ಕರಾವಳಿ

ಸಂಪೂರ್ಣವಾಗಿ ಬಾಯಿಯನ್ನು ಸ್ವಚ್ಛವಾಗಿಟ್ಟರೂ, ಹಲ್ಲುಗಳಿಗೆ ಸಮಸ್ಯೆ ತಪ್ಪಿದಲ್ಲ ಯಾಕೆ ಗೋತ್ತೆ..?

Pinterest LinkedIn Tumblr

ಹಲ್ಲುಗಳು ಹೇಗೆ ಹಾಳಾಗುತ್ತವೆ ಎಂದು ಕೇಳಿದರೆ ಸಾಮಾನ್ಯವಾಗಿ ಬರುವ ಉತ್ತರಗಳು ; ಸಿಗರೇಟು ಸೇವನೆಯಿಂದ, ಹಲ್ಲುಗಳನ್ನು ಸ್ವಚ್ಛವಾಗಿಡದ ಕಾರಣ ಎಂಬಿತ್ಯಾದಿ. ಆದರೆ ಇನ್ನೂ ಹಲವು ಕಾರಣಗಳಿಂದ ನಿಮ್ಮ ಹಲ್ಲು ಮತ್ತು ಒಸಡುಗಳಿಗೆ ನಿಮಗೆ ಅರಿವಿಗೆ ಬಾರದೇ ನೀವೇ ಹಾನಿಮಾಡುತ್ತೀರಿ. ಸರಿಯಾಗಿ ಹಲ್ಲುಜ್ಜದೆ ಇರುವುದು, ಬಾಯಿ ಸ್ವಚ್ಛವಾಗಿಡದೇ ಇದ್ದರೆ ನಮ್ಮ ಹಲ್ಲುಗಳಲ್ಲಿ ಹುಳುಕು ಮೂಡಿ, ಒಸಡುಗಳಿಗೆ ಹಾನಿ ಮಾಡಿ, ಬಾಯಿಂದ ದುರ್ವಾಸನೆ ಬರಲು ಕಾರಣವಾಗುತ್ತದೆ. ಆದರೆ ಸಂಪೂರ್ಣವಾಗಿ ನಿಮ್ಮ ಬಾಯಿಯನ್ನು ಸ್ವಚ್ಛವಾಗಿಟ್ಟರೂ ನಿಮ್ಮ ಹಲ್ಲುಗಳಿಗೆ ಸಮಸ್ಯೆಯುಂಟಾಗುತ್ತದೆ. ಹೇಗೆ ಗೊತ್ತೇ?

ಊಟ ಆದ ತಕ್ಷಣ ಹಲ್ಲುಜ್ಜುವುದು:
ಊಟ ಆದ ತಕ್ಷಣ ಹಲ್ಲುಜ್ಜುವುದು ಒಳ್ಳೆಯ ಅಭ್ಯಾಸವಲ್ಲ. ಊಟ ಆದ ಮೇಲೆ 30 ರಿಂದ 40 ನಿಮಿಷದ ನಂತರ ಬ್ರಷ್ ಮಾಡುವುದು ಉತ್ತಮ.ಯಾಕೆಂದರೆ ನೀವು ಸೇವಿಸಿದ ಆಹಾರದಲ್ಲಿರುವ ಆಮ್ಲೀಯ ಅಂಶಗಳನ್ನು ನೈಸರ್ಗಿಕವಾಗಿ ತಟಸ್ಥಗೊಳಿಸಲು ಬಾಯಿಯೊಳಗಿರುವ ಲಾಲಾರಸದ ಕಾರ್ಯಕ್ಕೆ ಸಮಯ ಕೊಡಬೇಕಾಗುತ್ತದೆ. ನೀವು ಉಂಡ ತಕ್ಷಣ ಬ್ರಷ್ ಮಾಡಿದರೆ ನಿಮ್ಮ ಬಾಯಿಯಲ್ಲಿರುವ ಆಮ್ಲೀಯ ಅಂಶ ಬ್ರಷ್ ನ ಮೂಲಕ ನಿಮ್ಮ ಹಲ್ಲುಗಳ ಮೇಲೆ ಹರಡುವುದರಿಂದ ಹಲ್ಲಿನ ಸವೆತಕ್ಕೆ ಕಾರಣವಾಗುತ್ತದೆ. ಇದರಿಂದ ನಿಧಾನವಾಗಿ ನಿಮ್ಮ ಹಲ್ಲುಗಳು ದುರ್ಬಲವಾಗುತ್ತದೆ.

ಬ್ರೇಕ್ ಫಾಸ್ಟ್ ನಂತರ ಹಲ್ಲುಜ್ಜುವುದು:
ಬೆಳಿಗ್ಗೆ ಎದ್ದ ಕೂಡಲೇ ಹಲ್ಲುಜ್ಜುವುದರಿಂದ ರಾತ್ರಿಯಿಡೀ ನಿಮ್ಮ ಬಾಯಿಯಲ್ಲಿ ಶೇಖರಣೆಯಾದ ಬ್ಯಾಕ್ಟೀರೀಯಾಗಳು ನಾಶ ವಾಗುತ್ತವೆ. ಆದರೆ ಬ್ರೇಕ್ ಫಾಸ್ಟ್ ಆದ ಕೂಡಲೇ ನೀವು ನಿಮ್ ಬಾಯಿಯನ್ನು ಮೌತ್ ವಾಶ್ ಮೂಲಕ ಬಾಯಿಯನ್ನು ಸ್ವಚ್ಛ ಮಾಡಿಕೊಳ್ಳಬೇಕು. ತುಂಬಾ ಮೆದುವಾಗಿರುವ ಬ್ರಷ್ ಗಳಿಂದ ಹಲ್ಲುಜ್ಜಿದರೆ ಒಳ್ಳೆಯದು. ಗಟ್ಟಿಯಾದ ಬ್ರಷ್ ಉಪಯೋಗಿಸಿದರೆ ಒಸಡಿಗೆ ಗಾಯವಾಗಬಹುದು ಅಥವಾ ಹಲ್ಲು ಸವೆಯಬಹುದು. ಯಾವಾಗಲೂ ಬೆಳಗಿನ ಉಪಹಾರಕ್ಕೆ ಮೊದಲು ಹಲ್ಲುಜ್ಜುವುದು ಉತ್ತಮ.

ಆಗಾಗ ಕುರುಕುಲು ತಿಂಡಿ ಸೇವನೆ:
ನಿಮಗೆ ಮಧ್ಯೆ ಮಧ್ಯೆ ಕುರುಕುಲು ತಿಂಡಿಗಳನ್ನು ಮೆಲ್ಲುವ ಅಭ್ಯಾಸವಿದ್ದರೆ ನಿಮ್ಮ ಹಲ್ಲುಗಳಿಗೆ ಹಾನಿಯಾಗುತ್ತದೆ ಎಚ್ಚರವಿರಲಿ. ಇದರಿಂದ ಹಲ್ಲು ಮತ್ತು ಆಹಾರದ ನಡುವೆ ಸಂಪರ್ಕ ಹೆಚ್ಚಾಗಿ ಹಲ್ಲಿನ ಹುಳುಕಿಗೆ ಕಾರಣವಾಗುತ್ತದೆ. ಇದರ ಅರ್ಥ ನೀವು ಏನನ್ನೂ ತಿನ್ನಬಾರದೆಂದಲ್ಲ. ಆದರೆ ಕುರುಕುಲು ತಿನ್ನುವ ಬದಲು ಆರೋಗ್ಯಕರವಾದ ತರಕಾರಿ, ಹಣ್ಣುಗಳನ್ನು ತಿನ್ನುವುದರಿಂದ ಹಲ್ಲುಗಳೂ ಸ್ವಚ್ಛವಾಗುತ್ತವೆ. ಇನ್ನು ಉಪ್ಪು ಹಾಕದ ಗೋಡಂಬಿ ಮುಂತಾದ ಬೀಜಗಳನ್ನು ತಿಂದರೆ ಹಲ್ಲಿಗೆ ಬೇಕಾದ ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ ದೊರೆಯುತ್ತದೆ.

ಹಾನಿಕಾರಕ ಪೇಯಗಳ ಸೇವನೆ:
ಗಾಢ ಬಣ್ಣದ ಪಾನೀಯಗಳಾದ ರಮ್ ಮತ್ತು ಇತರ ಡ್ರಿಂಕ್ಸ್ ಗಳು ರುಚಿಯನ್ನೇನೋ ಕೊಡುತ್ತವೆ ಆದರೆ ಅದರಲ್ಲಿ pH ಪ್ರಮಾಣ ಅತೀ ಕಡಿಮೆ ಇರುವುದರಿಂದ ಈ ಪಾನೀಯಗಳಿಂದ ಬಾಯಿಯೊಳಗೆ ಬರುವ ಆಮ್ಲೀಯ ಅಂಶಗಳನ್ನು ತಟಸ್ಥಗೊಳಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಹಲ್ಲು ನಿಧಾನವಾಗಿ ಸವೆಯುತ್ತಾ ಹೋಗುತ್ತದೆ. ಆದರೆ ಹೆಚ್ಚು ಗಾಢವಿರದ ಪಾನೀಯಗಳಲ್ಲಿ pH ಪ್ರಮಾಣ ಹೆಚ್ಚಿದ್ದು ಹಲ್ಲಿಗೆ ಹೆಚ್ಚಿನ ಹಾನಿ ಮಾಡುವುದಿಲ್ಲ. ಕೇವಲ ಆಲ್ಕೋಹಾಲಿಕ್ ಮಾತ್ರವಲ್ಲದೆ ಇತರ ಗಾಢ ಪೇಯಗಳೂ ನಿಮ್ಮ ಹಲ್ಲನ್ನು ಹಾಳು ಮಾಡುತ್ತವೆ. ಅದಕ್ಕೆ ತಾಜಾ ಹಣ್ಣಿನ ರಸ ಸೇವನೆ ಅತ್ಯುತ್ತಮ. ಇನ್ನು ಜ್ಯೂಸ್ ಗಳಲ್ಲಿರುವ ಸಕ್ಕರೆ ಅಂಶ ನೇರವಾಗಿ ಹಲ್ಲಿಗೆ ತಾಕಬಾರದೆಂದು ಸ್ಟ್ರಾ ಉಪಯೋಗಿಸುವುದು ಉತ್ತಮ. ಇನ್ನು ಬಾಯಿಯಲ್ಲಿ ಆಮ್ಲೀಯ ಅಂಶವನ್ನು ತಡೆಯಲು ಪಾನೀಯ ಸೇವಿಸಿದ ನಂತರ ಸಕ್ಕರೆ ರಹಿತ ಚ್ಯೂಯಿಂಗ್ ಗಮ್ ನ್ನು ಮೆಲ್ಲುವುದು ಒಳ್ಳೆಯ ಅಭ್ಯಾಸ.

ಓಪನರ್ ಆಗಿ ನಿಮ್ಮ ಹಲ್ಲುಗಳ ಬಳಕೆ:
ಇದು ತುಂಬಾ ಕೆಟ್ಟ ಅಭ್ಯಾಸ. ಹೆಚ್ಚಿನ ಜನರು ತಮ್ಮ ಹಲ್ಲುಗಳ ಮೂಲಕ ಬಾಟಲ್ ಗಳ ಮುಚ್ಚಳವನ್ನು ತೆಗೆಯಲು ಇಷ್ಟಪಡುತ್ತಾರೆ. ಚಿಪ್ಸ್, ಹಾಲಿನ ಪ್ಯಾಕೆಟ್ ಗಳನ್ನು ಬಾಯಿಯಿಂದ ಕಚ್ಚಿ ಓಪನ್ ಮಾಡುವುದೂ ಕೂಡ ಹಲ್ಲುಗಳಿಗೆ ಹಾನಿಯುಂಟು ಮಾಡುತ್ತದೆ. ನಿಮ್ಮ ಹಲ್ಲುಗಳು ನಿಮ್ಮ ಆಸ್ತಿ. ಅದನ್ನು ಓಪನರ್ ಆಗಿ ಬಳಸಿದರೆ ನೀವು ನಿಮ್ಮ ತುಂಡಾದ ಹಲ್ಲು ಹಾಲಿನಲ್ಲೋ ನೆಲದ ಮೇಲೋ ನೋಡುವ ದಿನ ದೂರವಿಲ್ಲ.

Comments are closed.