ಅಂತರಾಷ್ಟ್ರೀಯ

ಭಾರತ-ಚೀನಾ ಶೃಂಗಸಭೆಯ ಮೇಲೆ ಕರಿ ನೆರಳು: ಗಡಿಯಲ್ಲಿ ಮತ್ತೆ ಚೀನಾ ಅತಿಕ್ರಮಣ

Pinterest LinkedIn Tumblr

ind-pak border

ಲೇಹ್/ಹೊಸದಿಲ್ಲಿ, ಸೆ.18: ಭಾರತ ಮತ್ತು ಚೀನಾಗಳ ನಡುವಣ ಗಡಿ ನಿಯಂತ್ರಣ ರೇಖೆಯಲ್ಲಿರುವ ಛುಮರ್ ಗ್ರಾಮದೊಳಗೆ ಗುರುವಾರ ಮುಂಜಾನೆ ಚೀನಾದ ಸೇನೆಯು ತನ್ನ ಇನ್ನಷ್ಟು ಸೈನಿಕರನ್ನು ತಂದಿರಿಸಿದೆ.

ಈಗ ಭಾರತಕ್ಕೆ ಭೇಟಿ ನೀಡಿರುವ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಶೃಂಗಸಭೆಗೆ ಮೊದಲು ಚೀನಾದ ಸೇನೆ ಗಡಿ ತಂಟೆಯನ್ನು ಕೆದುಕುವ ಪ್ರಯತ್ನ ಮಾಡಿದೆ.

ಗುರುವಾರ ಮುಂಜಾನೆ ಬೆಳಕು ಹರಿಯುವ ಹೊತ್ತಿಗೆ ಚೀನಾದ ಸೇನೆ ತನ್ನ ಇನ್ನಷ್ಟು ಸೈನಿಕರನ್ನು ಗಡಿ ಗ್ರಾಮಕ್ಕೆ ತಂದು ಜಮಾಯಿಸಿತ್ತು. ಗಡಿ ಪ್ರದೇಶವನ್ನು ಬಿಟ್ಟು ತೆರಳುವಂತೆ ಸೂಚಿಸುವ ಘೋಷಣೆಗಳನ್ನು ಬರೆದಿದ್ದ ಇನ್ನಷ್ಟು ಬ್ಯಾನರ್‌ಗಳನ್ನು ಚೀನಾದ ಸೈನಿಕರು ಹಿಡಿದುಕೊಂಡಿದ್ದರು. ಈಗ ಎರಡೂ ದೇಶಗಳ ಸೈನಿಕರು ಗಡಿ ಪ್ರದೇಶದಲ್ಲಿ 200 ಮೀಟರ್‌ಗಳ ಅಂತರವನ್ನು ಕಾಯ್ದುಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಛುಮರ್ ಗ್ರಾಮದಲ್ಲಿ ಭಾರತದ ಭೂಪ್ರದೇಶದೊಳಗೆ ಚೀನಾದ ಸೇನೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡಿರುವುದನ್ನು ಭಾರತದ ಸೈನಿಕರು ರವಿವಾರ ಪತ್ತೆ ಮಾಡಿದ್ದರು. ಆದರೆ ಅನಂತರ ಕಾಮಗಾರಿಯನ್ನು ಸ್ಥಗಿತಗೊಳಿಸಿದ ಚೀನಾದ ಸೇನೆ ಸ್ಥಳದಲ್ಲಿ ತನ್ನ ಸೈನಿಕರ ಬಲವನ್ನು ಹೆಚ್ಚಿಸಿತು ಎಂದು ಮೂಲಗಳು ವಿವರಿಸಿವೆ.
ರವಿವಾರದಿಂದೀಚೆಗೆ ಎರಡೂ ದೇಶಗಳ ಸೇನಾಧಿಕಾರಿಗಳ ನಡುವೆ ಎರಡು ಸಲ ಮಾತುಕತೆಗಳು ನಡೆದಿವೆ. ಬುಧವಾರ ಹಲವು ಗಂಟೆಗಳ ಕಾಲ ಚರ್ಚೆ ನಡೆದರೂ ಯಾವುದೇ ನಿರ್ಧಾರಕ್ಕೆ ಬರಲಾಗಲಿಲ್ಲ.

ಬುಧವಾರ ಬೆಳಗ್ಗೆ ಕೂಡ ಇನ್ನಷ್ಟು ಸೈನಿಕರನ್ನು ಚೀನಾ ತಂದಿರಿಸಿದೆ. ಪೀಪಲ್ಸ್ ಲಿಬರೇಷನ್ ಆರ್ಮಿಯ 500ಕ್ಕೂ ಹೆಚ್ಚು ಯೋಧರು ಗಡಿಯಲ್ಲಿ ಇದ್ದಾರೆ. ಭಾರತ ಕೂಡ ಅಷ್ಟೇ ಸಂಖ್ಯೆಯ ಸೈನಿಕರನ್ನು ಜಮೆ ಮಾಡಿ ಇರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಲೇಹ್‌ನಿಂದ ಈಶಾನ್ಯಕ್ಕೆ 300 ಕಿ.ಮೀ. ದೂರದಲ್ಲಿ ಛುಮರ್ ಗ್ರಾಮವಿದೆ. ಈ ಪ್ರದೇಶವು ಹಿಮಾಚಲ ಪ್ರದೇಶದ ಗಡಿಗೆ ತಾಗಿಕೊಂಡಿದೆ. ಈ ಪ್ರದೇಶದಲ್ಲಿ ಭಾರತದ ಸೇನೆಯ ಪ್ರಾಬಲ್ಯವನ್ನು ಕೊನೆಗಾಣಿಸಲು ಚೀನಾದ ಸೇನೆ ಹಲವಾರು ಬಾರಿ ಪ್ರಯತ್ನ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಇದೊಂದು ಘರ್ಷಣೆಯ ಬಿಂದುವೆನಿಸಿದೆ. ಛುಮರ್ ಪ್ರದೇಶವನ್ನು ಚೀನಾದ ಗಡಿಯೊಳಗೆ ಸೇರಿಸಿಕೊಳ್ಳಲು ಪಿಎಲ್‌ಎ ಸೈನಿಕರು ಹಲವು ಬಾರಿ ಪ್ರಯತ್ನಿಸಿದ್ದರು. ಭಾರತೀಯ ಸೇನೆ ಈ ಪ್ರಯತ್ನಗಳನ್ನು ವಿಫಲಗೊಳಿಸುತ್ತ ಬಂದಿತ್ತು.

ಚೀನಾದ ಸೇನೆ ತನ್ನ ಭೂಪ್ರದೇಶದಲ್ಲಿ ರಕ್ಷಣಾ ಕಾಮಗಾರಿಗಳನ್ನು ಕೈಗೊಂಡಿದೆ. ಎರಡೂ ದೇಶಗಳ ನಡುವಿನ ಒಪ್ಪಂದಗಳ ಪ್ರಕಾರ ಯಾವುದೇ ರಕ್ಷಣಾ ಸಂಬಂಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೊದಲು ಇನ್ನೊಂದು ದೇಶಕ್ಕೆ ಆ ಸಂಬಂಧದ ಮಾಹಿತಿಯನ್ನು ನೀಡಬೇಕು ಎಂದಿದೆ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ ಡೆಮ್‌ಚೋಕ್‌ನಲ್ಲಿ ಗಡಿ ಬಿಕ್ಕಟ್ಟು ಹಾಗೆಯೇ ಮುಂದುವರಿದಿದೆ. ಇಲ್ಲಿ ‘ರೆಬೊಸ್’ ಎಂಬ ಚೀನಾದ ಬುಡಕಟ್ಟು ಜನರು ಟೆಂಟ್ ಹಾಕಿಕೊಂಡು ಕುಳಿತಿದ್ದಾರೆ. ಭಾರತದ ಭೂಪ್ರದೇಶದೊಳಗೆ 500 ಮೀಟರ್‌ನಷ್ಟು ಒಳಗೆ ಅತಿಕ್ರಮಣ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Write A Comment