Uncategorized

ನೀರಿನ ಬಿಲ್ ಮೀಟರ್ ದುರುಪಯೋಗ- ಆಪ್ ಕಾರ್ಯಕರ್ತರ ಕುಟುಕು ಕಾರ್ಯಾಚರಣೆ ನಕಲಿ – ಇದು ಪೂರ್ವನಿಯೋಜಿತ ಷಡ್ಯಂತ್ರ : ಮುಹಮ್ಮದ್ ತೌಫೀಕ್ ಆರೋಪ

Pinterest LinkedIn Tumblr

Water_Meter_Cheeting_1

ಮಂಗಳೂರು, ಫೆ.15: ‘ಆಪ್ ಕಾರ್ಯಕರ್ತರ ಕುಟುಕು ಕಾರ್ಯಾಚರಣೆ, ನೀರಿನ ಬಿಲ್ ಮೀಟರ್ ತಿರುಗಿಸುವ ಹಗರಣ ಬಯಲು’ ಎಂಬ ತಲೆಬರಹದ ಸುದ್ದಿಗಳ ಮೂಲಕ ತೇಜೋವಧೆ ಮಾಡಲಾಗಿದೆ ಎಂದು ಮೀಟರ್ ರೀಡರ್ ಮುಹಮ್ಮದ್ ತೌಫೀಕ್ ಕೆ. ಕದ್ರಿ ಪೊಲೀಸ್ ಠಾಣೆಯಲ್ಲಿ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Water_Meter_Cheeting_4

ಎಂ.ಎನ್. ಸೊಲ್ಯೂಶನ್ ಎಂಬ ಖಾಸಗಿ ಸಂಸ್ಥೆಯು ನೀರಿನ ಬಿಲ್ಲಿನ ಸಂಗ್ರಹದ ನಿರ್ವಹಣೆಯನ್ನು ಮನಪಾ ವ್ಯಾಪ್ತಿಯಲ್ಲಿ ನಡೆಸುತ್ತಿದ್ದು, ಇದಕ್ಕೂ ಮೊದಲು ಬೇರೆ ಖಾಸಗಿ ಸಂಸ್ಥೆಯ ಅಧೀನದಲ್ಲಿ ಮೂರು ವರ್ಷಗಳ ಕಾಲ ನೀರಿನ ಬಿಲ್ಲು ನೀಡುವ ಜವಾಬ್ದಾರಿಯನ್ನು ಯಾವುದೇ ಆರೋಪವಿಲ್ಲದೆ ನಿರ್ವಹಿಸಿದ್ದೇನೆ ಎಂದು ತೌಫೀಕ್ ಹೇಳಿಕೊಂಡಿದ್ದಾರೆ.

ಇದೀಗ ಬಿಲ್ ಮೀಟರ್‌ನಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸುತ್ತಿರುವ ದೀಪಕ್ ಡಿಸೋಜ ಅವರ ಮನೆಯ ನೀರಿನ ಮೀಟರ್ ತಾನು ಕೆಲಸ ನಿರ್ವಹಿಸುತ್ತಿರುವ ವಾರ್ಡ್‌ನಲ್ಲಿದ್ದು, ಅದರ ಸೀಕ್ವೆನ್ಸಿ ಸಂಖ್ಯೆಯು ತನ್ನ ವಾರ್ಡ್‌ಗೆ ಸಂಬಂಧಿಸಿದ ಅಥವಾ ತಾನು ಬಿಲ್ ನೀಡುವ ವ್ಯಾಪ್ತಿಗೆ ಬರುವುದಿಲ್ಲ. ಹಾಗಿದ್ದರೂ ಫೆ.9ರಂದು ನನ್ನ ಮೊಬೈಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ನೀರಿನ ಬಿಲ್ ತಲುಪಿಸುವಂತೆ ಕೇಳಿಕೊಂಡಿದ್ದಾರೆ.

ಮರುದಿನವೂ ಕರೆ ಮಾಡಿ ಬರುವಂತೆ ಒತ್ತಾಯಿಸಿದ್ದರು. ಅದರ ಸೀಕ್ವೆನ್ಸಿ ನಂಬರನ್ನು ನನ್ನ ಬಿಲ್ ಮಿಶನ್‌ಗೆ ಹಾಕಿದಾಗ ಇದು ನನ್ನ ವ್ಯಾಪ್ತಿಯದ್ದಲ್ಲ ಎಂದು ತಿಳಿಸಿದೆ. ಆಗವರು ‘ನಾನೊಬ್ಬ ವೈದ್ಯನಾಗಿದ್ದು, ನನ್ನ ನೀರಿನ ಮೀಟರ್ ಜಂಪ್ ಆಗುತ್ತಿದೆ. ನನ್ನ ಪರಿಚಯದ ಪ್ಲಂಬರ್ ಒಬ್ಬ ಮೀಟರನ್ನು ಹಿಂದೆ ತಿರುಗಿಸಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ. ನಾನು ನೀರಿನ ಬಿಲ್ಲನ್ನು ಉಳಿಸಲು ಹೋಗಿ ಇದೀಗ ಪೇಚಿಗೆ ಸಿಲುಕಿದ್ದು, ಬೇರೆಯವರು ಬಂದು ಮೀಟರ್ ನೋಡಿದರೆ ನನ್ನ ಮಾನ ಹರಾಜಾಗುತ್ತದೆ. ಹಾಗಾಗಿ ಮೀಟರನ್ನು ಸಹಜ ಸ್ಥಿತಿಗೆ ತರುವಂತೆ’ ಕೋರಿಕೊಂಡರು ಎಂದಿದ್ದಾರೆ.

ಸಂಬಂಧಪಟ್ಟವರಿಗೆ ದೂರು ನೀಡಿದರೆ ಸರಿ ಪಡಿಸುತ್ತಾರೆ ಎಂದು ಹೇಳಿದರೂ ನನ್ನ ಕೈಗೆ ಸುತ್ತಿಗೆ ಮತ್ತು ಕಬ್ಬಿಣದ ಮೊಳೆ ನೀಡಿ ಸರಿಪಡಿಸುವಂತೆ ಒತ್ತಾಯಿಸಿದರು. ಮಾನವೀಯ ದೃಷ್ಟಿಯಿಂದ ನಾನು ಅವರು ಹೇಳಿದಂತೆ ಮಾಡಿದ್ದು, ಈ ಸಂದರ್ಭ ಮೀಟರ್ ಪರಿಶೀಲಿಸಿದಾಗ ಅದು ತಿರುಗಿ ಇರಲಿಲ್ಲ. ಹಾಗಿದ್ದರೂ ಅವರು ಎಲ್ಲವೂ ಸರಿಯಾಯಿತು ಎಂದು ಹೇಳಿ ನನ್ನನ್ನು ಕಳುಹಿಸಿದ್ದಾರೆ.

ಫೆ.12 ಮತ್ತು 13ರಂದು ಮಾಧ್ಯಮದಲ್ಲಿ ನನ್ನ ಮೇಲೆ ಆರೋಪ ಹೊರಿಸಿ ‘ಆಮ್ ಆದ್ಮಿಯ ಕುಟುಕು ಕಾರ್ಯಾಚರಣೆ’ ಎಂಬ ತಲೆಬರಹದಡಿ ಸುದ್ದಿಗಳನ್ನು ನೀಡಿ ನನ್ನ ತೇಜೋವಧೆ ಮಾಡಲಾಗಿದೆ. ಸಂಬಂಧಪಟ್ಟವರು ನನ್ನ ಮೊಬೈಲ್ ಪರಿಶೀಲನೆ ಸೇರಿದಂತೆ ಯಾವುದೇ ರೀತಿಯ ತನಿಖೆಯನ್ನು ನಡೆಸ ಬಹುದು. ಇದೊಂದು ಪೂರ್ವನಿಯೋಜಿತ ಷಡ್ಯಂತ್ರ. ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮುಹಮ್ಮದ್ ತೌಫೀಕ್ ಕೆ. ಹೇಳಿಕೊಂಡಿದ್ದಾರೆ.

Write A Comment