ಕರಾವಳಿ

ಕೊಲ್ಲೂರು ಗಂಗೆ ಕೊರಗರ ಮನೆ ಧ್ವಂಸ ಪ್ರಕರಣ: ಪುನರ್ವಸತಿಗಾಗಿ 10 ಸೆಂಟ್ಸ್ ಜಾಗ ಮಂಜೂರು‌ ಮಾಡಿ ಜಿಲ್ಲಾಧಿಕಾರಿ ಆದೇಶ

Pinterest LinkedIn Tumblr

ಕುಂದಾಪುರ: ಇತ್ತೀಚೆಗೆ ಕೊಲ್ಲೂರು‌ ನಿವಾಸಿ ಕೊರಗ ಸಮುದಾಯದ ಗಂಗೆ ಕೊರಗ ಎನ್ನುವರ ಮನೆ ಧ್ವಂಸಗೊಳಿಸಿದ ಬಗ್ಗೆ ಬಾರೀ ಚರ್ಚೆಯಾಗಿದ್ದು ದಲಿತ ಸಂಘಟನೆಗಳು ಹಾಗೂ ಕೊರಗ ಶ್ರೆಯೋಭಿವೃದ್ಧಿ‌‌ಸಂಘ ಪ್ರತಿಭಟನೆ ನಡೆಸಿದ್ದಲ್ಲದೆ ಸಂಬಂದಪಟ್ಟ ಮೇಲಾಧಿಕಾರಿಗಳಿಗೆ ನ್ಯಾಯಕ್ಕಾಗಿ ಮನವಿ ನೀಡಿದ್ದರು. ಪ್ರಸ್ತುತ ಗಂಗೆ ಕೊರಗ ಅವರಿಗೆ ಪುನರ್ವಸತಿಗಾಗಿ 10 ಸೆಂಟ್ಸ್ ಜಾಗವನ್ನು ಮಂಜೂರು‌ ಮಾಡಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.

ಆದೇಶದಲ್ಲಿ ಏನಿದೆ?: ಗಂಗೆ ಕೊರಗ ಅವರು ಭೂ ರಹಿತರಾಗಿರುವುದರಿಂದ ಈ ಹಿಂದೆ ವಾಸ್ತವ್ಯವಿದ್ದ ವಾಸ್ತವ್ಯದ ಮನೆ ಧ್ವಂಸಗೊಂಡಿರುವ ಹಿನ್ನಲೆಯಲ್ಲಿ, ಇವರಿಗೆ ಪುನರ್ ವಸತಿ ಸೌಕರ್ಯ ಕಲ್ಪಿಸಿಕೊಡುವ ಉದ್ದೇಶದಿಂದ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969 ರ ನಿಯಮ 5(ಎ) ರಡಿ ತಾಲ್ಲೂಕಿನಲ್ಲಿ ಶೇಕಡಾ 50 ಕ್ಕಿಂತ ಕಡಿಮೆಯಾಗದ ರೀತಿಯಲ್ಲಿ ಅನುಸೂಚಿತ ಜಾತಿಯ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಭೂಮಿಗಳನ್ನು ಮಂಜೂರಾತಿಗೆ ಮೀಸಲಿಡಲು ಅವಕಾಶ ಕಲ್ಪಿಸಿರುವಂತೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಕರ್ನಾಟಕ ಭೂ ಕಂದಾಯ ಮಂಜೂರಾತಿ ನಿಯಮಗಳು, 1969 ರ ನಿಯಮ 12(4) ರಂತೆ ಭೂ ಮೌಲ್ಯವನ್ನು ವಿನಾಯಿತಿಗೊಳಿಸಿ ಷರತ್ತುಗಳಿಗೆ ಒಳಪಟ್ಟು ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ ಸ.ನಂ. 121/* ರಲ್ಲಿ 0.10 ಎಕರೆ (10 ಸೆಂಟ್ಸ್) ಜಮೀನನ್ನು ಪರಿಶಿಷ್ಟ ಪಂಗಡದ ಗಂಗೆ ಅವರಿಗೆ ಪುನ‌ರ್ ವಸತಿ ಸೌಕರ್ಯ ಕಲ್ಪಿಸಲು ಜಮೀನು ಮಂಜೂರು ಮಾಡಿ ಆದೇಶಿಸಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸಹಾಯಕ ಆಯುಕ್ತರಿಂದ ಪ್ರಸ್ತಾವನೆ: ಗಂಗೆ ಕೊರಗ ಅವರು ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ ಸರ್ವೆ ನಂಬ್ರ 121/* ರಲ್ಲಿ ಹಲವು ವರ್ಷಗಳಿಂದ ವಾಸ್ತವ್ಯದ ಮನೆ ಕಟ್ಟಿಕೊಂಡು ಮಕ್ಕಳೊಂದಿಗೆ ವಾಸ್ತವ್ಯ ಮಾಡಿಕೊಂಡಿದ್ದು ಅವರ ವಾಸ್ತವ್ಯದ ಮನೆಯನ್ನು ಧ್ವಂಸ ಮಾಡಿರುವುದರಿಂದ ಅವರಿಗೆ ಪುನ‌ರ್ ವಸತಿ ಸೌಕರ್ಯ ಕಲ್ಪಿಸಿಕೊಡಲು ಕೊಲ್ಲೂರು ಗ್ರಾಮದ ಸ.ನಂಬ್ರ 121/ *ರಲ್ಲಿ 0.10 ಎಕ್ರೆ ಸ್ಥಳವನ್ನು ದರ್ಖಾಸ್ತು ಮಂಜೂರು ಮಾಡುವ ಬಗ್ಗೆ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರು ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಈ ಪ್ರಸ್ತಾವನೆಯಲ್ಲಿ ಸರ್ವೆ ನಂಬ್ರ 121/* ರಲ್ಲಿ ಮೂಲ ಆಕಾರ್ ಬಂದ್ ನಂತೆ 6788.40 ಎಕ್ರೆ ಜಮೀನಿದ್ದು, ಈ ಜಮೀನಿನಲ್ಲಿ 10.00 ಎಕ್ರೆ ಜಮೀನು ಗೋಮಾಳ ಉದ್ದೇಶಕ್ಕಾಗಿ ಮಂಜೂರಾತಿಯಾಗಿ ಪೋಡಿ ದುರಸ್ಥಿಯಾಗಿರುತ್ತದೆ. ಹಾಗೂ ಜಗದಾಂಬಾ ಸೇವಾ ಟ್ರಸ್ಟ್ ಗೆ 1.50 ಎಕ್ರೆ ಮಂಜೂರಾಗಿ ಪೋಡಿಯಾಗಿ ದುರಸ್ತಿಯಾಗಿರುತ್ತದೆ. ಪಹಣಿಯಲ್ಲಿ ಉಳಿಕೆ ವಿಸ್ತೀರ್ಣವು 6776.90 ಎಕ್ರೆ ದಾಖಲಿರುತ್ತದೆ. ಸದ್ರಿ ಜಮೀನಿನಲ್ಲಿ ಒಟ್ಟು 231 ಜನರಿಗೆ 43.085 ಎಕ್ರೆ ಜಮೀನು ಅಕ್ರಮ-ಸಕ್ರಮ, 94ಸಿ, ಅರಣ್ಯ ಹಕ್ಕು ಕಾಯ್ದೆಯಂತೆ ಮಂಜೂರಾಗಿರುತ್ತದೆ. ಪ್ರಸ್ತುತ ಪಹಣಿಯಲ್ಲಿ. 15.08.75 ಎಕ್ರೆ ಸರಕಾರಿ ವಿಸ್ತೀರ್ಣವಿದ್ದು, ಪಹಣಿ ಕಾಲಂ 06 ರಲ್ಲಿ ಫೋರಂಬೋಕು ಅರಣ್ಯ ಎಂದು ನಮೂದು ಇರುತ್ತದೆ. ಗಂಗೆ ಕೋಂ ರಾಮ ಎಂಬುವವರಿಗೆ ಮಂಜೂರಾತಿಗೆ ಪ್ರಸ್ತಾಪಿಸಿರುವ ಸ್ಥಳದಲ್ಲಿ ತೆಂಗಿನ ಮರ-3, ಹೊನಗಲು ಮರ-2, ಚಾಪೆ ಮರ-1, ಹಯ ಮರ-1 ಇರುತ್ತದೆ. ಈ ಸ್ಥಳವು ಶ್ರೀ ಜಗದಾಂಬಾ ಸೇವಾ ಟ್ರಸ್ಟ್ ರವರಿಗೆ ಮಂಜೂರಾತಿಯಾದ ಸ್ಥಳದ ಹೊರತುಪಡಿಸಿರುವುದು ಮೋಜಣಿ ನಕ್ಷೆಯಿಂದ ಕಂಡುಬಂದಿರುತ್ತದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದ್ದು. ಪಂಚಾಯತ್ ನಿಂದ ನಿರಾಕ್ಷೇಪಣಾ ಪತ್ರ ನೀಡಿರುವುದಾಗಿದೆ.

ಈ ಸ್ಥಳವು ಗ್ರಾಮ ಪಂಚಾಯತ್ ರಸ್ತೆಗೆ ಹೊಂದಿಕೊಂಡಿರುತ್ತದೆ. ಅರ್ಜಿದಾರರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು, ಅವರ ವಾರ್ಷಿಕ ಆದಾಯ ರೂ. 11,000/-ಇರುವುದಾಗಿದೆ. ಅರ್ಜಿದಾರರು ಕೊಲ್ಲೂರು ಗ್ರಾಮದಲ್ಲಿ ಬೇರೆ ಯಾವುದೇ ರೀತಿಯ ಜಮೀನನ್ನು ಹೊಂದಿರುವುದಿಲ್ಲ. ಆದ್ದರಿಂದ ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ ಸ.ನಂ. 121/* ರಲ್ಲಿ 0.10 ಎಕರೆ ಜಮೀನನ್ನು ಪ.ಪಂಗಡದ ಗಂಗೆ ಕೊರಗ ಇವರಿಗೆ ಪುನರ್ ವಸತಿ ಸೌಕರ್ಯ ಕಲ್ಪಿಸಿಕೊಡುವ ಉದ್ದೇಶದಿಂದ ವಿಶೇಷ ಪ್ರಕರಣ ಎಂದು ಪರಿಗಣಿಸಿ ದರ್ಖಾಸ್ತು ಮಂಜೂರು ಮಾಡಲು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರ ಶಿಫಾರಸ್ಸು ಮಾಡಿ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.

 

Comments are closed.