ಕರಾವಳಿ

ಸಿನೆಮಾ ರಂಗದಲ್ಲಿ ಕೆಟ್ಟ ಅನುಭವವಾಗಿಲ್ಲ; ಆಗಿದ್ರೆ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’: ಉಮಾಶ್ರೀ (Video)

Pinterest LinkedIn Tumblr

ಕುಂದಾಪುರ: ನನ್ನ ಈ ಸುದೀರ್ಘ ಚಿತ್ರರಂಗ ಜೀವನದಲ್ಲಿ ಇದುವರೆಗೂ ಕೆಟ್ಟ ಅನುಭವವಾಗಿಲ್ಲ. ಯಾವುದೇ ಪುರುಷನಿಂದಲೂ ಸಮಸ್ಯೆ ಅನುಭವಿಸಿಲ್ಲ. ಒಂದೊಮ್ಮೆ ಅಂತಹ ಘಟನೆ ಸಂಭವಿಸಿದ್ದಿದ್ದರೆ ಅಲ್ಲಿಯೇ ತಕ್ಕ ಉತ್ತರ ನೀಡುತ್ತಿದ್ದೆ. ‘ಅಲ್ಲೇ ಡ್ರಾ ಅಲ್ಲೆ ಬಹುಮಾನ’ ಎಂಬ ಫಾಲಿಸಿ ನನ್ನದು ಎಂದು ಹಿರಿಯ ಚಲನ ಚಿತ್ರ ನಟಿ, ಮಾಜಿ ಸಚಿವೆ ಉಮಾಶ್ರೀ ಹೇಳಿದರು.

ತಾಲೂಕಿನ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ತನ್ನ ಕುಟುಂಬ ಸಮೇತ ಆಗಮಿಸಿದ ಉಮಾಶ್ರೀ ಶ್ರೀ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಮಹಿಳೆಯರಿಗೆ ಅವರು ದುಡಿಯುವ ಕ್ಷೇತ್ರ, ಮನೆ ಸೇರಿದಂತೆ ಎಲ್ಲಾದರೂ ಸಮಸ್ಯೆಗಳಾಗಿದ್ದರೆ ಅಥವಾ ಮಾನಸಿಕ, ದೈಹಿಕ ಕಿರುಕುಳಗಳು ಘಟಿಸಿದ್ದರೆ ಅಂತಹ ಅನುಭವಗಳನ್ನು ವ್ಯಕ್ತಪಡಿಸಲು ಈ ಮೀಟೂ ಅಭಿಯಾನ ಆರಂಭವಾಗಿದೆ. ಈ ಮೊದಲು ತಮ್ಮ ಸಮಸ್ಯೆ ಹೇಳಿಕೊಳ್ಳಲು ಯಾವುದೇ ಸೂಕ್ತ ವೇದಿಕೆ ಇರಲಿಲ್ಲ. ಮೀಟೂ ಅಭಿಯಾನದ ಮೂಲಕ ಇದು ಸಾಧ್ಯವಾಗಿದೆ. ಆದರೆ ಯಾರ ಹೆಸರನ್ನು ಉಪಯೋಗಿಸದೇ ಅವರನ್ನು ಅವಮಾನಿಸುವ ಮತ್ತು ತೇಜೋವಧೆ ಮಾಡುವ ಉದ್ದೇಶ ಈ ಅಭಿಯಾನದ್ದಾಗಿಲ್ಲ ಎನ್ನುವುದು ಅದರ ಸಂಸ್ಥಾಪಕರು ಹೇಳುವ ವಿಚಾರವಾಗಿದೆ. ಈ ಅಭಿಯಾನ ದಾರಿ ತಪ್ಪದೆ ದುರುಪಯೋಗವಾಗದ ರೀತಿಯಲ್ಲಿ ಉಪಯೋಗವಾಗಬೇಕು. ತಾರ್ಕಿಕ ಅಂತ್ಯ ಸಿಗುವ ಅಂಶಗಳಿದ್ದಲ್ಲಿ ಹೋರಾಡಬೇಕು ಎಂದರು. ಇದು ಕೇವಲ ಚಿತ್ರರಂಗಕ್ಕೆ ಮಾತ್ರ ಸಂಬಂಧಿಸಿದ ವಿಚಾರವಾಗಿಲ್ಲದ ಕಾರಣ ಇದರಿಂದ ಚಿತ್ರರಂಗಕ್ಕೆ ಕೆಟ್ಟ ಹೆಸರು ಬರುವುದಿಲ್ಲ ಎಂದ ಅವರು ಅರ್ಜುನ್ ಸರ್ಜಾ ಪ್ರಕರಣ ಸದ್ಯ ನ್ಯಾಯಾಲಯದ ಮೆಟ್ಟಿಲೇರಿರುವ ಕಾರಣ ಆ ಬಗ್ಗೆ ತಾನು ಪ್ರತಿಕ್ರಿಸಲ್ಲ ಎಂದರು.

ಪ್ರಧಾನಿ ಟೀಕಿಸಿ ರಮ್ಯಾ ಟ್ವಿಟ್ ಮಾಡಿದ ವಿಚಾರದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಪಕ್ಷದಲ್ಲಿದ್ದರೂ ಯಾರನ್ನೂ ವ್ಯಕ್ತಿಗತವಾಗಿ ನಿಂದಿಸಬಾರದು.ಅವರ ಸ್ಥಾನಕ್ಕೆ ನಾವು ಗೌರವ ಕೊಡಬೇಕಿದೆ. ರಮ್ಯಾ ಯಾವ ಉದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ, ಅದಕ್ಕೆ ಅವರೇ ಉತ್ತರ ನೀಡಬೇಕಿದೆ. ಇನ್ನು ಉಪಚುನಾವಣೆ ಐದೂ ಕ್ಷೇತ್ರಗಳಲ್ಲೂ ಮೈತ್ರಿಕೂಟಕ್ಕೆ ಜಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಕೆ. ಸೂರ್ಯನಾರಾಯಣ ಉಪಾಧ್ಯಾಯ ಉಮಾಶ್ರೀಯವರನ್ನು ಬರಮಾಡಿಕೊಂಡು ಪೂಜಾಕೈಂಕರ್ಯ ನೆರವೇರಿಸಿದರು. ಕೋಟ ಪಂಚವರ್ಣ ಯುವಕ ಮಂಡಲ (ರಿ.) ಇದರ ಸಲಹೆಗಾರ ದಿನೇಶ ಗಾಣಿಗ, ಕ್ರೀಡಾ ಕಾರ್ಯದರ್ಶಿ ಸುರೇಶ ಗಿಳಿಯಾರ್‌ ಮೊದಲಾದವರು ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.