ಮನೋರಂಜನೆ

ಬಹುನಿರೀಕ್ಷಿತ ‘ಯಾನ’ ಸಿನೆಮಾದ ಲಿರಿಕಲ್‌ ವಿಡಿಯೋ ರಿಲೀಸ್‌ ! ಈ ವಿಭಿನ್ನ ಶೈಲಿಯ ಹಾಡನ್ನೊಮ್ಮೆ ಕೇಳಲೇಬೇಕು…

Pinterest LinkedIn Tumblr

ಬೆಂಗಳೂರು: ಹಿರಿಯ ನಟಿ ವಿಜಯಲಕ್ಷ್ಮೀ ಸಿಂಗ್‌ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ “ಯಾನ’ ಕನ್ನಡ ಚಿತ್ರ ಬಿಡುಗಡೆಗೂ ಮುನ್ನ ಭಾರಿ ಸದ್ದು ಮಾಡುತ್ತಿದೆ.

ಕನ್ನಡ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿರುವ ಈ ಚಿತ್ರದಲ್ಲಿ ಜಯಲಕ್ಷ್ಮೀ ಸಿಂಗ್‌ ಅವರ ಮೂವರು ಮಕ್ಕಳಾದ ವೈಭವಿ, ವೈನಿಧಿ ಹಾಗೂ ವೈಸಿರಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಹೊಸ ವರ್ಷದಲ್ಲಿ ಚಿತ್ರ ಬಿಡುಗಡೆಯ ತಯಾರಿಯಲ್ಲಿದೆ. ಮೊದಲ ಹಂತವಾಗಿ ಚಿತ್ರದ ಒಂದು ಲಿರಿಕಲ್‌ ವಿಡಿಯೋ ಹೊಸವರ್ಷದಂದೇ ಬಿಡುಗಡೆ ಮಾಡಿದೆ. ಈ ಲಿರಿಕಲ್‌ ವಿಡಿಯೋ ಬಿಡುಗಡೆಯಾಗುತ್ತಿದ್ದಂತೆ ಜನ ನೋಡಿ ಆನಂದಿಸಿದ್ದಾರೆ.

ACME ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ಗಾಯಕರು ಹಾಗು ನಿರ್ಮಾಪಕರಾಗಿರುವ ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ಹಾಗು ವೈಭವಿ, ವೈನಿಧಿ, ವೈಸಿರಿ ಸೇರಿ ಈ ಸಿನೆಮಾವನ್ನು ನಿರ್ಮಿಸಿದ್ದಾರೆ.

“ಯಾನ’ದಲ್ಲಿ ಟ್ರಾವೆಲ್‌ ಕೂಡಾ ಪ್ರಮುಖ ಅಂಶವಾಗಿದ್ದು, ಅದಕ್ಕೆ ಪೂರಕವಾಗಿ ಕವಿರಾಜ್‌ ಬರೆದಿರುವ, ಖ್ಯಾತ ಗಾಯಕ ರಘು ದೀಕ್ಷಿತ್ ಹಾಡಿರುವ “ಗರಿಬಿಚ್ಚಿ ಮರಿಹಕ್ಕಿ ಅದೆಲ್ಲೋ ಹಾರಿ ಹೊಂಟಿವೇ …’ ಎಂಬ ಹಾಡು ಮಂಗಳವಾರ ಬಿಡುಗಡೆಯಾಗಿದೆ.

ಫ್ಯೂಶನ್‌ ಶೈಲಿಯಲ್ಲಿರುವ ಈ ಹಾಡು ಲಹರಿ ಸಂಸ್ಥೆಯ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಈ ಹಾಡು ಸಾಮಾಜಿಕ ತಾಣಗಳಲ್ಲೂ ವೈರಲ್ ಆಗಿದೆ. ಹಾಡಿಗೆ ಸಿನಿಮಾಪ್ರಿಯರು ತಲೆಬಾಗಿದ್ದು, ಬಿಡುಗಡೆಗೂ ಮುನ್ನ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಚಿತ್ರಕ್ಕೆ ಜೋಶ್ವಾ ಶ್ರೀಧರ್‌ ಸಂಗೀತ ನೀಡಿದ್ದಾರೆ. ಚಿತ್ರದ ಹಾಡುಗಳನ್ನು ಜಯಂತ್‌ ಕಾಯ್ಕಿಣಿ, ಯೋಗರಾಜ್‌ ಭಟ್‌, ಹೃದಯ ಶಿವ, ಶಶಾಂಕ್‌ ಹಾಗೂ ಚೇತನ್‌ ಕುಮಾರ್‌ ಬರೆದಿದ್ದಾರೆ.

ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಆರು ಹಾಡುಗಳನ್ನು ಲಿರಿಕಲ್‌ ವಿಡಿಯೋ ಮೂಲಕ ಬಿಡುಗಡೆ ಮಾಡುವ ಯೋಚನೆ ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್‌ ಅವರಿಗಿದೆ. ಆರು ಹಾಡುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ಕೇಳುಗರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸ ಅವರದು. ಇನ್ನು, ಚಿತ್ರವನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡುವ ಯೋಚನೆ ಕೂಡಾ ಅವರಿಗಿದೆ. “ಯಾನ’ ಚಿತ್ರವನ್ನು ಕರ್ನಾಟಕದ ಹಲವು ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.

ಚಿತ್ರದುರ್ಗ, ದಾವಣಗೆರೆ, ಮೂಡಿಗೆರೆ ಸೇರಿದಂತೆ ಅನೇಕ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ವೈಭವಿ, ವೈನಿಧಿ ಹಾಗೂ ವೈಸಿರಿ ನಾಯಕಿಯರಾಗಿ ನಟಿಸಿದ್ದು, ಇವರಿಗೆ ಸುಮುಖ, ಚಕ್ರವರ್ತಿ ಹಾಗೂ ಅಭಿಷೇಕ್‌ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಅನಂತ್‌ನಾಗ್‌, ಸುಹಾಸಿನಿ, ಸಾಧುಕೋಕಿಲ, ವೀಣಾಸುಂದರ್‌, ಗಡ್ಡಪ್ಪ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಕರಮ್‌ಚಾವ್ಲಾ ಛಾಯಾಗ್ರಹಣವಿದೆ.

Comments are closed.