ಕರಾವಳಿ

‘ಡಿಸಿ ಮೇಡಂ, ಎಸ್ಪಿ ಸರ್.. ನಮ್ಮ ಸಮಸ್ಯೆಗಳನ್ನು ಬಗೆಹರಿಸಿ’: ಕೆರಾಡಿ ಗ್ರಾ.ಪಂ ವ್ಯಾಪ್ತಿಯ ಮಕ್ಕಳ ವಿಶೇಷ ಗ್ರಾಮಸಭೆ ‘ಮಕ್ಕಳ ಹಬ್ಬ’ದಲ್ಲಿ ಚಿಣ್ಣರ ಅಹವಾಲು..!

Pinterest LinkedIn Tumblr

ವರದಿ- ಯೋಗೀಶ್ ಕುಂಭಾಸಿ

ಕುಂದಾಪುರ: ‘ಶಾಲೆಗೆ ತೆರಳಲು ಸರಿಯಾದ ಬಸ್ ವ್ಯವಸ್ಥೆ ಇಲ್ಲ..ದಯವಿಟ್ಟು ವ್ಯವಸ್ಥೆ ಮಾಡಿ’- ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಎದುರು ತಮ್ಮೂರಾದ ಕೆರಾಡಿಯ ಸಮಸ್ಯೆಗಳನ್ನು ವಿವಿಧ ರೀತಿಯಾಗಿ ತೋಡಿಕೊಂಡ ವಿದ್ಯಾರ್ಥಿಗಳು. ಮಕ್ಕಳ ಒಂದೊಂದು ಮಾಹಿತಿ, ಸಮಸ್ಯೆ ಆಲಿಸಿದ ನೆರೆದಿದ್ದ ಅಧಿಕಾರಿಗಳು. ‘ಮೇಡಮ್ ರಸ್ತೆ ಸರಿಯಿಲ್ಲ, ಸರಕಾರಿ ಬಸ್ ಬರೋದಿಲ್ಲ, ಆಟೋಗೆ ಹಣ ಕೊಡಲು ಪೋಷಕರಿಂದ ಆಗಲ್ಲ ಎಂದು ವಿದ್ಯಾರ್ಥಿಗಳು ಡಿಸಿಗೆ ನೀಡಿದ ಮನವಿ. ಕುಡುಕರ ಕಾಟ ಶಾಲೆ ಆವರಣದಲ್ಲಿ ಜಾಸ್ಥಿಯಿದೆ ಸರ್…ಎಂದು ಉಡುಪಿ ಎಸ್ಪಿ ಅವರಿಗೆ ಒಂದಷ್ಟು ಸಮಸ್ಯೆಗಳ ಸರಮಾಲೆಯ ಪಟ್ಟಿ ನೀಡಿದರು.

ಕೆರಾಡಿ ಗ್ರಾಮಪಂಚಾಯತ್, ಉಡುಪಿ ಜಿ.ಪಂ., ಕುಂದಾಪುರ ತಾ.ಪಂ. ಹಾಗೂ ಸಿಡಬ್ಲ್ಯೂಸಿ ಸ್ವಯಂ ಸೇವಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಕೆರಾಡಿ ಗ್ರಾ.ಪಂ. ವಠಾರದಲ್ಲಿ ಆಯೋಜಿಸಿದ ಮಕ್ಕಳ ವಿಶೇಷ ಗ್ರಾಮ ಸಭೆಯಾದ ‘ಮಕ್ಕಳ ಹಬ್ಬ’ದಲ್ಲಿ ಉಡುಪಿ ಜಿಲ್ಲಾಧಿಕಾರಿ ಎಸ್ಪಿ, ಸಿಇಓ ಎದುರು ಮಕ್ಕಳು ಅಹವಾಲು ತೋಡಿಕೊಂಡರು. ಕೆರಾಡಿ ಗ್ರಾ.ಪಂ‌ ವ್ಯಾಪ್ತಿಯ 18 ವರ್ಷದ ಒಳಗಿನ ವಯಸ್ಸಿನ ವಿದ್ಯಾರ್ಥಿಗಳು ಈ ಸಭೆಯಲ್ಲಿ ಭಾಗವಹಿಸಿದ್ದು ಪೋಷಕರು ಸಹಿತ 500ಕ್ಕೂ ಅಧಿಕ ಮಂದಿಯಿದ್ದರು.

ವಿವಿಧ ಮಾದರಿಯಲ್ಲಿ ಸಮಸ್ಯೆ ಹೇಳಿದ ಮಕ್ಕಳು:
ಗ್ರಾ.ಪಂ ವ್ಯಾ.ಪಂ ವ್ಯಾಪ್ತಿಯ ಹತ್ತು ಹಲವು ಸಮಸ್ಯೆಗಳನ್ನು ವಿವಿಧ ರೀತಿಯಲ್ಲಿ ಮಕ್ಕಳು ಅಧಿಕಾರಿಗಳೆದುರು ಹಂಚಿಕೊಂಡರು. ಮೊದಲಿಗೆ ಒಂದಿಷ್ಟು ಶಾಲೆ ವಿದ್ಯಾರ್ಥಿಗಳು ತಾವು ಮೊದಲೇ ತಯಾರಿಸಿದ ನಕಾಶೆಯನ್ನು ತೋರಿಸುವ ಮೂಲಕ
ಊರಿನ ಸಮಸ್ಯೆಗಳನ್ನು ಇಂಚಿಂಚಾಗಿ ತಿಳಿಸಿದರು. ಅಂಚೆ ಪೆಟ್ಟಿಗೆ, ದನಿ ಪೆಟ್ಟಿಗೆ ಮೂಲಕ ಊರಿನ ಹಲವು ಸಮಸ್ಯೆಗಳ ಬಗ್ಗೆ ಗೋಣಿ ಚೀಲದಲ್ಲಿ ಸಂಹ್ರಹಿಸಿ ತಂದ ಹಲವು ವಿಚಾರಗಳು ಅಧಿಕಾರಿಗಳ ಗಮನಕ್ಕೆ ಬಂದಿತು.
ಹೌದರಾಯನ ವಾಲ್ಗುವೆ ಮೂಲಕ ಶಾಲೆ, ರಸ್ತೆ, ಟವರ್ ಸಮಸ್ಯೆ, ಸೇತುವೆ, ಶಾಲಾ ಕಟ್ಟಡ ಸಮಸ್ಯೆಯನ್ನು ತೋಡಿಕೊಳ್ಳಲಾಯಿತು. ದೈವ ದರ್ಶನದ ರೂಪಕದಿಂದ ಪ್ಲಾಸ್ಟಿಕ್ ಕವರ್, ಬಾಟಲ್ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲಾಯಿತು.

ಸಭಾ ಕಾರ್ಯಕ್ರಮ:
ಬಲೂನ್ ಹಾರಿಸುವ ಮೂಲಕ ಡಿಸಿ, ಎಸ್ಪಿ, ಸಿಇಒ ಸಹಿತ ಅಧಿಕಾರಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿ.ಪಂ. ಮುಖ್ಯ ಕಾರ್‍ಯನಿರ್ವಾಹಣಾಧಿಕಾರಿ ಪ್ರಸನ್ನ ಎಚ್., ಕೆರಾಡಿ ಗ್ರಾ.ಪಂ. ಅಧ್ಯಕ್ಷ ಸುದರ್ಶನ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕುಸುಮಾ ಪೂಜಾರಿ, ಸ್ಥಾಯಿ ಸಮಿತಿಯ ಲಕ್ಷ್ಮಿ, ಸದಸ್ಯರು, ಡಿಡಿಪಿಐ ಮಾರುತಿ, ಬೈಂದೂರು ಬಿಇಒ ನಾಗೇಶ್ ನಾಯ್ಕ್, ಶಿಕ್ಷಣ ಫೌಂಡೇಶನ್‌ನ ವೀಣಾ ಹೆಗ್ಡೆ, ವಂಡ್ಸೆ ವೈದ್ಯಾಧಿಕಾರಿ ಡಾ| ರಾಮ್, ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ವಂಡ್ಸೆ, ಮಕ್ಕಳ ಮಿತ್ರ ಭಾಸ್ಕರ ಬೆಳ್ಳಾಲ, ಗ್ರಾ.ಪಂ. ನೋಡಲ್ ಅಧಿಕಾರಿ ಪರಶುರಾಮ, ಮತ್ತಿತರರು ಉಪಸ್ಥಿತರಿದ್ದರು. ಸಿಡಬ್ಲ್ಯೂಸಿಯ ಶ್ರೀನಿವಾಸ ಗಾಣಿಗ ಪ್ರಸ್ತಾವಿಸಿ, ಪಿಡಿಒ ನಾರಾಯಣ ಬನಶಂಕರಿ ವರದಿ ಮಂಡಿಸಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ರಾಘವೇಂದ್ರ ಕೊಠಾರಿ, ನಾರಾಯಣ ಕೊಠಾರಿ ನಿರೂಪಿಸಿದರು.

ರಾಜ್ಯಕ್ಕೆ ಮಾದರಿ:
ಕಿರು ಪ್ರಹಸನ, ಚರ್ಚೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇಡೀ ದಿನದ ಮಕ್ಕಳ ಹಬ್ಬ ಇದಾಗಿದ್ದು, ಮಕ್ಕಳು ಹಾಗೂ ನೆರೆದವರಿಗೆ ಹಗ್ಗಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಿ ಪ್ರೋತ್ಸಾಹವಾಗಿ ಬಹುಮಾನ ನೀಡಲಾಯಿತು.

ಪ್ರಮುಖ ಬೇಡಿಕೆಗಳು ಏನು..?
ಬಿರುಕು ಬಿದ್ದ ಶಾಲೆ ಗೋಡೆಗಳು, ಕಾಂಪೌಂಡ್ ಗೋಡೆ ಇಲ್ಲದಿರುವುದು, ಅಡುಗೆ ಕೋಣೆ ಅಗತ್ಯತೆ, ಕುಡಿಯುವ ನೀರು, ರಸ್ತೆ, ಕಾಲು ಸಂಕ ರಚನೆಯಾಗಬೇಕು, ಶಾಲಾವರಣದೊಳಗೆ ರಾತ್ರಿ ಹೊತ್ತು ಅನೈತಿಕ ಚಟುವಟಿಕೆಗಳು ನಡೆಯುವುದು, ತಮ್ಮೂರಲ್ಲಿನ ತ್ಯಾಜ್ಯ-ಪ್ಲಾಸ್ಟಿಕ್ ಸಮಸ್ಯೆ, ಬೀದಿ ದೀಪ, ಕಾಡು ಪ್ರಾಣಿಗಳ ಸಮಸ್ಯೆಯಿಂದಾದ ಬೆಳೆ ಹಾನಿಗಾದ ಪರಿಹಾರ,ಗ್ರಾ.ಪಂ ವ್ಯಾಪ್ತಿಯಲ್ಲಿ ಸರಿಯಾದ ಬಸ್ ವ್ಯವಸ್ಥೆಯಿಲ್ಲದಿರುವುದು,‌ ಮದ್ಯಪಾನಿಗಳಿಂದ ಶಾಲೆ ವಾತಾವರಣ ಹಾನಿ, ಅಗತ್ಯ ಪರಿಸರದಲ್ಲಿ ಸಿಸಿ ಟಿವಿ ಅಳವಡಿಕೆ,‌ ಒಂದಷ್ಟು ಕಡೆ ಕಾಡುಪ್ರಾಣಿಗಳ ಭಯವಿದೆ ಎಂದು ಅವಲತ್ತುಕೊಂಡರು. ಆಸ್ಪತ್ರೆ, ಅಂಬುಲೆನ್ಸ್ ವಿಚಾರದ ಬಗ್ಗೆ ಮಕ್ಕಳು ಪ್ರಸ್ತಾಪಿಸಿದರು.

ಶಾಲೆಗಳಲ್ಲಿ ಕುಡುಕರಿಂದ ದುರ್ವರ್ತನೆ, ಪರಿಸರ ಹಾಳುಗೆಡುವ ಬಗ್ಗೆ ಸಭೆಯಲ್ಲಿ ಮಕ್ಕಳು ಪ್ರಸ್ತಾಪಿಸಿದ್ದು, ಇಲಾಖೆಯಿಂದ ಅಗತ್ಯ ಕ್ರಮಕೈಗೊಂಡು ಗಸ್ತು ವ್ಯವಸ್ಥೆ ಹೆಚ್ಚಿಸಲಾಗುತ್ತದೆ
– ಡಾ. ಅರುಣ್ ಕೆ. (ಉಡುಪಿ ಎಸ್ಪಿ)

ಮಕ್ಕಳ ಗ್ರಾಮಸಭೆ ವಿನೂತನ ರೀತಿಯಲ್ಲಿ ಕೆರಾಡಿ ಗ್ರಾ.ಪಂ ಹಾಗೂ ನಮ್ಮ ಭೂಮಿ ಸಂಸ್ಥೆಯಿಂದ ನಡೆದಿದೆ. ಮಕ್ಕಳು ಹೇಳಿದ ಸಮಸ್ಯೆ ವಾಸ್ತಾವಿಕವಾಗಿದ್ದು ಹಂತಹಂತವಾಗಿ ಇದನ್ನು ನಿವಾರಿಸುವ ಕೆಲಸ ಮಾಡಲಾಗುತ್ತದೆ. ತುರ್ತು ನಿವಾರಣೆಗೆ ಆದ್ಯತೆ ಮೇರೆಗೆ ಕ್ರಮವಹಿಸಲು ಸಂಬಂದಪಟ್ಟ ಅಧಿಕಾರಿಗಳಿಗೂ ಸೂಚನೆ ನೀಡಲಾಗುತ್ತದೆ. ಸಾರ್ವಜನಿಕರ ಆಸ್ತಿ ಸಂರಕ್ಷಣೆ ಬಗ್ಗೆ ಮಕ್ಕಳು ಹೇಳಿರುವುದು ನಾಗರೀಕರಿಗೆ ಪಾಠವಾಗಬೇಕಿದೆ. ನಮ್ಮೂರಿನ ಶಾಲೆಗಳು ದೇವಾಲಯಕ್ಕೆ ಸಮ. ಅದನ್ನೂ ಪವಿತ್ರವಾಗಿಡುವುದು ಊರವರ ಕರ್ತವ್ಯ.
– ಡಾ. ಕೆ. ವಿದ್ಯಾ ಕುಮಾರಿ (ಉಡುಪಿ ಡಿಸಿ)

2024 ರ ಕೆರಾಡಿ ಗ್ರಾಮಸಭೆಯಲ್ಲಿ ಮಾತನಾಡಿ ರಸ್ತೆ ಸರಿಯಿಲ್ಲ, ಶುದ್ಧ ಕುಡಿಯುವ ನೀರಿನ ಸಮಸ್ಯೆ, ಕಾಲು ಸಂಕ ರಚನೆಯಾಗಬೇಕು. ಕೆರಾಡಿ ಶಾಲೆ ಪರಿಸರದಲ್ಲಿ ಕುಡುಕರ ಹಾವಳಿ ಹೆಚ್ಚಿದೆ. ಪ್ಲಾಸ್ಟಿಕ್ ಸಮಸ್ಯೆ ಬಗ್ಗೆ ಗ್ರಾಮಸ್ಥರಿಗೆ ಅರಿವು ನೀಡುವ ಕೆಲಸವೂ ಆಗಬೇಕು ಎಂದು ತಿಳಿಸಿ ನಮ್ಮ ಹಕ್ಕನ್ನು ಪ್ರತಿಪಾದಿಸಿದೆ.‌ ಶೀಘ್ರ ಸಮಸ್ಯೆ ಪರಿಹಾರವಾಗಬೇಕು.
– ಶ್ರೇಯಸ್ (ವಿದ್ಯಾರ್ಥಿ)

ಸರಕಾರದ ಮಟ್ಟದಲ್ಲಿ ಚರ್ಚೆಯಾಗುವ ಸಲುವಾಗಿ 6022 ಗ್ರಾ.ಪಂ.ನಲ್ಲಿ ಗ್ರಾಮಸಭೆ ಮಕ್ಕಳ ಹಬ್ಬವಾಗಬೇಕೆಂಬ ನಿಟ್ಟಿನಲ್ಲಿ ಗಮನಸೆಳೆಯಲಾಗಿತ್ತು. ಕೆರಾಡಿಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಅಧಿಕಾರಿಗಳ ಮುಂದೆ ಮಕ್ಕಳು ತಮ್ಮ ನಿತ್ಯದ ಜ್ವಲಂತ ಸಮಸ್ಯೆ ಹೇಳಿಕೊಂಡಿದ್ದಾರೆ. ಅಧಿಕಾರಿಗಳು ಪೂರಕವಾಗಿ ಸ್ಪಂದಿಸುವ ನಿರೀಕ್ಷೆಯಿದೆ.
– ಶ್ರೀನಿವಾಸ ಗಾಣಿಗ (ನಮ್ಮಭೂಮಿ ಸಿಡಬ್ಲ್ಯೂಸಿ ಸಂಸ್ಥೆ ಸಂಯೋಜಕ)

Comments are closed.