ಕರಾವಳಿ

ಗದ್ದೆ ಕೆಸರಲ್ಲಿ ಹೂತ ಕಾರನ್ನು ತಳ್ಳಿ ಸಹಕರಿಸಿದ ಉಡುಪಿಯ ಯುವಕರು, ಕೃಷಿಕರಿಗೆ ಥ್ಯಾಂಕ್ಸ್ ಹೇಳಿದ ಕೃಷಿ ಸಚಿವ ಬಿ.ಸಿ ಪಾಟೀಲ್

Pinterest LinkedIn Tumblr

ಉಡುಪಿ: ಜಿಲ್ಲೆಯ ಕೃಷಿ ಚಟುವಟಿಕೆಗಳ ಪರಿಶೀಲನೆ ಹಾಗೂ ನೂತನ ಬೇಸಾಯ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಗಮಿಸಿದ್ದ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಸಂಚರಿಸುತ್ತಿದ್ದ ಕಾರು ಉಡುಪಿ ಕಡೆಕಾರು ಎಂಬಲ್ಲಿ ಗದ್ದೆಯ ಕೆಸರಿನಲ್ಲಿ ಹೂತು ಹೋಗಿದ್ದು ಕೆಲ‌ಕಾಲ ಪಡಿಪಾಟಲು‌ ಪಡುವಂತಾಯಿತು.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕೇದಾರೋತ್ಥಾನ ಬೇಸಾಯ ಅಭಿಯಾನದಡಿ ವಿಧಾನಸಭಾ ಕ್ಷೇತ್ರದ ಹಡಿಲುಬಿಟ್ಟ 2000 ಎಕರೆ ಗದ್ದೆಯನ್ನು ಬೇಸಾಯ ಮಾಡಲಾಗುತ್ತಿದೆ. ಶನಿವಾರದಂದು ಕಡೆಕಾರಿನಲ್ಲಿ ನಡೆದ ಈ ನಾಟಿ ಕಾರ್ಯಕ್ಕೆ ಕೃಷಿ ಸಚಿವರು ಆಗಮಿಸಿದ್ದರು. ಮಳೆಯಿದ್ದ ಹಿನ್ನೆಲೆ ಈ ಸಂದರ್ಭ ಗದ್ದೆಯ ಕೆಸರಿನಲ್ಲಿ ಸಚಿವರ ಕಾರು ಹೂತಿದೆ. ಕಾರು ಮೇಲೆತ್ತಲು ಬಿಜೆಪಿ ನಾಯಕರು, ಸ್ಥಳೀಯ ಜನ ಪ್ರತಿನಿಧಿಗಳು ಕೆಲಕಾಲ ಹರಸಾಹಸ ಪಟ್ಟಿದ್ದು ಅಲ್ಲೇ ಸಮೀಪ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಯುವಕರು ಓಡೋಡಿ ಬಂದು ಸಚಿವರ ಕಾರನ್ನು ತಳ್ಳಿ ಮೇಲೆ ಎತ್ತಿದರು.

ಇನ್ನು ತನ್ನ‌ ಕಾರು ಸುವ್ಯವಸ್ಥಿತ ಜಾಗಕ್ಕೆ ಬರಲು ಸಹರಕರಿಸಿದವರಿಗೆ ಜಾಲತಾಣದಲ್ಲಿ ಸಚಿವರು ಕೃತಜ್ಞತೆ ‌ಸಲ್ಲಿಸಿದ್ದಾರೆ. “ಉಡುಪಿ ಬಳಿಯ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮಕ್ಕೆ ತೆರಳುವಾಗ ಕೆಸರಿನಲ್ಲಿ ಸಿಲುಕಿಕೊಂಡಿದ್ದ ನಮ್ಮ ಕಾರನ್ನು ತಳ್ಳಲು ಸಹಕರಿಸಿದ ಸುತ್ತಮುತ್ತಲಿನ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಯುವ ಮಿತ್ರರು, ರೈತ ಬಂಧುಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು” ಎಂದು ಅವರು ಬರೆದಿದ್ದಾರೆ.

 

Comments are closed.