‘ಲಾಕ್ ಡೌನ್’ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನದವರು ಹಣ ಗಳಿಕೆಯ ಉದ್ದೇಶದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವಿದೇಶಗಳಿಂದ ಪ್ರಯಾಣಿಕರನ್ನು ಬೇಕಾಬಿಟ್ಟಿಯಾಗಿ ತುಂಬಿಸಿಕೊಂಡು ಬರುತ್ತಿದ್ದಾರೆ ಎಂದು ಸಾಮಾಜಿಕ ತಾಣಗಳಲ್ಲಿ ಫೋಟೋ-ವೀಡಿಯೊ ವೈರಲ್ ಆಗುತ್ತಿದೆ. ಆದರೆ ಇದರ ಅಸಲಿಯತ್ತು ಕಂಡು ಹಿಡಿದ ‘ಕನ್ನಡಿಗವರ್ಲ್ಡ್’ ಇದೊಂದು ದುರುದ್ದೇಶದಿಂದ ಮಾಡಲಾಗಿರುವ ಸುಳ್ಳು ಸುದ್ದಿ ಎಂಬುದನ್ನು ಬಹಿರಂಗಪಡಿಸಿದೆ.
ಈ ಫೋಟೋ-ವೀಡಿಯೊವಿನ ಜಾಡು ಹಿಡಿದು ಹೊರಟ ‘ಕನ್ನಡಿಗವರ್ಲ್ಡ್’ಗೆ ಇದು ಪಾಕಿಸ್ತಾನ ಮೂಲದ PIA ವಿಮಾನ ಹಾಗು ಪ್ರಯಾಣಿಕರು ಕೂಡ ಪಾಕಿಸ್ತಾನ ಮೂಲದವರು ಎಂಬುದು ಖಾತ್ರಿಯಾಗಿದೆ. ಟೊರೆಂಟೊದಿಂದ ಪಾಕಿಸ್ತಾನಕ್ಕೆ ಹೊರಟ PIA ವಿಮಾನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪ್ರಯಾಣಿಕರನ್ನು ಕುರಿಗಳಂತೆ ತುಂಬಲಾಗಿತ್ತು. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ವಿಮಾನ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ಘಟನೆ ನಡೆದಿರುವುದು ಏಪ್ರಿಲ್ 26 ರಂದು. ವೈರಲ್ ಆದ ಫೋಟೋ, ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ಪಾಕಿಸ್ತಾನ ಎಂದು ಬರೆದಿರುವುದು ಗೋಚರವಾಗುತ್ತದೆ.
ಇದನ್ನೇ ಕಿಡಿಗೇಡಿಗಳು ವೈರಲ್ ಮಾಡಿದ್ದು, ಇದು ಏರ್ ಇಂಡಿಯಾ ವಿಮಾನದಲ್ಲಿ ನಡೆದ ಘಟನೆ, ಪ್ರಯಾಣಿಕರನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವಿದೇಶಗಳಿಂದ ಬೇಕಾಬಿಟ್ಟಿಯಾಗಿ ತುಂಬಿಸಿಕೊಂಡು ಬರುತ್ತಿದ್ದಾರೆ ಎಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡಿದ್ದಾರೆ.
‘ಲಾಕ್ ಡೌನ್’ ಹಿನ್ನೆಲೆಯಲ್ಲಿ ಗಲ್ಫ್ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆದುಕೊಂಡು ಬರಲು ಭಾರತ ಈಗಾಗಲೇ ತನ್ನ ಏರ್ ಇಂಡಿಯಾ ವಿಮಾನವನ್ನು ಆರಂಭಿಸಿದೆ. ಜೊತೆಗೆ ಪ್ರಯಾಣಿಕರಲ್ಲಿ ಸಾಮಾಜಿಕ ಅಂತರವನ್ನು ಕೂಡ ಏರ್ ಇಂಡಿಯಾ ಕಾಯ್ದುಕೊಂಡಿದೆ. ವೈರಲ್ ಆದ ಇಂಥ ಸುಳ್ಳು ಸುದ್ದಿಗಳನ್ನು ಸಾಮಾಜಿಕ ತಾಣಗಳಲ್ಲಿ ಫಾರ್ವರ್ಡ್ ಮಾಡುವ ಮುನ್ನ ಅಸಲೀಯತ್ತನ್ನೊಮ್ಮೆ ಅರಿತುಕೊಳ್ಳುವುದು ಸೂಕ್ತ.
Comments are closed.