ಕರಾವಳಿ

ಕೊರೋನಾ ನಡುವೆ ಮಾದರಿ ಕಾರ್ಯಕ್ರಮ- ಆನ್‌ಲೈನ್ ಮೂಲಕ ವೀಕ್ಷಕರ ಮನಗೆದ್ದ ಕಾರಂತೋತ್ಸವ ಆಲ್ಮೋರ

Pinterest LinkedIn Tumblr

ಉಡುಪಿ: ಕೋಟದ ಹೆಸರನ್ನು ಪ್ರಪಂಚದ ತುಂಬೆಲ್ಲ ಪಸರಿಸುವಂತೆ ಮಾಡಿದ, ತಾನು ಬರೆದಂತೆ ಬದುಕಿ ತೋರಿಸಿದ, ಒಬ್ಬ ಸಾಮಾನ್ಯ ಮನುಷ್ಯ ಕೂಡಾ ಹೇಗೆ ಸಾಧನೆ ಎಂಬ ಮೆಟ್ಟಿಲು ಏರಬಹುದು ಎಂದು ಸಮಾಜಕ್ಕೆ ತೋರಿಸಿ ಸಾಹಿತ್ಯ ಕ್ಷೇತ್ರದಲ್ಲಿ ಶ್ರೇಷ್ಠ ಅನಿಸಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ|| ಶಿವರಾಮ ಕಾರಂತರ ಜನ್ಮ ದಿನ. ಅಕ್ಟೋಬರ್ 10 ಕಾರಂತರು ಜನಿಸಿದ ದಿನ ಅವರ ಸವಿ ನೆನಪಿಗಾಗಿ ಅವರ ಹುಟ್ಟಿದ ದಿನವನ್ನು ಕೋಟದ ಕಾರಂತ ಥೀಮ್ ಪಾರ್ಕ್‌ನಲ್ಲಿ ಕಳೆದ ಹಲವಾರು ವರುಷಗಳಿಂದ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ, ಅಲ್ಲದೇ ಕಾರಂತರ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಡಾ|| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. ಈ ವರ್ಷ ಹುಟ್ಟೂರ ಪ್ರಶಸ್ತಿ ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ ನಾಡೋಜ ಡಾ. ಎಸ್ .ಎಲ್ ಭೈರಪ್ಪ ಅವರಿಗೆ.

ಹೌದು ಕಾರಂತೋತ್ಸವ ಈ ಸಲ ಮೊದಲಿನ ಹಾಗಿರಲಿಲ್ಲ. ಈಡೀ ಪ್ರಪಂಚವನ್ನೇ ಅಲ್ಲೋಲ ಕಲ್ಲೋಲ ಮಾಡಿದ ಕೊರೋನಾ ವೈರಸ್ ನಿಂದ ಕಾರ್ಯಕ್ರಮದ ಆಯೋಜನೆ ಕಷ್ಟವಾಗಿತ್ತು. ಆದರೆ ಸಂಘಟಕರು ಇದಕ್ಕೆ ಕಂಡುಕೊಂಡ ಮಾರ್ಗ ಎಂದರೆ ಆನ್ ಲೈನ್ ಕಾರ್ಯಕ್ರಮ. ಪ್ರತಿ ವರ್ಷದಂತೆ ಆನ್ ಲೈನ್ ಮೂಲಕ ಹತ್ತು ದಿನಗಳ ಕಾಲ ಸಾಹಿತ್ಯಿಕ -ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಯಿತು. ಒಂದು ಹೊಸ ಹೆಸರಿನ ಮೂಲಕ ಕಾರಂತೋತ್ಸವ ಮುನ್ನುಡಿ ಬರೆಯಲಾಯಿತು. ಅದುವೇ ಆಲ್ಮೋರ-2020(ಮರೆಯಲಾಗದ ಶಬ್ದತೀರ). ಎಲ್ಲರಲ್ಲೂ ಆಲ್ಮೋರ ಹೆಸರಿನ ಬಗ್ಗೆ ಚರ್ಚೆ ಆರಂಭವಾಯಿತು ಏನಿರಬಹುದು ಆಲ್ಮೋರದ ಅರ್ಥ.॒? ಆಲ್ಮೋರ ಎಂಬುದು ಸ್ವಾಮಿ ವಿವೇಕಾನಂದರು ಉತ್ತರ ಖಂಡದಲ್ಲಿ ಒಂದು ಇಷ್ಟವಾದ ಪರ್ವತ ಅಲ್ಲದೇ ಆಲ್ಮೋರ ಎಂಬುವುದು ಆತ್ಮ ವಿಶ್ವಾಸ. ಕಾರಂತರು , ಭೈರಪ್ಪನವರು ತಮ್ಮ ಆತ್ಮ ವಿಶ್ವಾಸದಿಂದ ಮಾಡಿದ ಸಾಧನೆ ಅಲ್ಲದೇ ಇಂತಹ ಕೋವಿಡ್ ಸಂದಿಗ್ಧ ಸ್ಥಿತಿಯಲ್ಲಿ ನಮಗೆ ಬೇಕಾಗಿರುವುದು ಆತ್ಮವಿಶ್ವಾಸ ಅಲ್ಲವೇ. ಕಾರಂತೋತ್ಸವದಲ್ಲಿ ಮೂಡಿ ಬಂದೇ ಬಿಟ್ಟಿತು.

ಭೈರಪ್ಪನವರ ವಿನಂತಿ ಮೇರೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಸೀಮಿತ ಜನರಿಗೆ ಹೊರತು ಪಡಿಸಿ ಅವರ ಮನೆಯಲ್ಲೇ ಪ್ರದಾನ ಮಾಡಲಾಯಿತು. ಅದರ ಪ್ರಯುಕ್ತ ಹಾಗೂ ಕಾರಂತರ ಜನ್ಮದಿನೋತ್ಸವದ ಅಂಗವಾಗಿ ಅಕ್ಟೋಬರ್ 10 ರಿಂದ 19ರ ತನಕ ಕಾರಂತ ಥೀಮ್ ಪಾರ್ಕ್‌ನಲ್ಲಿ ಸಾಹಿತ್ಯಿಕ ಸಾಂಸ್ಕೃತಿಕ ಸುಗ್ಗಿ ನಡೆಯಿತು. ಈ ಸಲ ಕಾರ್ಯಕ್ರಮದ ವಿಶೇಷವಾಗಿ ಕಾರಂತರ ಕೃತಿ ಚಿಂತನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹತ್ತು ದಿನಗಳಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳು ಕಾರಂತರ ಬದುಕು-ಕೃತಿ-ಚಿಂತನದಲ್ಲಿ ಕಾರಂತರ ಬದುಕಿನ ನೆನಪಿನ ಪುಟಗಳನ್ನು ತೆರೆಯುವಲ್ಲಿ ಯಶಸ್ಸಾದರು. ಹತ್ತು ದಿನಗಳ ಸಾಂಸ್ಕೃತಿಕ ಸುಗ್ಗಿಯಲ್ಲಿ ಮೊದಲ ದಿನದಲ್ಲೇ ಕಾರ್ಯಕ್ರಮದಲ್ಲಿ ತೆಂಕು ಬಡಗಿನ ಸಮನ್ವಯದಲ್ಲಿ ಜನ್ಸಾಲೆ-ಕಾವ್ಯಶ್ರೀ-ಮೊಗೆಬೆಟ್ಟು ಅವರ ತಂಡ ವೀಕ್ಷರನ್ನು ರಂಜಿಸಿದರು. ಉಳಿದ ದಿನಗಳಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ಕೊಟ್ಟು ಪ್ರೋತ್ಸಾಹಿಸುವ ಉದ್ದೇಶದಿಂದ ನಾಲ್ಕು ತಂಡಗಳಿಗೆ ಅವಕಾಶ ನೀಡಿ ಟ್ರಾಕ್ ಮ್ಯೂಸಿಕ್ ಮೂಲಕ ವೀಕ್ಷಕರಿಗೆ ಸುಮಧುರ ಹಾಡುಗಳ ಸಂಗೀತ ರಸದೌತಣ ನೀಡಲಾಯಿತು. ಅಲ್ಲದೇ ಮಹಿಳೆಯರೇ ಕಟ್ಟಿ ಕೊಂಡ ಕೋಟದ ಯಕ್ಷ ಮಹಿಳಾ ಬಳಗದವರಿಂದ ” ಸುಭದ್ರಾ ರಾಯಭಾರ” ತಾಳಮದ್ದಳೆ ಸುಂದರವಾಗಿ ಮೂಡಿ ಬಂದು ಯಕ್ಷ ಪ್ರಿಯರಿಂದ ಉತ್ತಮ ಸ್ಪಂದನೆ ದೊರಕಿತು. ಅಲ್ಲದೇ ಆಳ್ವಾಸ್ ವಿದ್ಯಾರ್ಥಿಗಳು ಕೂಡಿಕೊಂಡು ಕುಮಾರಿ ಸುಶ್ಮಿತಾ ಸಾಲಿಗ್ರಾಮ ಅವರ ರಾಧಾನುರಾಗ ಯಕ್ಷ-ನಾಟ್ಯ-ವಿಲಾಸ ಎಲ್ಲರ ಮನ ಗೆದ್ದದ್ದು ಸುಳ್ಳಲ್ಲ.

ಯುವ ಜನಾಂಗ ಯಕ್ಷಗಾನದ ಕಡೆ ಒಲವು ತೋರುತ್ತಿರುವುದು ಸಂತೋಷದ ವಿಷಯವೇ ಸರಿ. ವಾಟ್ಸ್ ಅಪ್ ಹಾಗೂ ಫೇಸ್ ಬುಕ್‌ನಲ್ಲಿ ಲಾಕ್ ಡೌನ್ ಸಮಯದಲ್ಲಿ ಹೆಚ್ಚು ಸದ್ದು ಮಾಡಿದ್ದು ಕಲಾವಿದೆ ಶ್ರೀಮತಿ ಮಾನಸಿ ಕೊಡವೂರು ಅವರ ಏಕಪಾತ್ರಾಭಿನಯನದ ವಿಡಿಯೋಗಳು. ಅವರ ನೃತ್ಯ ಚಿತ್ತಾರ ಕಾರ್ಯಕ್ರಮದಲ್ಲಿ ಸಮೂಹ ನೃತ್ಯ ಎಲ್ಲರ ಮನಗೆದ್ದಿತು. ಮಾನಸಿ ಅವರ ಭಾವಾಭಿನಯ ನೋಡುವುದೇ ಕಣ್ಣಿಗೊಂದು ಹಬ್ಬ.

ದಿನಕ್ಕೊಂದು ಕಾರಂತರ ಬಗೆಗಿನ ಚಿಂತನ ಮಾತುಗಳ ಜೊತೆ ಹೊಸ ಸಾಂಸ್ಕೃತಿಕ ತೋರಣದಲ್ಲಿ ವೀಕ್ಷಕರು ಹತ್ತು ದಿನಗಳ ಕಾಲ ಕಾರಂತರ ಸಾಧನೆ ನೆನೆಯುತ್ತಾ ಸಾಂಸ್ಕೃತಿಕ ಲೋಕದಲ್ಲಿ ತೇಲಾಡಿದರು. ಇಂತಹ ಅವಕಾಶ ಮಾಡಿಕೊಟ್ಟ ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ ಅವರ ಈ ಶ್ರಮಕ್ಕೆ ತಲೆಬಾಗಲೇ ಬೇಕು. ಮುಂದಿನ ದಿನಗಳಲ್ಲಿ ಇನ್ನಷ್ಟೂ ಕಾರ್ಯಕ್ರಮಗಳು ಇವರ ಮೂಲಕ ಮೂಡಿ ಬರಲಿ ಎಂಬುವುದು ಹಾರೈಕೆ.

Comments are closed.