ಉಡುಪಿ: ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ‍್ಯಾಂಕ್, ಎನ್‌ಇಟಿ ಪರೀಕ್ಷೆಯನ್ನು ಪ್ರಥಮ ಯತ್ನದಲ್ಲೇ ತೇರ್ಗಡೆ ಹೊಂದಿ ಸಾಧನೆ ಮಾಡಿರುವ ಕೊರಗ ಸಮುದಾಯದ ಸಬಿತಾ ಕೊರಗ ಅವರು ಇದೀಗ ಪಿಎಚ್‌ಡಿ ಪಡೆದಿದ್ದಾರೆ. ಈ ಮೂಲಕ ಸಮುದಾಯದ ಮೊದಲ ಮಹಿಳಾ ಡಾಕ್ಟರೇಟ್ ಪದವೀಧರೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಉಡುಪಿ ಜಿಲ್ಲೆಯ ಸಾಸ್ತಾನ ಸಮೀಪದ ಗುಂಡ್ಮಿಯ ಸಬಿತಾ ಶೈಕ್ಷಣಿಕವಾಗಿ ಸಾಧನೆ ಮಾಡುವ ಕನಸು ಹೊಂದಿದ್ದರು. ಮಂಗಳೂರು ವಿಶ್ವವಿದ್ಯಾಲಯ ದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ನೇಮಕಗೊಂಡಿರುವ ಸಬಿತಾ ಕೊರಗ ಅವರಿಗೆ ಸಮಾಜಶಾಸ್ತ್ರ ವಿಭಾಗದಲ್ಲಿ ಪಿಎಚ್‌ಡಿಗೆ ಅವಕಾಶ ದೊರೆತಿತ್ತು. ಮಂಗಳೂರು ವಿವಿಯ ಸಮಾಜಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಜೋಗನ್ ಶಂಕರ್ ಮಾರ್ಗದರ್ಶನದಲ್ಲಿ ‘ಇವ್ಯಾಲ್ಯುವೇಷನ್ ಆಫ್ ಪಾಲಿಸೀಸ್ ಆಂಡ್ ಪ್ರೋಗ್ರಾಮ್ಸ್ ಆಫ್ ಟ್ರೈಬಲ್ ಡೆವಲಪ್‌ಮೆಂಟ್ ಆಫ್ ಕರ್ನಾಟಕ ಸ್ಟೇಟ್’ ಎಂಬ ವಿಷಯದಲ್ಲಿ ಮಂಗಳೂರು ವಿವಿಗೆ ಮಂಡಿಸಿದ ಪ್ರಬಂಧವನ್ನು ಪಿಎಚ್‌ಡಿಗೆ ಅಂಗೀಕರಿಸಲಾಗಿದೆ.