ಕರಾವಳಿ

ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ

Pinterest LinkedIn Tumblr

(ವರದಿ, ಚಿತ್ರ- ಯೋಗೀಶ್ ಕುಂಭಾಸಿ)

ಕುಂದಾಪುರ: ವಿದ್ಯೆ ಎಂಬುದು ಕೇವಲ ಅಕ್ಷರ ಹಾಗೂ ವಿಷಯಗಳ ಸಂಗ್ರಹವಲ್ಲ. ಓರ್ವನ ವ್ಯಕ್ತಿತ್ವ ಅರಳಸಿ ಆತನಲ್ಲಿರುವ ಸುಪ್ತ ಪ್ರತಿಭೆಯನ್ನು ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡಿ, ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗುವುದೇ ವಿದ್ಯೆ. ಈ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿಯು ಕೇವಲ ಸ್ಪರ್ಧೆಯಾಗಿರದೆ ಕಲಿಕೆಯಾಗಲಿ ಎಂದು ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ಚಂದ್ರಿಕಾ ಧನ್ಯ ಹೇಳಿದರು.

ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ವಲಯ, ಕರ್ನಾಟಕ ಪಬ್ಲಿಕ್ ಶಾಲೆ ಕೋಟೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಕೋಟೇಶ್ವರ ಕೆಪಿಎಸ್ ಪ್ರೌಢಶಾಲೆಯಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಸಮಾಜಮುಖಿ ಬೆಳವಣಿಗೆಯಲ್ಲಿ ಪೋಷಕರು, ಶಿಕ್ಷಕರ ಕರ್ತವ್ಯ ಹೆಚ್ಚಿದೆ. ವಿದ್ಯಾರ್ಥಿಗಳಿಗೆ ಸಂಸ್ಕಾರ ಹಾಗೂ ಸಂಸ್ಕೃತಿ ಬೆಳೆಸುವ ಕಾರ್ಯವಾಗಬೇಕು. ಸ್ಪರ್ಧೆಯಲ್ಲಿ ಗೆಲುವಿನ ತೀರ್ಪಿಗೆ ಮಹತ್ವ ನೀಡದೆ ನಿರಂತರವಾದ ಕಲಿಕೆಗೆ ಒತ್ತು ನೀಡುವ ಜೊತೆಗೆ ತಾವು ಕಲಿತ ವಿಚಾರವನ್ನು ಇನ್ನೊಬ್ಬರಿಗೆ ಕಲಿಸಬೇಕು ಎಂದವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೋಟೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷ ಕೃಷ್ಣ ಗೊಲ್ಲ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಹೊರಹೊಮ್ಮಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ. ಸೋತವರು ಕುಗ್ಗದೆ, ಗೆದ್ದವರು ಹಿಗ್ಗದೆ ಸ್ಪರ್ಧಾ ಮನೋಭಾವದೊಂದಿಗೆ ಸ್ವೀಕರಿಸಬೇಕು ಎಂದರು.

ಇದೇ ಸಂದರ್ಭ ಕಾರ್ಯಕ್ರಮದ ಮಹಾಪೋಷಕರಾದ ಉದ್ಯಮಿ ಸುರೇಂದ್ರ ಶೆಟ್ಟಿ, ಚಂದ್ರಿಕಾ ಧನ್ಯ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ದಿನಕರ ಶೆಟ್ಟಿ ಅಂಪಾರು, ಕುಂದಾಪುರ ತಾಲೂಕು ಅಧ್ಯಕ್ಷ ಗಣೇಶ್ ಶೆಟ್ಟಿ, ಉದ್ಯಮಿ ಸುರೇಂದ್ರ ಶೆಟ್ಟಿ, ಪ್ರತಿಭಾ ಕಾರಂಜಿ ಜಿಲ್ಲಾ ನೋಡಲ್ ಅಧಿಕಾರಿ ಚಂದ್ರ ನಾಯ್ಕ್, ಉಪನಿರ್ದೇಶಕರ ಕಚೇರಿ ಶಿಕ್ಷಣಾಧಿಕಾರಿ ಜಾಹ್ನವಿ, ಡಯಟ್ ಉಡುಪಿಯ ಉಪನ್ಯಾಸಕ ಪ್ರಭಾಕರ ಮಿತ್ಯಂತಾಯ, ಕೋಟೇಶ್ವರ ಕೆಪಿಎಸ್ ಶಾಲೆ ಪ್ರಭಾರ ಪ್ರಾಂಶುಪಾಲೆ ಸುಶೀಲಾ, ಉಪಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ, ಕೆಪಿಎಸ್ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಯೋಗಿ ನಾಯ್ಕ್, ಎಸ್ಡಿಎಂಸಿ ಉಪಾಧ್ಯಕ್ಷ ವಿಶ್ವನಾಥ್ ಇದ್ದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ ಜಿಲ್ಲಾ ಉಪನಿರ್ದೇಶಕ ಎನ್.ಕೆ ಶಿವರಾಜ್ ಸ್ವಾಗತಿಸಿದರು. ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್ ಕಾಂತರಾಜು ವಂದಿಸಿದರು. ಕೋಟೇಶ್ವರ ಕೆಪಿಎಸ್ ಶಾಲೆ ಶಿಕ್ಷಕಿಯರಾದ ದಿವ್ಯಪ್ರಭಾ, ಅನುರಾಧ ಕಾರ್ಯಕ್ರಮ ನಿರೂಪಿಸಿದರು.

ಆಕರ್ಷಕ ಮೆರವಣಿಗೆ
ಕಳಶ ಹಿಡಿದ ವಿದ್ಯಾರ್ಥಿನಿಯರು, ಯಕ್ಷಗಾನ ವೇಷಧಾರಿ ವಿದ್ಯಾರ್ಥಿಗಳು, ತಟ್ಟಿರಾಯ, ಚೆಂಡೆ ವಾದನ ಸಹಿತ ವಿವಿಧ ಕಲಾತಂಡಗಳಿದ್ದ ಮೆರವಣಿಗೆ ಕೋಟೇಶ್ವರದ ಪೇಟೆಯ ಪ್ರಮುಖ ರಸ್ತೆಯಲ್ಲಿ ಸಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಶಾಲೆಗೆ ಆಗಮಿಸಿತು. ಈ ವೇಳೆ ಚೆಂಡೆ ಶಬ್ದಕ್ಕೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.

 

Comments are closed.