ಉಡುಪಿ: ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಆತ್ರಾಡಿ ಮದಗ ಎಂಬಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ತಾಯಿ ಮತ್ತು ಮಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಹರೀಶ್ ಆರ್. ಯಾನೆ ಗಣೇಶ(33) ಶಿಕ್ಷೆಗೆ ಒಳಗಾದ ಆರೋಪಿ.

ತಮಿಳುನಾಡು ಮೂಲದ ಚೆಲುವಿ (30) ಎಂಬವರಿಗೆ 15 ವರ್ಷದ ಹಿಂದೆ ಮಂಚಿಯ ವ್ಯಕ್ತಿಯೊಬ್ಬರೊಂದಿಗೆ ಮದುವೆ ಆಗಿದ್ದು, ಮದುವೆಯ ಸಮಯ ದಲ್ಲಿ ಚೆಲುವಿ ಮಣಿಪಾಲದ ಎಣ್ಣೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಆಗ ಅಲ್ಲಿ ಕೆಲಸ ಮಾಡುವ ರಶೀದ್ ಎಂಬಾತನ ಪರಿಚಯವಾಗಿತ್ತು. ನಂತರ ಮೊದಲ ಪತಿ ಮತ್ತು ಚೆಲುವಿ ಇಬ್ಬರ ಮದ್ಯೆ ಮನಸ್ತಾಪ ಉಂಟಾಗಿ ಚೆಲುವಿ ಗಂಡನನ್ನು ಬಿಟ್ಟು ರಶೀದ್‌ನೊಂದಿಗೆ ಮುಂಬೈಗೆ ಹೋಗಿ ಅಲ್ಲಿ ಸುಮಾರು 2 ವರ್ಷ ಇದ್ದರು.
ನಂತರ ಕಾರ್ಕಳಕ್ಕೆ ಬಂದು ಅಲ್ಲಿ ಬಾಡಿಗೆ ಮನೆಯಲ್ಲಿ ರಶೀದ್ ನೊಂದಿಗೆ ಇದ್ದು, ಆ ಸಮಯ ಆಕೆಗೆ ಇಬ್ಬರು ಮಕ್ಕಳಾಗಿದ್ದರು. ನಂತರ ಚೆಲುವಿ ಹಾಗೂ ರಶೀದ್ ಮಧ್ಯೆ ಗಲಾಟೆಯಾಗಿ ಚೆಲುವಿ ತನ್ನ ಮಕ್ಕಳೊಂದಿಗೆ ತಾಯಿ ಮನೆಯಾದ ಆತ್ರಾಡಿ ಮದಗಕ್ಕೆ ವಾಪಾಸ್ಸು ಬಂದು ಅಲ್ಲೇ ಸಮೀಪ ಶೆಡ್ ಮಾಡಿ ತನ್ನ ಮಕ್ಕಳೊಂದಿಗೆ ವಾಸವಾಗಿದ್ದಳು.
ಹರೀಶ್, ಚೆಲುವಿಯ ದೂರದ ಸಂಬಂಧಿಯಾಗಿದ್ದು, ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಚೆಲುವಿ ತನ್ನ ಇಬ್ಬರು ಗಂಡಂದಿರಿಂದ ದೂರವಾಗಿರುವುದನ್ನು ಉಪಯೋಗಿಸಿಕೊಂಡು ಆತ, ಆಕೆಯ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದನು. ಚೆಲುವಿಯನ್ನು ಮದುವೆ ಆಗುವಂತೆ ಒತ್ತಾಯಿಸುತ್ತಿದ್ದನು.
ಚೆಲುವಿಯು ಬೇರೆ ಗಂಡಸರೊಂದಿಗೆ ಫೋನಿನಲ್ಲಿ ಮಾತನಾಡುತ್ತಿರುವ ಬಗ್ಗೆ ಸಂಶಯದಿಂದ ದ್ವೇಷಗೊಂಡ ಹರೀಶ್, 2022ರ ಮೇ 8ರಂದು ರಾತ್ರಿ ಮನೆಯಲ್ಲಿ ಚೆಲುವಿ ಮತ್ತು ಆಕೆಯ ಮಗಳು ಮಾತ್ರ ಇದ್ದಾಗ ಬಂದು, ಗಲಾಟೆ ಮಾಡಿದ್ದನು. ನಂತರ ಮಲಗಿದ ಚೆಲುವಿಯನ್ನು ಶಾಲಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ ಹರೀಶ್, ಬಳಿಕ ನಿದ್ರೆಯಲ್ಲಿದ್ದ ಮಗಳು ತನ್ನ ವಿರುದ್ಧ ಸಾಕ್ಷಿ ಹೇಳಬಹುದೆಂದು ಅವಳನ್ನು ಕೂಡ ಶಾಲಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದನು.
ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಆಗಿನ ಬ್ರಹ್ಮಾವರದ ಪೊಲೀಸ್ ವೃತ್ತ ನಿರೀಕ್ಷಕ ಅನಂತಪದ್ಮನಾಭ ಆರೋಪಿಯನ್ನು ಬಂಧಿಸಿ, ಆತನ ವಿರುದ್ಧ ನ್ಯಾಯಲಯಕ್ಕೆ ಆರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 20ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ.
Comments are closed.