ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 44ನೇ ಘಟಿಕೋತ್ಸವ ಕಾರ್ಯಕ್ರಮವು ಮಾ.28ರಂದು ಮಂಗಳ ಗಂಗೋತ್ರಿಯ ಸಭಾಂಗಣದಲ್ಲಿ ನಡೆಯಲಿದೆ.

ಈ ಸಮಯದಲ್ಲಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪದ್ಮಶ್ರೀ ಹರೇಕಳ ಹಾಜಬ್ಬ, ಇತ್ತೀಚೆಗೆ ನಿಧನರಾದ ಯಕ್ಷಗಾನದ ಮೇರು ಸಾಧಕ ಸೂರಿಕುಮೇರು ಗೋವಿಂದ ಭಟ್ (ಮರಣೋತ್ತರ) ಮತ್ತು ದೈವ ನರ್ತಕ ರವೀಶ್ ಪಡುಮಲೆ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಹೇಳಿದರು.
ಹರೇಕಳ ಹಾಜಬ್ಬ: ಹರೇಕಳದ ಪಂಜಿಮಾಡಿ ಎಂಬಲ್ಲಿ ಕುಟ್ಟಿಮಾಕ ಮತ್ತು ಬೀಪಾತುಮ್ಮ ದಂಪತಿಯ ಆರು ಮಂದಿ ಮಕ್ಕಳಲ್ಲಿ ಮೂರನೆಯ ಪುತ್ರನಾಗಿ 1955ರಲ್ಲಿ ಜನಿಸಿದ ಹಾಜಬ್ಬ ಕೇಂದ್ರ ಸರಕಾರ ನಾಲ್ಕನೇ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗುವ ಮೂಲಕ ದೇಶ-ವಿದೇಶಗಳಲ್ಲಿ ಮನೆ ಮಾತಾಗಿದ್ದರು. ಯಾವುದೇ ಪ್ರಚಾರದ ಹಂಗಿಲ್ಲದೆ ಗುರಿ ಮುಟ್ಟುವ ಛಲದೊಂದಿಗೆ ಮುನ್ನುಗ್ಗಿದುದರ ಪರಿಣಾಮ ಹಾಜಬ್ಬ ಇಂದು ಮತ್ತಷ್ಟು ಎತ್ತರಕ್ಕೇರಿದ್ದಾರೆ. ಹರೇಕಳ ಗ್ರಾಮವನ್ನೂ ಎತ್ತರಕ್ಕೇರಿಸಿದ್ದಾರೆ. ಕಿತ್ತಳೆ ಮಾರಾಟ ಮಾಡಿ ಶಾಲೆ ಕಟ್ಟಿದ ಸಾಧಕ ಹರೇಕಳ ಹಾಜಬ್ಬರ ಶಿಕ್ಷಣ ಪ್ರೇಮ ಅಪಾರವಾದದ್ದು. ಮಂಗಳೂರಿನ ಹರೇಕಳ-ನ್ಯೂಪಡ್ಡು ಗ್ರಾಮದಲ್ಲಿ ಶಾಲೆಯನ್ನು ನಿರ್ಮಿಸುವ ಮೂಲಕ ಗ್ರಾಮೀಣ ಶಿಕ್ಷಣದಲ್ಲಿ ಕ್ರಾಂತಿ ಮಾಡಿದ ಹಾಜಬ್ಬ ಅವರಿಗೆ 2020ರಲ್ಲಿ ಪದ್ಮಶ್ರೀ ಪ್ರಶಸ್ತಿಯೂ ಒಲಿದು ಬಂದಿತ್ತು.
ಸೂರಿಕುಮೇರು ಗೋವಿಂದ ಭಟ್: ಸೂರಿಕುಮೇರು ಗೋವಿಂದ ಭಟ್ (1938-2026) ತೆಂಕುತಿಟ್ಟು ಯಕ್ಷಗಾನ ರಂಗದ ದಿಗ್ಗಜರಾಗಿದ್ದು, ದಶಾವತಾರಿ ಎಂದೇ ಬಿರುದು ಪಡೆದವರು. ದಕ್ಷಿಣ ಕನ್ನಡ ಜಿಲ್ಲೆಯವರಾದ ಇವರು 7 ದಶಕಗಳ ಕಾಲ, ವಿಶೇಷವಾಗಿ ಧರ್ಮಸ್ಥಳ ಮೇಳದಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ರಕ್ತಬೀಜ, ಕೌರವ, ಭೀಷ್ಮ ಪಾತ್ರಗಳಿಗೆ ಪ್ರಸಿದ್ಧರಾಗಿದ್ದ ಇವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ (2016) ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ದೊರೆತಿವೆ.
ಡಾ. ರವೀಶ್ ಪಡುಮಲೆ: ಡಾ. ರವೀಶ್ ಪಡುಮಲೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೈವ ನರ್ತಕರಾಗಿದ್ದು, ಚಿಂತಕರು, ವಾಲ್ಮೀ ಮತ್ತು ಶಿಕ್ಷಣ ತಜ್ಞರು. ಉಜಿರೆಯ ಎಸ್ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ದೈವ ನರ್ತನದ ಸಂಪ್ರದಾಯವನ್ನು ಪಾಲಿಸುತ್ತಾ, ಹಿಂದೂ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
Comments are closed.