿ ಮಂಗಳ ಗ್ರಹದ ಕಕ್ಷೆಗೆ ಸೇರಿದೆ. ಆ ಮೂಲಕ ಮೊದಲ ಯತ್ನದಲ್ಲೇ ಮಂಗಳಯಾನ ಯೋಜನೆ ಯಶಸ್ವಿಗೊಳಿಸಿದ ಏಷ್ಯಾದ ಮೊದಲ ದೇಶ ಮತ್ತು ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಕೀರ್ತಿಗೆ ಭಾರತ ಭಾಜನವಾಗಿದೆ.

10 ತಿಂಗಳಿಂದ ನಿದ್ರಾವಸ್ಥೆಯಲ್ಲಿದ್ದ ನೌಕೆಯ ಪ್ರಮುಖ ಎಂಜಿನ್ ‘ಲ್ಯಾಮ್‌’ ಅನ್ನು ಕಳೆದ ಸೋಮವಾರ ಸುಮಾರು 3.987 ಸೆಕೆಂಡ್‌ಗಳ ಉರಿಸಲಾಗಿತ್ತು. ಇಂದು ಬೆಳಗ್ಗಿನಿಂದಲೇ ನೌಕೆಯನ್ನು ಕಕ್ಷೆಗೆ ಸೇರಿಸುವ ಕಾರ್ಯದಲ್ಲಿ ವಿಜ್ಞಾನಿಗಳು ಮಗ್ನರಾಗಿದ್ದು, ಬೆಳಗ್ಗೆ 4 ಗಂಟೆ 17 ನಿಮಿಷದಲ್ಲಿ ನೌಕೆಯಲ್ಲಿನ ಸಾಧಾರಣ ಅ್ಯಂಟೆನಾವನ್ನು ಚಾಲನೆ ಮಾಡುವ ಮೂಲಕ ನೌಕೆಯನ್ನು ಕಕ್ಷೆಗೆ ಸೇರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಬೆಳಗ್ಗೆ 7.12ರಲ್ಲಿ ನೌಕೆಯನ್ನು ಮಂಗಳ ಗ್ರಹದ ಕಕ್ಷೆಯ ನೇರಕ್ಕೆ ತಿರುಗಿಸುವ ಪ್ರಕ್ರಿಯೆ ಆರಂಭಿಸಲಾಯಿತು. ಬಳಿಕ ನೌಕೆಯ ದ್ರವ ರೂಪದ ಇಂಧನವನ್ನು ಹೊಂದಿರುವ ಇಂಜಿನ್ ಅನ್ನು ಉರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಇದು ಯೋಜನೆಯ ಮತ್ತೊಂದು ಪ್ರಮುಖ ಮತ್ತು ಕ್ಲಿಷ್ಟ ಪ್ರಕ್ರಿಯೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಬೆಳಗ್ಗೆ 7.42ರ ಸಮಯದಲ್ಲಿ ನೌಕೆಯು ಹಿಮ್ಮುಖ ಚಲನೆಯ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಬೆಳಗ್ಗೆ 7.47ರಲ್ಲಿ ನೌಕೆಯ ಹಿಮ್ಮುಖ ಚಲನೆ ಅಂತ್ಯಗೊಂಡು, ನೌಕೆಯಲ್ಲಿರುವ ಸಂಪರ್ಕ ಸಾಧನಗಳನ್ನು ಪರೀಕ್ಷಿಸಲಾಯಿತು. ಬೆಳಗ್ಗೆ 7.52ರಲ್ಲಿ ನೌಕೆಯು ಯಶಸ್ವಿಯಾಗಿ ಮಂಗಳ ಗ್ರಹದ ಕಕ್ಷೆ ಸೇರಿತು.

ಇಸ್ರೋ ಕೈಗೊಂಡಿರುವ ಈ ಮಹತ್ವದ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಕ್ಷಿಯಾಗಿದ್ದು, ಬೆಂಗಳೂರಿನಲ್ಲಿರುವ ಇಸ್ರೋ ನಿಯಂತ್ರಣ ಘಟಕದಲ್ಲಿ ಮೋದಿ ಅವರು ಈ ಕುತೂಹಲ ಘಟನೆಯನ್ನು ಕಣ್ತುಂಬಿಕೊಂಡರು. ನೌಕೆ ಯಶಸ್ವಿಯಾಗಿ ಕೆಂಪುಕಾಯದ ಕಕ್ಷೆ ಸೇರುತ್ತಿದ್ದಂತೆಯೇ ವಿಜ್ಞಾನಿಗಳಿಗೆ ಶುಭಾಷಯ ಕೋರಿದರು.

Write A Comment