ಕರಾವಳಿ

ಕುಂದಾಪುರದ ಅತೃಪ್ತ ಬಿಜೆಪಿಗರಲ್ಲಿ ಬೆಂಬಲ ಕೇಳಿದ ಮೈತ್ರಿ ಅಭ್ಯರ್ಥಿ ಪ್ರಮೋದ್; ಅದಕ್ಕೆ ಇವರೇನಂದ್ರು? (Video)

Pinterest LinkedIn Tumblr

ಕುಂದಾಪುರ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಗುರುವಾರ ಕುಂದಾಪುರಕ್ಕೆ ಆಗಮಿಸಿದ್ದ ವೇಳೆ ಒಂದಷ್ಟು ಅತೃಪ್ತ ಬಿಜೆಪಿಗರನ್ನು ಬೇಟಿಯಾಗಿ ಮತಯಾಚಿಸುವ ಮೂಲಕ ರಾಜಕೀಯ ಕುತೂಹಲಕ್ಕೆ ಎಡೆಮಾಡಿಕೊಟ್ರು.

ಹೌದು…ನಗರದ ಕಲಾಕ್ಷೇತ್ರ ಕಚೇರಿಗೆ ಕುಂದಾಪುರ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಜೆಡಿಎಸ್ ಕುಂದಾಪುರ ಕ್ಷೇತ್ರಾದ್ಯಕ್ಷ ಪ್ರಕಾಶ್ ಶೆಟ್ಟಿ ತೆಕ್ಕಟ್ಟೆ ಸಹಿತ ಎರಡೂ ಪಕ್ಷಗಳ ಮುಖಂಡರ ಜೊತೆ ಆಗಮಿಸಿ ಬಿಜೆಪಿ ಮುಖಂಡರಾದ ಕಿಶೋರ್ ಕುಮಾರ್ ಕುಂದಾಪುರ, ಮೆರ್ಡಿ ಸತೀಶ್ ಹೆಗ್ಡೆ, ಜಾನಕಿ ಬಿಲ್ಲವ ಸೇರಿಂದತೆ ಹಲವು ಮಂದಿ ಬಳಿ ಮತಯಾಚನೆ ನಡೆಸಿದ್ರು. ಈ ವೇಳೆ ಬಿಜೆಪಿ ಪಕ್ಷದಿಂದ ಉಚ್ಚಾಟನೆಗೊಳಪಟ್ಟ ಮಾಜಿ ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ ಕೂಡ ಇದ್ರು.

 

ಸಮರ್ಥರು ಸಂಸದರಾಗಲು ಸಹಕಾರ- ಕಿಶೋರ್
ಮತಯಾಚನೆಗೆ ಬಂದ ಅಭ್ಯರ್ಥಿಯನ್ನು ಆತ್ಮೀಯವಾಗಿ ಬರಮಾಡಿಕೊಂಡ ಕಿಶೋರ್ ಕುಮಾರ್ ಶುಭ ಹಾರೈಸಿದರು. ಬಳಿಕ ಮಾತನಾಡಿದ ಅವರು, ದೇಶದಲ್ಲಿ ಮೋದಿ ಪ್ರಧಾನಿಯಾಗಬೇಕು. ಆದರೆ ಕ್ಷೇತ್ರದ ಹಿತದೃಷ್ಟಿಯಿಂದ ಸಮರ್ಥರು ಸಂಸದರಾಗಬೇಕಾದ ಅಗತ್ಯವಿದ್ದು ಪ್ರಮೋದ್ ಗೆಲುವಿಗೆ ಬೆಂಬಲವಿದೆ ಎಂದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆಯೊಂದಿಗಿದ್ದು ಕೆಲಸ ಮಾಡಿದ್ದು ಈ ಬಾರಿ ನನ್ನನ್ನು ಅವರು ಈವರೆಗೂ ಸಂಪರ್ಕಿಸಿಲ್ಲ. ಆ ನೋವು ಕೂಡ ಇದೆ. ಪಕ್ಷದ ಯಾವುದೇ ಚಟುವಟಿಕೆಗಳಿಗೆ ಕರೆಯದಿರುವ ಹಿನ್ನೆಲೆ ಪಕ್ಷದಲ್ಲಿ ಇದ್ದೂ ಇಲ್ಲದಂತಾಗಿದೆ. ಆದ್ದರಿಂದ ಮೈತ್ರಿ ಅಭ್ಯರ್ಥಿ ನನ್ನ ಬಳಿ ಸಹಕಾರ ಕೇಳಿದ್ದರಿಂದ ವೈಯಕ್ತಿಕವಾಗಿ ಬೆಂಬಲ ನೀಡುವ ಆಲೋಚನೆ ಮಾಡಿದ್ದೇನೆಂದರು.

ಹಿರಿಯರಿಗೆ ಮಾನ್ಯತೆಯಿಲ್ಲ- ರಾಜೇಶ್ ಕಾವೇರಿ
ಪಕ್ಷದಿಂದ ಉಚ್ಚಾಟಿತರಾಗಿರುವ ರಾಜೇಶ್ ಕಾವೇರಿ ಮಾತನಾಡಿ, ಕುಂದಾಪುರ ಬಿಜೆಪಿ ಓರ್ವ ವ್ಯಕ್ತಿ ಮೇಲೆ ನಿಂತಿರುವ ಪರಿಸ್ಥಿತಿ ಬಂದಿದ್ದು ಪಕ್ಷ ಕಟ್ಟಿದವರಿಗೆ, ಹಿರಿಯರಿಗೆ ಮಾನ್ಯತೆ ಇಲ್ಲದಂತಾಗಿದ್ದು ಇದರಿಂದ ಎಲ್ಲರಿಗೂ ನೋವಿದೆ ಎಂದರು.

ರಾಹುಲ್ ಪ್ರಧಾನಿಯಾಬೇಕು- ಪ್ರಮೋದ್
ಕೆಲ ಹೊತ್ತು ಇವರೆಲ್ಲರ ಬಳಿ‌ಮಾತುಕತೆ ನಡೆಸಿದ ಪ್ರಮೋದ್ ಹೊರಡುವಾಗ ರಾಹುಲ್ ಗಾಂಧಿ ಪ್ರಧಾನಿಯಾಗೋದು ನನ್ನ ಆಸೆ ಎಂಬುದಾಗಿ ಹೇಳಿದ್ರು. ಓರ್ವ ಅಭ್ಯರ್ಥಿಯಾಗಿರುವ ಹಿನ್ನೆಲೆ ಎಲ್ಲರಂತೆ ಇವರ ಬಳಿಯೂ ಮತಯಾಚನೆ ಮಾಡಿ ಸಹಕಾರ ಕೇಳಿದ್ದೇನೆ. ಪಕ್ಷಕ್ಕೆ ಕರೆಯುವ ಯಾವುದೇ ಮಾತುಕತೆ ನಡೆದಿಲ್ಲ ಎಂದರು. ಈ ಸಂದರ್ಭ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರಾದ ಬಿ. ಹೆರಿಯಣ್ಣ, ದೇವಕಿ ಸಣ್ಣಯ್ಯ, ಅಶೋಕ್ ಪೂಜಾರಿ ಬೀಜಾಡಿ, ಗಣೇಶ್, ಅರುಣ್ ಕಲ್ಗದ್ದೆ, ಹುಸೇನ್ ಹೈಕಾಡಿ ಮೊದಲಾದವರಿದ್ದರು.

ಒಟ್ಟಿನಲ್ಲಿ ಪ್ರಮೋದ್ ಮಧ್ವರಾಜ್ ಕುಂದಾಪುರ ಆಗಮನದ ವೇಳೆ ಅಸಮಾಧಾನಿತ ಬಿಜೆಪಿಗರ ಭೇಟಿ ರಾಜಕೀಯ ವಲಯದಲ್ಲಿ ಒಂದಷ್ಟು ಚರ್ಚೆಗೆ ಕಾರಣವಾಗಿದ್ದು ಇದು ಯಾವ ತಿರುವು ಪಡೆಯುತ್ತೋ ಕಾದು ನೋಡಬೇಕಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.