ಕರಾವಳಿ

ಉಡುಪಿ ಜಿಲ್ಲೆಯ‌ 350 ಸರಕಾರಿ, ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ 41 ಸಾವಿರ ಜೊತೆ ಉಚಿತ ಶಾಲಾ ಸಮವಸ್ತ್ರ ವಿತರಣೆ | ‘ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾ ಪೋಷಕ್ ಪ್ರಶಸ್ತಿ’ ಪ್ರದಾನ

Pinterest LinkedIn Tumblr

ಬಡವರಿಗೆ ಉಪಕರಿಸುವ ಹೃದಯ ಶ್ರೀಮಂತಿಕೆಯಿರುವ ಎಚ್‌.ಎಸ್ ಶೆಟ್ಟಿಯವರ  ಕಾರ್ಯ ಶ್ಲಾಘನೀಯ: ಯು.ಟಿ ಖಾದರ್

ಬೈಂದೂರು: ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡುವುದು ನಿಜವಾದ ದೇಶಪ್ರೇಮ. ತರಗತಿಕೋಣೆಯಲ್ಲಿ ಕುಳಿತ ವಿದ್ಯಾರ್ಥಿಗಳಿಂದ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ. ವಿದ್ಯಾರ್ಥಿಗಳು ಸಂಸ್ಕೃತಿ, ಪರಂಪರೆ ಅರಿತು ಸಹೋದರತ್ವನ್ನು ಬೆಳೆಸಿಕೊಂಡು ಉನ್ನತ ಸ್ಥಾನಕ್ಕೇರುವ ಹಂಬಲ ಹೊಂದಬೇಕು. ಇದಕ್ಕೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯವಿದೆ ಎಂದು ಕರ್ನಾಟಕ ವಿಧಾನಸಭೆ ಸಭಾಪತಿಗಳಾದ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇವರಿಂದ ಹಾಗೂ ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಬೈಂದೂರು ಮತ್ತು ಶಾಲಾ‌ಶಿಕ್ಷಣ ಮತ್ತು ಸಾಕ್ಷರತಾ ಇಲಾಳೆ ಉಡುಪಿ ಜಿಲ್ಲೆ ಸಹಕಾರದೊಂದಿಗೆ ಶನಿವಾರ ಬೈಂದೂರು ಜೆ.ಎನ್.ಆರ್ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲೆಯ‌ 350 ಸರಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ 41 ಸಾವಿರ ಜೊತೆ ಉಚಿತ ಶಾಲಾ ಸಮವಸ್ತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅತ್ಯುತ್ತಮ ಸಮಾಜ ನಿರ್ಮಾಣ ಎಲ್ಲರ ಜವಬ್ದಾರಿ. ಬೇರೆಬೇರೆ ದೇಶಗಳು ತೇರಿಗೆ ಮೊದಲಾದವುಗಳ ಮೇಲೆ ನಿಂತರೆ ಭಾರತ ಮಾತ್ರ ಮಾನವೀಯತೆ ಹಾಗೂ ಮೌಲ್ಯಾಧಾರಿತ ಚಿಂತನೆಗಳ ಮೇಲೆ ನಿಂತಿದೆ. ಬಡವರಿಗೆ ಉಪಕರಿಸುವ ಹೃದಯ ಶ್ರೀಮಂತಿಕೆ ಹಣವಂತರು ತೋರಬೇಕು. ಈ ನಿಟ್ಟಿನಲ್ಲಿ ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಕ್ಷೇತ್ರಕ್ಕೆ ಎಚ್.ಎಸ್. ಶೆಟ್ಟಿಯವರು ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದ್ದು ಎಲ್ಲರಿಗೂ ಪ್ರೇರಣೆಯಾಗಬೇಕೆಂದರು.

ಬಡವರ ಬದುಕಿಗೆ ಶಕ್ತಿ ತುಂಬುವ ಕೆಲಸ: ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಧ್ವನಿ ಇಲ್ಲದವರು, ಶಕ್ತಿ ಇಲ್ಲದವರು, ಕಲಿಕೆಯಲ್ಲಿ ಆಸಕ್ತಿಯುಳ್ಳವರಿಗೆ ಶಕ್ತಿ ಕೊಡುವ ಕೆಲಸವಾಗಬೇಕಿದ್ದು ಎಚ್‌ಎಸ್ ಶೆಟ್ಟಿಯವರು ಬಡವರ ಬದುಕಿಗೆ ಶಕ್ತಿ ತುಂಬುವ ಮಾನವೀಯ ಕೆಲಸ ಮಾಡುತ್ತಿದ್ದಾರೆ ಎಂದರು.

ಕೊರಗ ಸಮುದಾಯಕ್ಕೆ ನೂರು ಮನೆ ಕಟ್ಟಿಕೊಡುವ ಗುರಿ: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಅಧ್ಯಕ್ಷ ಡಾ. ಎಚ್.ಎಸ್. ಶೆಟ್ಟಿ ಪ್ರಸ್ತಾವನೆಗೈದು, 2008ರಲ್ಲಿ ಹುಟ್ಟಿಕೊಂಡ ಸಂಸ್ಥೆ ಹಂತಹಂತವಾಗಿ ವಿವಿಧ ಸ್ತರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕಳೆದ ವರ್ಷ 7 ಕೋಟಿ ಹಣವನ್ನು ದಾನಧರ್ಮಕ್ಕೆ ವಿನಿಯೋಗಿಸಲಾಗಿದೆ. ಮುಂದಿನ 5 ವರ್ಷದಲ್ಲಿ ಕೊರಗ ಸಮುದಾಯಕ್ಕೆ 100 ಮನೆ ಕಟ್ಟಿಸಿಕೊಡುವ ಯೋಜನೆ ಹಮ್ಮಿಕೊಂಡಿದ್ದು ಈಗಾಗಾಲೇ ಮನೆಯೊಂದಕ್ಕೆ 12-13 ಲಕ್ಷದ ಒಟ್ಟು 2 ಕೋಟಿ ರೂ. ವೆಚ್ಚದಲ್ಲಿ 14 ಕೊರಗರ ಮನೆ ನಿರ್ಮಾಣ ಕೆಲಸವೂ ಆಗುತ್ತಿದೆ ಎಂದರು.

ಇದೇ ಸಂದರ್ಭ ಹಿರಿಯ ಶಿಕ್ಷಕ ಹಾಗೂ ಯಕ್ಷಗಾನ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿಯವರಿಗೆ ‘ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾ ಪೋಷಕ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶಪಾಲ ಸುವರ್ಣ, ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್‌ನ ಪ್ರವರ್ತಕ ಎಂ.ದಿನೇಶ್ ಹೆಗ್ಡೆ, ಉಡುಪಿ ಡಿಡಿಪಿಐ ಕೆ. ಗಣಪತಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಇದ್ದರು.

ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಬೈಂದೂರು ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ ಸ್ವಾಗತಿಸಿದರು. ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ವಿಶ್ವನಾಥ ಶೆಟ್ಟಿ, ಪತ್ರಕರ್ತ ಜಯಶೇಖರ್ ಮಡಪ್ಪಾಡಿ ಪರಿಚಯಿಸಿ, ಅಧ್ಯಾಪಕ ರಾಜೀವ ಶೆಟ್ಟಿ ವಂದಿಸಿದರು.

Comments are closed.