ರಾಷ್ಟ್ರೀಯ

ಕೋತಿಯನ್ನು ನೇಣಿಗೇರಿಸಿ ಕೊಂದು ವಿಕೃತಿ ಮೆರೆದ ದುಷ್ಕರ್ಮಿಗಳು..! ಅಮಾನವೀಯ ಘಟನೆಗೆ ಆಕ್ರೋಶ…ವಿಡಿಯೋ ವೈರಲ್

Pinterest LinkedIn Tumblr

 

ಹೈದಾರಬಾದ್: ಕೇರಳದಲ್ಲಿ ಗರ್ಭಿಣಿ ಆನೆಯನ್ನು ಸಿಡಿಮದ್ದು ತುಂಬಿದ್ದ ಪೈನಾಪಲ್​ ಹಣ್ಣನ್ನು ತಿನ್ನಿಸಿ ಅಮಾನವೀಯ ಸಾಯಿಸಿದ್ದ ಘಟನೆ ಇಡೀ ದೇಶದ ಗಮನ ಸೆಳೆದಿದ್ದ ಬೆನ್ನಲ್ಲೇ ಇದೀಗ ತೆಲಂಗಾಣದಲ್ಲಿ ನಡೆದ ಘಟನೆ ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಗವೊಂದನ್ನ ಮನಸೋ ಇಚ್ಛೆ ಥಳಿಸಿ ನಂತರ ಮರವೊಂದಕ್ಕೆ ನೇಣು ಬಿಗಿದು ಅಮಾನವೀಯವಾಗಿ ಕೊಂದು ದುಷ್ಕರ್ಮಿಗಳು ಅಟ್ಟಹಾಸ ಮೆರೆದಿರುವ ಘಟನೆ ತೆಲಂಗಾಣದ ಖಮ್ಮಂ​​ ಜಿಲ್ಲೆಯ ಅಮ್ಮಾಪಲೇಮ್​ ಎಂಬಲ್ಲಿ ನಡೆದಿದೆ.

ಘಟನೆ ಸಂಬಂಧ ಮೂವರು ಆರೋಪಿಗಳನ್ನು ತೆಲಂಗಾಣದ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು 25 ಸಾವಿರ ರೂ. ದಂಡ ವಿಧಿಸಿದ್ದಾರೆ. ಖಮ್ಮಂ​​ ಜಿಲ್ಲೆಯ ಸತುಪಲ್ಲಿ ನಿವಾಸಿಗಳಾದ ವೆಂಕಟೇಶ್ವರರಾವ್​, ಗೌಡೆಲ್ಲಿ ಗಣಪತಿ, ರಾಜಶೇಖರ್ ಪ್ರಕರಣದ ಆರೋಪಿಗಳು.

ನಿತ್ಯ ಮಂಗಗಳ ಗುಂಪೊಂದು ತೋಟಕ್ಕೆ ನುಗ್ಗಿ ಮಾವಿನ ಬೆಳೆ ನಾಶ ಮಾಡುತ್ತಿತ್ತು. ಇದರಲ್ಲಿ ಒಂದು ಕೋತಿ ವೆಂಕಟೇಶ್ವರರಾವ್ ಮನೆ ಬಳಿ ಇದ್ದ ನೀರಿನ ತೊಟ್ಟಿಯಲ್ಲಿ ನೀರು ಕುಡಿಯಲು ಹೋಗಿ ಬಿದ್ದಿದೆ. ಈ ಕೋತಿಯನ್ನು ಹಿಡಿದ ಆತ ಇತರರೊಂದಿಗೆ ಸೇರಿ ತೋಟದ ಬಳಿ ಅದನ್ನು ತೆಗೆದೊಕೊಂಡು ಹೋಗಿ, ಬೇರೆ ಕೋತಿಗಳನ್ನು ಹೆದರಿಸಲು ಈ ಕೃತ್ಯ ಎಸಗಿದ್ದ. ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿದ್ದ ಮಂಗನನ್ನು ತಾನು ಸಾಕಿದ ನಾಯಿಗಳಿಂದ ಕಚ್ಚಿಸಿ ಚಿತ್ರಹಿಂಸೆ ನೀಡಿದ್ದ. ಸದ್ಯ ಆರೋಪಿಯ ವಿರುದ್ಧ ವನ್ಯಜೀವಿ ರಕ್ಷಣಾ ಕಾಯ್ದೆಯ ಸೆಕ್ಷನ್​ (9)ರ ಪ್ರಕಾರ ಕೇಸು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲ್​ ಕೂಡ ಸಿಕ್ಕಿದೆ.

ಕೃತ್ಯದ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ. ಪ್ರಾಣಿಪ್ರಿಯರು ಈ ಕೃತ್ಯವನ್ನು ಖಂಡಿಸಿದ್ದು, ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.