ಜನವಸತಿ ಪ್ರದೇಶ, ದೇವಸ್ಥಾನ, ಶಾಲೆ, ಮಲ್ಯಾಡಿ ಪಕ್ಷಿಧಾಮದ ಸಮೀಪವಿದೆ ನಿಯೋಜಿತ ಸ್ಥಳ!
ಕುಂದಾಪುರ: ಉಳ್ತೂರಿನ ಜನವಸತಿ ಪ್ರದೇಶ, ಮಲ್ಯಾಡಿ ಪಕ್ಷಿಧಾಮದ ಕೂಗಳತೆ ದೂರದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ನಿರ್ಮಿಸಲು ಉದ್ದೇಶಿಸಿರುವ ‘ಮಲ ತ್ಯಾಜ್ಯ ಸಂಸ್ಕರಣಾ ಘಟಕ’ (ಎಫ್.ಎಸ್.ಟಿ.ಪಿ.)ಕ್ಕೆ ಸ್ಥಳೀಯ ಗ್ರಾಮಸ್ಥರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಸೋಮವಾರ ಬೆಳಿಗ್ಗೆ ಉಳ್ತೂರು, ಕೆದೂರು, ಬೇಳೂರು ಗ್ರಾಮಗಳ ನೂರಾರು ಮಂದಿ ನಿಯೋಜಿತ ಸ್ಥಳದಲ್ಲಿ ಸಭೆ ಸೇರಿ ಮುಂದಿನ ಹೋರಾಟಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಕೆದೂರು ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಉಳ್ತೂರು ಮಾತನಾಡಿ, ಕೆದೂರು ಗ್ರಾ.ಪಂ ವ್ಯಾಪ್ತಿಯ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 3 ಕಿಲೋ ಮೀಟರ್ ದೂರದಲ್ಲಿರುವ ಉಳ್ತೂರು ಗ್ರಾಮದ 219/2 ಸರ್ವೇ ನಂಬರ್‌ನಲ್ಲಿ ಸಾಲಿಗ್ರಾಮ ಪ.ಪಂ. ಸ್ಥಳೀಯರಿಂದ 2 ಎಕರೆ 17 ಸೆಂಟ್ಸ್ ಜಾಗ ಖರೀದಿಸಿ 2012 ರಲ್ಲಿ ದ್ರವ ತ್ಯಾಜ್ಯ ಘಟಕ ನಿರ್ಮಿಸಲು ಮುಂದಾದಾಗ ಸ್ಥಳೀಯರು ಪ್ರಬಲವಾಗಿ ವಿರೋಧಿಸಿ ಪ್ರತಿಭಟನೆಯೂ ನಡೆದಿತ್ತು. ಇದೀಗಾ ಮತ್ತೆ ಅದೇ ಸ್ಥಳದಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲು ಕಾಮಗಾರಿ ನಡೆಸಲು ಮುಂದಾಗಿದ್ದಾರೆ. ಈ ಜನವಿರೋಧಿ ನೀತಿ ಸರಿಯಲ್ಲ. ಈ ಬಗ್ಗೆ ಕಾನೂನು ಹೋರಾಟಕ್ಕೂ ಸಿದ್ಧರಿದ್ದು ಅಗತ್ಯಬಿದ್ದರೆ ಡಿಸಿ ಕಚೇರಿ, ಸಾಲಿಗ್ರಾಮ ಪ.ಪಂ. ಎದುರು ಧರಣಿ ಕೂರುತ್ತೇವೆ ಎಂದರು.
ಕೊರಗ ಸಮುದಾಯದ ಮುಖಂಡ ಗಣೇಶ್ ವಿ., ಕೆದೂರು ಗ್ರಾ.ಪಂ ಮಾಜಿ ಅಧ್ಯಕ್ಷರಾದ ಸಂಪತ್ ಕುಮಾರ್ ಶೆಟ್ಟಿ, ಶರತ್ ಕುಮಾರ್ ಹೆಗ್ಡೆ, ಮಾಜಿ ಉಪಾಧ್ಯಕ್ಷೆ ಜ್ಯೋತಿ ದೇವಾಡಿಗ, ನ್ಯಾಯವಾದಿ ಅವಿನಾಶ್ ಶೆಟ್ಟಿ ಬೇಳೂರು, ಪ್ರಮುಖರಾದ ಸುಧೀರ್ ಮಲ್ಯಾಡಿ, ಪ್ರತಾಪ್ ಶೆಟ್ಟಿ ಉಳ್ತೂರು ಮೊದಲಾದವರು ಮಾತನಾಡಿ ಘಟಕಕ್ಕೆ ವಿರೋಧ ವ್ಯಕ್ತಪಡಿಸಿದರು.
ಸ್ಥಳಕ್ಕಾಗಮಿಸಿದ ಪ್ರದೀಪ್ ಕುರುಡೇಕರ್ ಗ್ರಾಮಸ್ಥರ ಸಮಸ್ಯೆ ಆಲಿಸಿದ್ದು ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಅರುಣ್ ಕುಮಾರ್ ಶೆಟ್ಟಿ ಕೆದೂರು, ಗಣೇಶ್ ಶೆಟ್ಟಿ, ದಿನೇಶ್ ಶೆಟ್ಟಿ ದೇಲಟ್ಟು, ಜಯಶೀಲ ಶೆಟ್ಟಿ ಹಲ್ತೂರು, ಶ್ರೀನಾಥ ತೆಕ್ಕಟ್ಟೆ, ವಿಜಯ ಶೆಟ್ಟಿ ಹಲ್ತೂರು, ಸುಧಾಕರ ಶೆಟ್ಟಿ ಶಾನಾಡಿ, ಶ್ರೀನಿವಾಸ ಮಲ್ಯಾಡಿ, ನವೀನ್ ಹೆಗ್ಡೆ ಶಾನಾಡಿ, ಸಫಲ್ ಶೆಟ್ಟಿ, ಚಂದ್ರ ಶೆಟ್ಟಿ, ಮಹೇಶ್ ಶೆಟ್ಟಿ ಉಳ್ತೂರು ಮೊದಲಾದವರಿದ್ದರು.
ವಿಷ ಕೊಡಿ: ಡಿಸಿಗೆ ಭಾವನಾತ್ಮಕ ಮನವಿ ಪತ್ರ“: ಜನವಸತಿ ಪ್ರದೇಶದ ನಡುವಿನಲ್ಲಿ ಇಂತಹ ಘಟಕ ಮಾಡಹೊರಟಿರುವುದು ಸರಿಯಲ್ಲ ಮೇಡಂ. ಈ ಜಾಗದ ಒಂದು ಕಿಮಿ ವ್ಯಾಪ್ತಿಯಲ್ಲಿ ಉಳ್ತೂರು ಗ್ರಾಮದ ಮಲ್ಯಾಡಿ ಪಕ್ಷಿಧಾಮವಿದೆ. ಇಲ್ಲಿಗೆ ದೇಶ ವಿದೇಶಗಳ ಪಕ್ಷಿಗಳು ಬರುತ್ತವೆ. ಅದೇ ಒಂದು ಕಿ.ಮಿ ವ್ಯಾಪ್ತಿಯಲ್ಲಿ ಸಾವಿರಾರು ಜನರಿದ್ದಾರೆ ಜಾನುವಾರುಗಳಿವೆ. ಹಾಗಾದರೆ ನಮ್ಮ ಜೀವಕ್ಕೆ ಬೆಲೆ ಇಲ್ಲವಾ? ಸದ್ಯಕ್ಕೆ ನೀವು ಗುರುತಿಸಿರುವ ಜಾಗ ಈ ಎಲ್ಲಾ ಜಾಗಗಳಿಂತ ಎತ್ತರದಲ್ಲಿ ಇರೋದು. ಸಂಸ್ಕರಣಾ ಘಟಕದ ವಿಷಯುಕ್ತ ಕೊಳಕು ನೀರು ಸೇರೋದು ನಮ್ಮ ಬಾವಿ ತೋಡು ಕೆರೆಗಳನ್ನೇ ಅಲ್ಲವಾ.? ನಾವೆಂತ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜನರ ಮನೆಯ ತ್ಯಾಜ್ಯದ ನೀರನ್ನು ಬಳಸಬೇಕಾ? ನಾವೆಲ್ಲ ಶಾಲೆಗೆ ಹೋಗುವಾಗ ಪರಿಸರ ಉಳಿದರೆ ನಾವು ಉಳಿಯುತ್ತೇವೆ ಅಂತ ಕೇಳಿ ಅದೇ ಪರಿಸರ ಜೊತೆ ಬದುಕುವವರು. ನಮಗೂ ಬದುಕಲು ಬಿಡಿ. ನಮ್ಮ ಊರು ಕಸದ ಗುಡ್ಡೆಯಾಗದಿರಲಿ. ಮತ್ತೆ ನಾವು ಬದುಕುವುದಾದರೆ ಆರೋಗ್ಯ ಪರಿಸರದಲದಲ್ಲಿ ಬದುಕುತ್ತೆವೆ. ಇಲ್ಲಿ ತಂದು ಎಸೆಯುವ ಮಲತ್ಯಾಜ್ಯದಿಂದ ಉಂಟಾಗುವ ಮಾರಕರೋಗಗಳಿಗೆ ನಮ್ಮನ್ನ ಬಲಿಕೊಡದಿರಿ. ನೀವು ಮಾತೃ ಹೃದಯಿ ಅನ್ನೋದು ನಮಗೆ ಗೊತ್ತಿದ್ದೇ ಈ ಪತ್ರ ಬರೆಯುತ್ತಿದ್ದೇವೆ. ನಮ್ಮ ಆರೋಗ್ಯ ಕೂಡ ನಿಮ್ಮದೇ ಕಾಳಜಿ ಅಲ್ವಾ.. ಹಾಗಾಗಿ ಈ ಮಲತ್ಯಾಜ್ಯ ಸಂಸ್ಕರಣ ಘಟಕ ಯೋಜನೆಯನ್ನು ಪ್ರಸ್ತಾವಿತ ಪ್ರದೇಶದಲ್ಲೇ ಮಾಡಿ…ನಮ್ಮೂರಿಗೆ ಈ ಅನಿಷ್ಠದಿಂದ ಮುಕ್ತಿಕೊಡಿ.. ಇದು ನಮ್ಮ ಸವಿನಯ ಕೋರಿಕೆ..ನೀವು ಇದನ್ನ ಮನ್ನಿಸಲೇಬೇಕು.. ಯಾಕೆ ಗೊತ್ತಾ? ಮಕ್ಕಳ ಕೋರಿಕೆಯನ್ನು ತಾಯಿ ಇಲ್ಲ ಎಂದಾಳೆ? ಇನ್ನು ಕಾನೂನು, ಪೊಲೀಸ್ ಮುಖಾಂತರ ಒತ್ತಾಯ ಪೂರ್ವಕವಾಗಿ ಈ ಯೋಜನೆಯನ್ನು ಪೂರ್ಣವಾಗಿಸುವುದಾದರೆ ಅಡ್ಡಿಲ್ಲ ಮಾಡಿ. ಬಟ್ ಅದಕ್ಕಿಂತ ಮೊದಲು ನಮಗೊಂದಿಷ್ಟು ವಿಷ ಕೊಟ್ಟು ಬಿಡಿ. ಒಂದೇ ಸಲ ಸತ್ತು ಮಲಗುತ್ತೇವೆ. ಜೀವನ ಪೂರ್ತಿ ಸಾಯೋದಕ್ಕಿಂತ ಒಮ್ಮೆ ಸಾಯೋದು ಮಿಗಿಲು..” ನಮ್ಮ ಪ್ರದೇಶದ ಜನರ ಭಾವನೆ ಮತ್ತು ಸಂಕಷ್ಟವನ್ನು ಗೌರವಿಸಿ, ಈ ವಿಷಯದಲ್ಲಿ ನ್ಯಾಯಯುತ ಹಾಗೂ ಮಾನವೀಯ ನಿರ್ಧಾರ ತೆಗೆದುಕೊಳ್ಳುವಂತೆ ಕೋರಿಕೊಳ್ಳುತ್ತೇವೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಬರೆದ ಭಾವನಾತ್ಮಕ ಮನವಿ ಪತ್ರದ ಸಾರಾಂಶ.
ಆಚೆ ಮನೆಯ ಮಲ ತ್ಯಾಜ್ಯವನ್ನು ಈಚೆ ಮನೆಗೆ ತಂದು ಎಸೆದಂತೆ ಸಾಲಿಗ್ರಾಮ ಪ.ಪಂ ವರ್ತಿಸುತ್ತಿದೆ. ಉಳ್ತೂರಿನ ಜನವಸತಿ ಪ್ರದೇಶದಲ್ಲಿ ಈ ಘಟಕ ನಿರ್ಮಾಣ ಸರಿಯಲ್ಲ. ಇದಕ್ಕಾಗಿ ಕಾನೂನು ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಬೇಕು.ಗ್ರಾಮದ ಜನರು ಸಂಘಟಿತರಾಗಿ ಹೋರಾಡಬೇಕು. ಎಂ.ಆರ್.ಎಫ್ ಘಟಕ ನಿರ್ಮಾಣದ ವಿರುದ್ಧವೂ ಹೋರಾಟ ಅನಿವಾರ್ಯ.– ಗಣೇಶ್ ವಿ. (ಕೊರಗ ಮುಖಂಡ)
ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಮಲತ್ಯಾಜ್ಯವನ್ನು ಸಂಸ್ಕರಿಸುವ ಘಟಕ ಉಳ್ತೂರಿನಲ್ಲಿ ನಿರ್ಮಿಸಲು ಉದ್ದೇಶಿಸಿ ಕೆಲಸ ಕೈಗೊಂಡಿದ್ದು ಇದಕ್ಕೆ ನಮ್ಮೆಲ್ಲರ ತೀವೃ ವಿರೋಧವಿದೆ. ಈ ಬಗ್ಗೆ ಕೆಲ ದಿನಗಳ ಹಿಂದೆ ಭೇಟಿ ನೀಡಿದ್ದ ಡಿಸಿ ಅವರ ಗಮನಕ್ಕೂ ತಂದಿದ್ದೇವೆ. ಆರೋಗ್ಯವಂತರಾಗಿ ಎಲ್ಲರೂ ಬಾಳಿ ಬದುಕಬೇಕಾದಲ್ಲಿ ಇಂತಹ ಅವೈಜ್ಞಾನಿಕ ಅವ್ಯವಸ್ಥೆ ಮಾಡುವುದು ಸರಿಯಲ್ಲ. ಜನ ವಿರೋಧದ ಹೊರತಾಗಿಯೂ ಮುಂದುವರಿದಲ್ಲಿ ಸಾಲಿಗ್ರಾಮ ಪ.ಪಂ ಎದುರು ಧರಣಿ ಕೂರುತ್ತೇವೆ.– ಅವಿನಾಶ್ ಉಳ್ತೂರು (ಸಾಮಾಜಿಕ ಕಾರ್ಯಕರ್ತ)
ಪ.ಜಾತಿ, ಪ.ಪಂಗಡದ ಹಲವಾರು ಮನೆಗಳಿದೆ. ಮಹಾಲಿಂಗೇಶ್ವರ ದೇವಸ್ಥಾನ, ಮಲ್ಯಾಡಿ ಪಕ್ಷಿಧಾಮ, ಹತ್ತಾರು ದೈವಸ್ಥಾನಗಳು, ಸರಕಾರಿ ಶಾಲೆ, ಅಂಗನವಾಡಿ, ವಾಣಿಜ್ಯ ಕಟ್ಟಡ, ಬ್ಯಾಂಕು, ಹಾಲು ಉತ್ಪಾದಕರ ಸಂಘ ಮೊದಲಾದವುಗಳಿದೆ. ಕೃಷಿ ಹೈನುಗಾರಿಕೆಯನ್ನ ಅವಲಂಬಿಸಿದ ಮಧ್ಯಮ ವರ್ಗದ 10 ಸಾವಿರಕ್ಕೂ ಅಧಿಕ ಜನರು ಈ ಊರಿನಲ್ಲಿದ್ದಾರೆ. ಯಾವುದೇ ಕಾರಣಕ್ಕೂ ಮಲ ತ್ಯಾಜ್ಯ ಸಂಸ್ಕರಣಾ ಘಟಕ ಈ ಭಾಗದಲ್ಲಿ ನಿರ್ಮಿಸಲು ಬಿಡುವುದಿಲ್ಲ. ಈ ಬಗ್ಗೆ ನಿರಂತರವಾದ ಹೋರಾಟಕ್ಕೂ ಸಿದ್ಧ. –ಜ್ಯೋತಿ ದೇವಾಡಿಗ, ಸುಮತಿ ದೇವಾಡಿಗ (ಗ್ರಾಮಸ್ಥರು)
Comments are closed.