ಕರಾವಳಿ

ಗುಡಿಸಲಿನಲ್ಲಿದ್ದ ಕುಟುಂಬಕ್ಕೆ ಟ್ರಸ್ಟ್‌ನಿಂದ ಸುಸಜ್ಜಿತ ಸೂರು ‘ಶ್ರೀ ಕೃಷ್ಣ ನಿಲಯ’ ನಿರ್ಮಿಸಿಕೊಟ್ಟ ಉದ್ಯಮಿ(Video)

Pinterest LinkedIn Tumblr

ಕುಂದಾಪುರ: ಆ ಮನೆಯಲ್ಲಿಂದು ಸಂಭ್ರಮದ ವಾತಾವರಣ.‌ ಬೇಬಿ‌‌ ಸುಬ್ಬಯ್ಯ ದೇವಾಡಿಗ ಮನೆಯವರ ಅದೆಷ್ಟೋ ವರ್ಷದ ನೋವಿಗೆ ಮುಕ್ತಿ ಸಿಕ್ಕ ಕ್ಷಣವಿದು. ಬೈಂದೂರು ತಾಲೂಕಿನ ಉಪ್ಪುಂದ ಬಾಯಂಹಿತ್ಲು ಎಂಬಲ್ಲಿನ ಅಸಾಹಕ ಕುಟುಂಬಕ್ಕೆ ಉದ್ಯಮಿಯೊಬ್ಬರು ತನ್ನ ಟ್ರಸ್ಟ್ ಮೂಲಕ ಮನೆ ನಿರ್ಮಿಸಿಕೊಟ್ಟಿದ್ದು ಈ ಕುರಿತ ಕಂಪ್ಲೀಟ್ ಸ್ಟೋರಿಯಿಲ್ಲಿದೆ.

ಬೈಂದೂರಿನ ಉಪ್ಪುಂದದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮಾನವೀಯ ಕೈಂಕರ್ಯದ ಮೂಲಕ ಸಮಾಜಮುಖಿ ಚಿಂತನೆಯಿಂದ ಗಮನ ಸೆಳೆಯುತ್ತಿದೆ.ಸಮಾಜದ ನೋವಿಗೆ ಸ್ಪಂದಿಸುವ ಉದಾತ್ತ ಮನೋಭಾವ ಹೊಂದಿರುವ ಈ ಟ್ರಸ್ಟ್ ಈಗಾಗಲೇ ಸಾಕಷ್ಟಯು ಮಾನವೀಯ ಕಾರ್ಯಗಳನ್ನು ಕಾರ್ಯಗತಗೊಳಿಸಿ ಜನಮನ್ನಣೆ ಪಡೆದಿದೆ. ಇದೀಗ ಇನ್ನೊಂದು ಸೇವಾ ಕಾರ್ಯಕ್ಕೆ ಟ್ರಸ್ಟ್ ಸಾಕ್ಷಿಯಾಗಿದೆ. ಅದುವೇ ಆರ್ಥಿಕವಾಗಿ ಅಸಹಾಯಕವಾಗಿರುವ ಕುಟುಂಬವೊಂದಕ್ಕೆ ಸುಂದರವಾದ ಸೂರನ್ನು ನಿರ್ಮಿಸಿ ಕೊಟ್ಟಿದೆ. ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರ ನೇತೃತ್ವದ ಟ್ರಸ್ಟ್ ಉಪ್ಪುಂದದ ಬಾಯಂಹಿತ್ಲುವಿನಲ್ಲಿ ಬಡ ಕುಟುಂಬವೊಂದಕ್ಕೆ ಸುಂದರವಾದ ಮನೆಯನ್ನು ನಿರ್ಮಾಣ ಮಾಡಿಕೊಡುವ ಮೂಲಕ ಸಮಾಜದಲ್ಲಿ ಟ್ರಸ್ಟ್’ಗಳು ಹೀಗೂ ಸೇವೆ ನೀಡಬಹುದು ಎನ್ನುವುದನ್ನು ಸಾಭೀತು ಪಡಿಸಿದೆ. ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಯಂಹಿತ್ಲು ನಿವಾಸಿ ಬೇಬಿ ಸುಬ್ಬಯ್ಯ ದೇವಾಡಿಗ ಕುಟುಂಬಕ್ಕೆ ಸ್ವಂತ ಸೂರು ಹೊಂದಬೇಕು ಎನ್ನುವ ಕನಸಿತ್ತು. ಆದರೆ ಆರ್ಥಿಕ ಅಡಚಣೆಯಿಂದ ಅವರ ಕನಸು ಕನಸಾಗಿಯೇ ಉಳಿದಿತ್ತು. ತಳಪಾಯ ರಚನೆಗೊಂಡಿದ್ದ ಮನೆಯ ಪೂರ್ಣಗೊಳಿಸುವ ಕಾರ್ಯ ಟ್ರಸ್ಟ್ ಮೂಲಕ ನಡೆದಿದೆ.

ಬೇಬಿ ದೇವಾಡಿಗ ಅವರ ಕುಟುಂಬ ಸುಮಾರು 30 ವರ್ಷಗಳಿಂದ ಚಿಕ್ಕ ಗುಡಿಸಿಲಿನಲ್ಲಿ ವಾಸಿಸುತ್ತಿದ್ದರು. ಇತ್ತಿಚಿನ ವರ್ಷಗಳಲ್ಲಿ ಅದು ತೀರ ದುಸ್ಥಿತಿಗೆ ತಲುಪಿದ್ದರಿಂದ ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಅವರಿಗೆ ಆರ್ಥಿಕ ಅಡಚಣೆ ಎದುರಾಗಿತ್ತು. ಆರಂಭದಲ್ಲಿ ಮನೆಯ ತಳಪಾಯ ನಿರ್ಮಾಣಕ್ಕೆ ಅವರು ಕೂಡಿಸಿಟ್ಟಿದ್ದ ಒಂದಿಷ್ಟು ಹಣದೊಂದಿಗೆ ಬೆಂಗಳೂರು ಉದ್ಯಮಿ ವಂಡ್ಸೆ ರಮೇಶ್ ದೇವಾಡಿಗ ಹಾಗೂ ಒಂದಿಷ್ಟು ದಾನಿಗಳು ನೆರವಾಗಿದ್ದರು. ಮನೆಯ ತಳಪಾಯ ಹಾಗೂ ಅರೆಬರೆ ಗೋಡೆ ನಿರ್ಮಾಣವಾಗಿ ಅರ್ಧಕ್ಕೆ ಕಾಮಗಾರಿ ನಿಂತಿತ್ತು. ಎರಡು ತಿಂಗಳ ಹಿಂದೆ ಸ್ಥಳೀಯ ಜನಪ್ರತಿನಿಧಿಯೋರ್ವರ ಮೂಲಕ ಕುಟುಂಬದ ಸಂಕಷ್ಟ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಗಮನಕ್ಕೆ ಬಂದಿದ್ದು ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅವರ ಅವರ ನಿರ್ದೇಶನದಂತೆ ಅರ್ಧಕ್ಕೆ ನಿಂತಿದ್ದ ಕಾಮಗಾರಿಯನ್ನು ಇದೀಗ ಪೂರ್ಣಗೊಳಿಸಲಾಗಿದೆ. ಮನೆಯ ಗೋಡೆ ಪೂರ್ಣಗೊಳಿಸಿ ಗಾರೆ, ಮನೆಯ ಮೇಲ್ಛಾವಡಿ, ನೆಲಕ್ಕೆ ಟೈಲ್ಸ್ ಹಾಗೂ ವಿಟ್ರಿಫೈಡ್, ಪೇಟಿಂಗ್ ಮಾಡಿಸಲಾಗಿದ್ದು ಸುಸಜ್ಜಿತವಾಗಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ನೂತನ ಗೃಹವನ್ನು ಗೋವಿಂದ ಬಾಬು ಪೂಜಾರಿಯವರ ಹೆತ್ತವರಾದ ಬಾಬು ಪೂಜಾರಿ – ಮಂಜಮ್ಮ ದಂಪತಿಗಳು ಉದ್ಘಾಟಿಸಿದರು. ಈ ಸಂದರ್ಭ ಉಡುಪಿ ಜ್ಯೋತಿಷಿಗಳಾದ ರಘುನಾಥ ಜೋಯಿಸ್, ಮುಖಂಡರುಗಳಾದ ಎಸ್. ರಾಜು ಪೂಜಾರಿ, ದೀಪಕ್ ಕುಮಾರ್ ಶೆಟ್ಟಿ, ಮದನಕುಮಾರ್ ಉಪ್ಪುಂದ, ಗೌರಿ ದೇವಾಡಿಗ, ಮಹೇಂದ್ರ ಪೂಜಾರಿ, ಜಗದೀಶ ದೇವಾಡಿಗ, ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ, ಟ್ರಸ್ಟಿಗಳಾದ ಮಾಲತಿ ಗೋವಿಂದ ಪೂಜಾರಿ, ರಾಮ ಬಿಜೂರು, ಸದಸ್ಯರುಗಳಾದ ಜಯರಾಮ ಶೆಟ್ಟಿ, ನರಸಿಂಹ ನಾಯಕ್, ಉದ್ಯಮಿ ರಾಮ ಪೂಜಾರಿ, ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಮೊದಲಾದವರು ಉಪಸ್ಥಿತರಿದ್ದರು. ಉದ್ಯಮಿ ಗುರುರಾಜ ಪೂಜಾರಿ ಭೋಜನದ ವ್ಯವಸ್ಥೆ ಮಾಡಿದ್ರು. ಊರ ಮಂದಿ, ಮುಖಂಡರುಗಳು ಆಗಮಿಸಿ ಮನೆಯವರಿಗೆ ಶುಭ ಹಾರೈಸಿದ್ರು.

ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡ ಗೋವಿಂದ ಬಾಬು ಪೂಜಾರಿ ಉದ್ಯಮದ ಜೊತೆಗೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಆರಂಭಿಸಿ ಅದರ ಮೂಲಕ ಶಿಕ್ಷಣ, ಧಾರ್ಮಿಕ, ಆರೋಗ್ಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಸಹಕಾರ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ವಿಚಾರವಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.